ತುಮ್ಹಾರಿ ಸುಲು ತಮಿಳು ರಿಮೇಕ್ ಗೆ ಜ್ಯೋತಿಕಾ

Update: 2018-02-24 12:34 GMT

ಕಳೆದ ವರ್ಷ ಪ್ರೇಕ್ಷಕರಿಂದಲೂ, ವಿಮರ್ಶಕರಿಂದಲೂ ಮೆಚ್ಚುಗೆಗೆ ಪಾತ್ರವಾಗಿರುವ ತುಮ್ಹಾರಿ ಸುಲು ಇದೀಗ ತಮಿಳಿಗೆ ರಿಮೇಕ್ ಆಗುತ್ತಿದೆ. ಚಿತ್ರದಲ್ಲಿ ನಾಯಕಿಯಾಗಿ ಜ್ಯೋತಿಕಾ ನಟಿಸುತ್ತಿದ್ದಾರೆ. ‘ಮೋಳಿ’, ‘ಅಭಿಯುಂ ನಾನುಂ’ ಅಂತಹ ಕೆಲವು ಹೃದಯಸ್ಪರ್ಶಿ ಕಥೆಯುಳ್ಳ ಚಿತ್ರ ಗಳನ್ನು ನೀಡಿರುವ ರಾಧಾಮೋಹನ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ಬಗ್ಗೆ ಜ್ಯೋತಿಕಾ ಹಾಗೂ ರಾಧಾಮೋಹನ್ ಅಂತಿಮ ಸುತ್ತಿನ ಮಾತುಕತೆ ನಡೆಸುತ್ತಿದ್ದು, ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಪ್ರಕಟನೆೆ ಹೊರಬೀಳಲಿದೆ.

ಜ್ಯೋತಿಕಾ ಸದ್ಯ ಮಣಿರತ್ನಂ ನಿರ್ದೇಶನದ ಚಿತ್ರದ ಶೂಟಿಂಗ್‌ನಲ್ಲಿ ನಿರತರಾಗಿದ್ದರೆ, ರಾಧಾ ಮೋಹನ್ ಅವರು ಉದಯೋನ್ಮುಖ ನಟ ವಿಕ್ರಮ್ ಪ್ರಭು ನಾಯಕನಾಗಿ ರುವ ಚಿತ್ರದ ನಿರ್ದೇಶನದ ಕೆಲಸದಲ್ಲಿ ಮಗ್ನರಾಗಿದ್ದಾರೆ. ಈ ಚಿತ್ರದ ಕೆಲಸ ಪೂರ್ಣಗೊಳ್ಳುತ್ತಿದ್ದಂತೆಯೇ, ರಾಧಾಮೋಹನ್ ಅವರು ತುಮ್ಹಾರಿ ಸುಲು ಚಿತ್ರದ ರಿಮೇಕ್ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಿದ್ದಾರೆ.

ಈ ಮೊದಲು ಜ್ಯೋತಿಕಾ ಅವರು ರಾಧಾಮೋಹನ್ ನಿರ್ದೇಶನದ ಮೋಳಿ ಚಿತ್ರದಲ್ಲಿ ನಟಿಸಿದ್ದರು. ಮೋಳಿಯಲ್ಲಿ ಜ್ಯೋತಿಕಾರ ಮೂಕ ಹಾಗೂ ಕಿವುಡು ಯುವತಿಯ ಪಾತ್ರ ಭಾರೀ ಪ್ರಶಂಸೆ ಗಿಟ್ಟಿಸಿತ್ತು. ಮಹಿಳಾ ಪ್ರಧಾನ ಕಥಾವಸ್ತುವಿರುವ ಈ ಚಿತ್ರಕ್ಕೆ ವಿಮರ್ಶಕರು ಹಾಗೂ ಪ್ರೇಕ್ಷಕರ ಮುಕ್ತಕಂಠದ ಪ್ರಶಂಸೆ ದೊರೆತಿತ್ತು.

ತುಮ್ಹಾರಿ ಸುಲುವಿನಲ್ಲಿ ರೇಡಿಯೊ ಜಾಕಿಯಾಗಿ ವಿದ್ಯಾಬಾಲನ್ ಅವರ ಅಭಿನಯಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ಇದೀಗ ಆ ಪಾತ್ರ ವನ್ನು ತಮಿಳಿನಲ್ಲಿ ನಟಿಸುವುದಕ್ಕೆ ಜ್ಯೋತಿಕಾರಷ್ಟು ಉತ್ತಮ ಆಯ್ಕೆ ಮತ್ತೊಬ್ಬರಿರಲಾರರು ಎಂಬ ಮಾತುಗಳು ತಮಿಳು ಚಿತ್ರರಂಗದಲ್ಲಿ ಕೇಳಿಬರುತ್ತಿದೆ.

ಜ್ಯೋತಿಕಾ ನಾಯಕಿಯಾಗಿ ನಟಿಸಿರುವ ನಾಚಿಯಾರ್ ಕಳೆದ ವಾರ ತೆರೆಕಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News