×
Ad

ಪ್ರವಾಸಿಗರಿಗೆ ಜಮ್ಮು-ಕಾಶ್ಮೀರ ಸಂಪೂರ್ಣ ಸುರಕ್ಷಿತ ರಾಜ್ಯ

Update: 2018-02-23 22:16 IST

 ಶ್ರೀನಗರ, ಫೆ.23: ಜಮ್ಮು ಮತ್ತು ಕಾಶ್ಮೀರವು ಪ್ರವಾಸಿಗರಿಗೆ ಸಂಪೂರ್ಣ ಸುರಕ್ಷಿತ ತಾಣವಾಗಿದೆ ಮತ್ತು ರಾಜ್ಯದ ಗಡಿಭಾಗದಲ್ಲಿ ಉದ್ಭವಿಸುವ ಉದ್ವಿಗ್ನತೆ ಇಲ್ಲಿನ ಪ್ರವಾಸಿ ಸಮುದಾಯದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಕಾಶ್ಮೀರ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಎಂ.ಎ ಶಾ ಕೊಲ್ಕತ್ತಾದಲ್ಲಿ ತಿಳಿಸಿದ್ದಾರೆ.

 ಕಳೆದ ವರ್ಷ ಅಮರನಾಥ ಯಾತ್ರಿಕರ ಮೇಲೆ ನಡೆದ ದಾಳಿಯು ಪ್ರವಾಸಿಗರನ್ನು ಹೆದರಿಸಲು ನಡೆಸಿದ ಕೃತ್ಯವಾಗಿದೆ ಎಂದವರು ಸ್ಪಷ್ಟಪಡಿಸಿದ್ದಾರೆ. ಕಳೆದ ವರ್ಷದ ಅಮರನಾಥ ಯಾತ್ರಿಕರ ಮೇಲಿನ ದಾಳಿಯ ಹೊರತಾಗಿ, ರಾಜ್ಯದಲ್ಲಿರುವ ಪ್ರವಾಸಿ ತಾಣಗಳಾದ ಜಮ್ಮು, ವೈಷ್ಣೋದೇವಿ, ಸೋನೆಮಾರ್ಗ್, ಗುಲ್ಮಾಗ್ ಅಥವಾ ಲಡಾಕ್‌ನಲ್ಲಿ ಕಳೆದ ಒಂದು ದಶಕದಲ್ಲಿ ಯಾವುದೇ ಹಿಂಸಾಚಾರವು ನಡೆದಿಲ್ಲ ಎಂದು ಶಾ ತಿಳಿಸಿದ್ದಾರೆ. ಕಣಿವೆ ರಾಜ್ಯದ ಪ್ರತಿನಿಧಗಳೊಂದಿಗೆ ಕೊಲ್ಕತ್ತಾಕ್ಕೆ ಭೇಟಿ ನೀಡಿರುವ ಶಾ, ಪ್ರವಾಸಿಗರ ವಿರುದ್ಧ ದೌರ್ಜನ್ಯದ ಒಂದೇ ಒಂದು ಪ್ರಕರಣ ದಾಖಲಾಗದ ಏಕೈಕ ರಾಜ್ಯ ಜಮ್ಮು ಮತ್ತು ಕಾಶ್ಮೀರ ಎಂದು ಅಭಿಪ್ರಾಯಪಟ್ಟಿದ್ದಾರೆ. 2017ರಲ್ಲಿ ಒಂದು ಲಕ್ಷ ವಿದೇಶಿ ಪ್ರವಾಸಿಗರು ರಾಜ್ಯಕ್ಕೆ ಆಗಮಿಸಿದ್ದರೆ ದೇಶಿ ಪ್ರವಾಸಿಗರ ಸಂಖ್ಯೆ ಕೋಟಿಯನ್ನು ಮೀರಿದೆ. ರಾಜ್ಯಕ್ಕೆ ಗುಜರಾತ್‌ನಿಂದ ಅತ್ಯಧಿಕ ಪ್ರವಾಸಿಗರು ಆಗಮಿಸುತ್ತಾರೆ, ನಂತರದ ಸ್ಥಾನ ಪಶ್ಚಿಮ ಬಂಗಾಳದ್ದಾಗಿದೆ ಎಂದು ಶಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News