777 ಚಾರ್ಲಿಗೆ ರಕ್ಷಿತ್ ಹೀರೋ
ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ನಿರ್ಮಾಪಕ ರಾಗಿರುವ ‘ಚಾರ್ಲಿ 777’ ಚಿತ್ರದಲ್ಲಿ ಮುಖ್ಯವಾದದ್ದೊಂದು ಬದಲಾವಣೆಯಾಗಿದೆ. ಈ ಚಿತ್ರದ ನಾಯಕನಾಗಿ ಅರವಿಂದ್ ಅಯ್ಯರ್ ಆಯ್ಕೆಯಾಗಿದ್ದರು. ಚಿತ್ರದ ಪ್ರಚಾರಕ್ಕಾಗಿ ನಡೆದ ಫೋಟೊಶೂಟ್‌ನಲ್ಲೂ ಅವರು ಪಾಲ್ಗೊಂಡಿದ್ದರು. ಆದರೆ ಅದ್ಯಾಕೊ ರಕ್ಷಿತ್ ಶೆಟ್ಟಿ, ಇದೀಗ ಅರವಿಂದ್ ಅಯ್ಯರ್ ಮಾಡಬೇಕಿದ್ದ ಪಾತ್ರವನ್ನು ತಾನೇ ನಿರ್ವಹಿಸಲು ನಿರ್ಧರಿಸಿದ್ದಾರೆ. ಸದ್ಯ ಅದ್ದೂರಿ ಬಜೆಟ್‌ನ ಶ್ರೀಮನ್ನಾರಾಯಣ ಚಿತ್ರದ ಶೂಟಿಂಗ್‌ನಲ್ಲಿ ತಲ್ಲೀನರಾಗಿದ್ದಾರೆ.
ಹೊಸಬರಾದ ಕಿರಣ್‌ರಾಜ್ ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರವನ್ನು ರಕ್ಷಿತ್ ಶೆಟ್ಟಿ ಹಾಗೂ ಪುಷ್ಕರ್ ಮಲ್ಲಿಕಾರ್ಜುನ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ನೊಂದ ಯುವಕನಿಗೆ ಬೀದಿ ನಾಯಿಯೊಂದು ಸಿಗುತ್ತದೆ. ಆ ಬಳಿಕ ಆತನ ಬದುಕಿನಲ್ಲಿ ನಡೆಯುವ ಬದಲಾವಣೆಗಳ ಸುತ್ತ ತಿರುಗುವ ಈ ಚಿತ್ರದ ಚಿತ್ರೀಕರಣ ಮಾರ್ಚ್ 1ರಿಂದ ಆರಂಭಗೊಳ್ಳಲಿದೆ. ‘ಚಾರ್ಲಿ 777’ನ ನಾಯಕಿ ಸೇರಿದಂತೆ ಉಳಿದ ಪಾತ್ರವರ್ಗದ ಬಗ್ಗೆ ಚಿತ್ರತಂಡದಿಂದ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.