ರೈಲ್ವೇ ನೇಮಕಾತಿ: ಗ್ರೂಪ್ ಡಿ ಹುದ್ದೆಗೆ ಕನಿಷ್ಟ ವಿದ್ಯಾರ್ಹತೆಯಲ್ಲಿ ಇಳಿಕೆ
ಹೊಸದಿಲ್ಲಿ, ಫೆ.23: ರೈಲ್ವೇಯಲ್ಲಿ ಗ್ರೂಪ್ ಡಿ ಹುದ್ದೆಯನ್ನು ಪಡೆಯಲು ಇರುವ ಕನಿಷ್ಟ ವಿದ್ಯಾರ್ಹತೆಯಲ್ಲಿ ರೈಲ್ವೇ ನೇಮಕಾತಿ ಮಂಡಳಿಯು ಇಳಿಕೆ ಮಾಡಿದೆ. ಹೊಸ ಅಧಿಸೂಚನೆಯ ಪ್ರಕಾರ, ಗ್ರೂಪ್ ಡಿ ಹುದ್ದೆಯ ಅರ್ಜಿಯನ್ನು ತುಂಬಲು ಅಭ್ಯರ್ಥಿಯು 10ನೇ ತರಗತಿ ತೇರ್ಗಡೆಯಾಗಿರಬೇಕು.
ಇತ್ತೀಚೆಗೆ, ರೈಲ್ವೇಯು ಸಹಾಯಕರು ಮತ್ತು ಟ್ರಾಕ್‌ಮ್ಯಾನ್ ಸೇರಿದಂತೆ ಇತರ ಹಲವು ಲೆವೆಲ್ ವನ್ ಹಂತದ 62,907 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಕಳೆದ ವರ್ಷದವರೆಗೆ ಕನಿಷ್ಟ ಅರ್ಹತೆಯು 10ನೇ ತರಗತಿ ಮತ್ತು ಕೈಗಾರಿಕಾ ತರಬೇತಿ ಸಂಸ್ಥೆ ಅಥವಾ ತತ್ಸಮಾನ ಪ್ರಮಾಣ ಪತ್ರವನ್ನು ಹೊಂದಿರಬೇಕು. ಈಗ ರೈಲ್ವೇಯು ಕೈಗಾರಿಕಾ ತರಬೇತಿ ಪ್ರಮಾಣ ಪತ್ರವನ್ನು ಕೈಬಿಟ್ಟಿದ್ದು ಕೇವಲ 10ನೇ ತರಗತಿಯನ್ನಷ್ಟೇ ಕನಿಷ್ಟ ಅರ್ಹತೆಯನ್ನಾಗಿ ನಿಗದಿಪಡಿಸಿದೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ರೈಲ್ವೇ ಸಚಿವ ಪಿಯೂಷ್ ಗೋಯಲ್, ಆಯ್ಕೆಯ ಮಾನದಂಡ ಬದಲಾಗಿದೆ ಎಂಬುದನ್ನು ತಿಳಿಯಲು ನಾವು ಅಭ್ಯರ್ಥಿಗಳಿಗೆ ಸಾಕಷ್ಟು ಸಮಯ ನೀಡಿಲ್ಲ ಎಂಬುದು ನಮಗೆ ಅರಿವಾಗಿದೆ. ಹಾಗಾಗಿ ಅರ್ಹತೆಯನ್ನು 10ನೇ ತರಗತಿಗೆ ಇಳಿಸಿರುವುದಾಗಿ ತಿಳಿಸಿದ್ದಾರೆ. ಹುದ್ದೆಗಳ ಬಗ್ಗೆ ಅಧಿಸೂಚನೆ ಹೊರಡಿಸಿದ ದಿನದಿಂದಲೂ ಅಭ್ಯರ್ಥಿಗಳಿಂದ ದೂರಗಳನ್ನು ಪಡೆಯುತ್ತಲೇ ಇದ್ದೇವೆ. ಈ ದೂರುಗಳಲ್ಲಿ ಅಭ್ಯರ್ಥಿಗಳು ಗ್ರೂಪ್ ಡಿ ಉದ್ಯೋಗಕ್ಕೆ ಅಗತ್ಯ ಅರ್ಹತೆಯಲ್ಲಿ ಬದಲಾವಣೆ ಮಾಡಿರುವ ಬಗ್ಗೆ ರೈಲ್ವೇ ಸಾರ್ವಜನಿಕರಿಗೆ ಮಾಹಿತಿ ನೀಡಿಲ್ಲ ಮತ್ತು 2017ರ ಜೂನ್-ಜುಲೈಯಲ್ಲಿ ಐಟಿಐ ಅಥವಾ ತತ್ಸಮಾನ ಅರ್ಹತೆಯ ಅಗತ್ಯವನ್ನು ಸೇರಿಸಿರುವ ಬಗ್ಗೆಯೂ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದ್ದರು. ಹಾಗಾಗಿ ಸದ್ಯ ಅರ್ಹತೆಯಲ್ಲಿ ಸಡಿಲಿಕೆ ಮಾಡಲಾಗಿದೆ. ಈಗ ಹತ್ತನೇ ತರಗತಿ ತೇರ್ಗಡೆಯಾದ ವಿದ್ಯಾರ್ಥಿ ಕೂಡಾ ಗ್ರೂಪ್ ಡಿ ಹುದ್ದೆಗೆ ಅರ್ಜಿ ಹಾಕಬಹುದಾಗಿದೆ ಎಂದು ಗೋಯಲ್ ತಿಳಿಸಿದ್ದಾರೆ. ಇದರ ಜೊತೆಗೆ ಇಲಾಖೆಯು ಎಲ್ಲ ವರ್ಗದ ಅಭ್ಯರ್ಥಿಗಳಿಗೆ ವಯಸ್ಸಿನ ನಿಬಂಧನೆಯಲ್ಲೂ ಸಡಿಲಿಕೆ ಮಾಡಿದ್ದು ಈ ಬದಲಾವಣೆ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾಗಿದೆ. ಈ ಎಲ್ಲ ಬದಲಾವಣೆಗಳ ಮೂಲಕ ಹೆಚ್ಚುಹೆಚ್ಚು ಜನರು ರೈಲ್ವೇಯಲ್ಲಿ ಹುದ್ದೆಗೆ ಅರ್ಜಿ ಹಾಕುವಂತೆ ಇಲಾಖೆಯು ಪ್ರೋತ್ಸಾಹಿಸುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.