ಔರಂಗಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲು
ಹೊಸದಿಲ್ಲಿ, ಫೆ.23: ಬಿಹಾರದ ಔರಂಗಬಾದ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಕನ್ವಲ್ ತನುಜ್ ಹಾಗೂ ಇತರರ ವಿರುದ್ಧ ಸಿಬಿಐ ಭ್ರಷ್ಟಾಚಾರ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಎನ್‌ಟಿಪಿಸಿಯ ವಿಭಾಗವಾಗಿರುವ ಭಾರತೀಯ ರೈಲ್ವೇ ವಿದ್ಯುತ್ ಸಂಸ್ಥೆ ನಿ. ಗಾಗಿ (ಬಿಆರ್‌ಬಿಸಿಎಲ್) ನಬಿನಗರ್ ಪ್ರದೇಶದಲ್ಲಿ ಜಮೀನು ಸ್ವಾಧೀನ ಪಡಿಸಿಕೊಳ್ಳುವಲ್ಲಿ ನಡೆಸಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಈ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಬಿಐ ಅಧಿಕಾರಿಗಳು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ನಿವಾಸದ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಸಿಬಿಐ ದಾಖಲಿಸಿರುವ ದೂರಿನ ಪ್ರಕಾರ, ಆರೋಪಿಗಳು ಏಳು ಎಕರೆ ಜಮೀನನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ. ಇದಕ್ಕಾಗಿ ಅದಾಗಲೇ ಮೃತಪಟ್ಟ ವ್ಯಕ್ತಿಯನ್ನು ಆ ಜಮೀನಿನ ಮಾಲಕ ಎಂದು ತೋರಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಅವ್ಯವಹಾರದಲ್ಲಿ ಬಿಆರ್‌ಬಿಸಿಎಲ್ ನಬಿನಗರ್‌ನ ಮುಖ್ಯ ಕಾರ್ಯಕಾರಿ ಅಧಿಕಾರಿ ಸಿ. ಶಿವಕುಮಾರ್ ಅವರು ಕನ್ವಲ್ ತನುಜ್, ಸಂಸ್ಥೆಯ ಹಾಗೂ ಜಿಲ್ಲಾಡಳಿತದ ಇತರ ಅಧಿಕಾರಿಗಳ ಜೊತೆ ಸೇರಿ ಪಿತೂರಿ ನಡೆಸಿದ್ದಾರೆ. ಹಾಗೂ ಮೃತ ಗೋಪಾಲ್ ಪ್ರಸಾದ್ ಸಿಂಗ್‌ನ ಹೆಸರನ್ನು ಬಳಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಿಹಾರ ಕೇಡರ್‌ನ ಐಎಎಸ್ ಅಧಿಕಾರಿಯಾಗಿರುವ ತನುಜ್, ಮೃತ ಗೋಪಾಲ್ ಪ್ರಸಾದ್ ಸಿಂಗ್‌ನನ್ನು ವಿವಾದಿತ ಜಮೀನಿನ ಮಾಲಕ ಎಂದು ಬಿಂಬಿಸಲು ದಾಖಲೆಗಳನ್ನು ತಿರುಚಿದ ಆರೋಪ ಎದುರಿಸುತ್ತಿದ್ದಾರೆ.