ಧನುಷ್ ಬಾಲಿಸ್ಟಿಕ್ ಕ್ಷಿಪಣಿ ಯಶಸ್ವಿ ಪರೀಕ್ಷೆ ನಡೆಸಿದ ಭಾರತ
ಬಾಲಸೋರ್ (ಒರಿಸ್ಸಾ), ಫೆ.23: ಭಾರತವು ಶುಕ್ರವಾರದಂದು ಪರಮಾಣು ಸಾಮರ್ಥ್ಯದ ಧನುಷ್ ಬಾಲಿಸ್ಟಿಕ್ ಕ್ಷಿಪಣಿಯನ್ನು ಒರಿಸ್ಸಾದ ಕರಾವಳಿ ತೀರದಲ್ಲಿರುವ ನೌಕಾ ನೆಲೆಯಲ್ಲಿ ಯಶಸ್ವಿ ಪರೀಕ್ಷೆ ನಡೆಸಿರುವುದಾಗಿ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಸ್ವದೇಶಿ ನಿರ್ಮಿತ ಪೃಥ್ವಿ ಕ್ಷಿಪಣಿಯ ನೌಕಾಪಡೆಯ ರೂಪಾಂತರವಾಗಿರುವ, ಭೂಮಿಯಿಂದ ಭೂಮಿಗೆ ಹಾರಬಲ್ಲ ಧನುಷ್ ಕ್ಷಿಪಣಿಯನ್ನು ಶುಕ್ರವಾರ ಬೆಳಿಗ್ಗೆ 10.52 ಗಂಟೆಗೆ ಬಂಗಾಳ ಕೊಲ್ಲಿಯ ಪಾರದಿಪ್ ಸಮೀಪ ಲಂಗರು ಹಾಕಲಾಗಿದ್ದ ಹಡಗಿನಿಂದ ಪರೀಕ್ಷಾರ್ಥ ಉಡಾವಣೆ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಧನುಷ್ ಕ್ಷಿಪಣಿಯು 350 ಕಿ.ಮೀ ಅಂತರವನ್ನು ಕ್ರಮಿಸಬಲ್ಲ, 500 ಕೆ.ಜಿ ಭಾರವನ್ನು ಹೊರಬಲ್ಲ ಕ್ಷಿಪಣಿಯಾಗಿದ್ದು ಭೂಮಿ ಹಾಗೂ ಸಮುದ್ರದ ಮೇಲಿನ ಗುರಿಗಳನ್ನು ನಾಶಪಡಿಸಲು ಶಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕ್ಷಿಪಣಿ ಉಡಾವಣೆಯು ಭಾರತೀಯ ನೌಕಾಪಡೆಯ ಎಸ್‌ಎಫ್‌ಸಿ ವಿಭಾಗದ ತರಬೇತಿ ಕಾರ್ಯಕ್ರಮದ ಭಾಗವಾಗಿತ್ತು ಎಂದವರು ಸ್ಪಷ್ಟಪಡಿಸಿದ್ದಾರೆ. ಏಕ ಹಂತದ, ಧ್ರವ ಇಂಧನ ಚಾಲಿತ ಧನುಷ್ ಕ್ಷಿಪಣಿಯನ್ನು ಈಗಾಗಲೇ ಭದ್ರತಾ ಸೇವೆಗೆ ಸೇರಿಸಿಕೊಳ್ಳಲಾಗಿದೆ. ಸಂಯೋಜಿತ ಮಾರ್ಗಸೂಚಿತ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮದಡಿ ಭದ್ರತಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯು ಅಭಿವೃದ್ಧಿಪಡಿಸಿರುವ ಐದು ಕ್ಷಿಪಣಿಗಳಲ್ಲಿ ಧನುಷ್ ಒಂದಾಗಿದೆ.