×
Ad

ಬಾಲಿವುಡ್‌ಗೆ ಕಿರಿಕ್ ಪಾರ್ಟಿ

Update: 2018-02-24 17:39 IST

ಕಿರಿಕ್ ಪಾರ್ಟಿ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಮೈಲುಗಲ್ಲು ನೆಟ್ಟಂತಹ ಚಿತ್ರ. ಎಲ್ಲಾ ವರ್ಗದ ಪ್ರೇಕ್ಷಕರ ಮನಸೂರೆಗೊಂಡ ಕಿರಿಕ್‌ಪಾರ್ಟಿ ಈಗ ಬಾಲಿವುಡ್‌ಗೂ ಲಗ್ಗೆಯಿಡುತ್ತಿದೆ. ಹೌದು. ರೋಮ್ಯಾಂಟಿಕ್ ಕಾಮಿಡಿ ಕಥಾವಸ್ತು ಹೊಂದಿರುವ ಈ ಚಿತ್ರ ಈಗ ಬಾಲಿವುಡ್‌ನಲ್ಲಿ ರಿಮೇಕ್ ಆಗುತ್ತಿದೆ. ಈಗ ಕೇಳಿಬರುತ್ತಿರುವ ಸುದ್ದಿಗಳ ಪ್ರಕಾರ ‘ಕಿರಿಕ್ ಪಾರ್ಟಿ’ಯ ಹಿಂದಿ ರಿಮೇಕ್‌ನಲ್ಲಿ ಜನಪ್ರಿಯ ಯುವನಟ ಸಿದ್ಧಾರ್ಥ ರಾಯ್ ನಾಯಕನಾಗಿ ನಟಿಸಲಿದ್ದಾರೆ. ನಿರ್ಮಾಪಕ ಅಜಯ್ ಕಪೂರ್ ಈಗಾಗಲೇ ಸಿದ್ಧಾರ್ಥ ರಾಯ್ ಜೊತೆ ಮಾತುಕತೆ ನಡೆಸಿದ್ದು, ಕಥೆಯನ್ನು ಕೂಡಾ ಅವರಿಗೆ ವಿವರಿಸಿದ್ದಾರೆ. ಚಿತ್ರದಲ್ಲಿ ತನಗೆ ನೀಡಲಾದ ಪಾತ್ರವನ್ನು ಸಿದ್ಧಾರ್ಥ ರಾಯ್ ತುಂಬಾ ಇಷ್ಟಪಟ್ಟಿದ್ದಾರಂತೆ. ಆದಾಗ್ಯೂ ಈ ಬಗ್ಗೆ ಅವರು ಇನ್ನಷ್ಟೇ ಕಾಲ್‌ಶೀಟ್ ನೀಡಬೇಕಿದ್ದು, ಅವರು ಗ್ರೀನ್‌ಸಿಗ್ನಲ್ ನೀಡಿದಾಕ್ಷಣ ಶೂಟಿಂಗ್ ಆರಂಭವಾಗಲಿದೆಯೆಂದು ಚಿತ್ರತಂಡದ ಅಂಬೋಣ.

ರಿಶಭ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿಯಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಾಯಕ-ನಾಯಕಿಯರಾಗಿ ನಟಿಸಿದ್ದರು. ಮೊದಲ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ತುಂಟತನ, ಪ್ರೇಮಾಲಾಪದ ಕಥೆ ಹೇಳುವ ಕಿರಿಕ್ ಪಾರ್ಟಿಯ ಬಾಲಿವುಡ್ ರಿಮೇಕ್ ಹೇಗೆ ಮೂಡಿಬರಲಿದೆಯೆಂಬುದನ್ನು ತಿಳಿಯಲು ಚಿತ್ರರಸಿಕರು ಕನಿಷ್ಠ ಒಂದು ವರ್ಷವಾದರೂ ಕಾಯಲೇಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News