ಭುವನೇಶ್ವರ ಎಐಐಎಂಎಸ್‌ ನಿಂದ ಕಾಶ್ಮೀರದ ವೈದ್ಯಕೀಯ ವಿದ್ಯಾರ್ಥಿ ನಾಪತ್ತೆ

Update: 2018-02-25 04:00 GMT

ಭುವನೇಶ್ವರ, ಫೆ. 25: ಇಲ್ಲಿನ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್)ನ ಎರಡನೇ ವರ್ಷದ ವೈದ್ಯಕೀಯ ವಿದ್ಯಾರ್ಥಿ ಹದಿನೈದು ದಿನಗಳಿಂದ ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹಾಗೂ ಗುಪ್ತಚರ ವಿಭಾಗ (ಐಬಿ) ಪ್ರಕರಣದ ತನಿಖೆ ಕೈಗೆತ್ತಿಕೊಂಡಿವೆ. ಮಗ ಹಿಂದಿರುಗುವುದನ್ನು ನಿರೀಕ್ಷಿಸುತ್ತಾ ಶಾಲಾ ಶಿಕ್ಷಕರಾಗಿರುವ ತಂದೆ ಒಂದು ವಾರದಿಂದ ಒಡಿಶಾದಲ್ಲಿ ಬೀಡುಬಿಟ್ಟಿದ್ದಾರೆ.

ಎಂಬಿಬಿಎಸ್ ವಿದ್ಯಾರ್ಥಿ ಸುಹೈಲ್ ಇಜಾಝ್ (20) ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯವನಾಗಿದ್ದು, ಫೆಬ್ರವರಿ 9ರಂದು ಮಧ್ಯಾಹ್ನ ಚಂಡೀಗಢಕ್ಕೆ ಸ್ನೇಹಿತನ ವಿವಾಹಕ್ಕೆ ಹೋಗುವುದಾಗಿ ಸ್ನೇಹಿತರಿಗೆ ಹೇಳಿ ಎಐಐಎಂಎಸ್ ಹಾಸ್ಟೆಲ್‌ನಿಂದ ಹೊರಟಿದ್ದ. ಫೆಬ್ರವರಿ 16ಕ್ಕೆ ವಾಪಸ್ಸಾಗುವುದಾಗಿ ಹೇಳಿದ್ದ. ಫೆಬ್ರವರಿ 18ರವರೆಗೂ ವಾಪಸ್ಸಾಗದ ಹಿನ್ನೆಲೆಯಲ್ಲಿ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಎನ್‌ಐಎ ಹಾಗೂ ಐಬಿ ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ ಎಂದು ಎಐಐಎಂಎಸ್ ಅಧಿಕಾರಿಗಳು ಹೇಳಿದ್ದಾರೆ. ಎಲ್ಲ ಮಾಹಿತಿಯನ್ನು ತನಿಖಾ ಸಂಸ್ಥೆಗಳಿಗೆ ನೀಡಲಾಗಿದೆ ಎಂದು ಸಂಸ್ಥೆಯ ಉಪ ಡೀನ್ ಡಾ.ಪ್ರಭಾಸ್ ರಾಜನ್ ಮಿಶ್ರಾ ಹೇಳಿದ್ದಾರೆ.

ತಂದೆ ಇಜಾಝ್ ಅಹ್ಮದ್ ಅವರ ವಿಳಾಸಕ್ಕೆ ಬರೆದಿದ್ದ ಪತ್ರವೊಂದು ಆತನ ಕೊಠಡಿಯಲ್ಲಿ ಪತ್ತೆಯಾಗಿದ್ದು, ನಿರೀಕ್ಷೆಗೆ ತಕ್ಕಂತೆ ಸಾಧನೆ ಮಾಡಲು ಸಾಧ್ಯವಾಗದಿರುವುದಕ್ಕೆ ಕ್ಷಮೆ ಇರಲಿ ಎಂದು ಕೋರಿದ್ದಾನೆ. ಈ ಪತ್ರವನ್ನು ಕೂಡಾ ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇಜಾಝ್ ಅವರ ಮೊಬೈಲ್ ನಂಬರ್ ಕೊನೆ ಬಾರಿಗೆ ಕೊಲ್ಕತ್ತಾದಲ್ಲಿ ಪತ್ತೆಯಾಗಿದೆ ಎಂದು ಡಿವೈಎಸ್ಪಿ ಸತ್ಯವ್ರತ ಭೋಯಿ ಹೇಳಿದ್ದಾರೆ. ಆ ಬಳಿಕ ಫೋನ್ ಸ್ವಿಚ್ ಆಫ್ ಆಗಿದೆ.

ಕುಪ್ವಾರದಲ್ಲಿ ಶಿಕ್ಷಕರಾಗಿರುವ ಸುಹೈಲ್ ತಂದೆ ವಾರದ ಹಿಂದೆ ಭುವನೇಶ್ವರಕ್ಕೆ ಆಗಮಿಸಿದ್ದಾರೆ. "ಆರು ಮಕ್ಕಳ ಪೈಕಿ ಈತ ಅತ್ಯಂತ ಬುದ್ಧಿವಂತ. ಮೊಬೈಲ್ ರಿಪೇರಿ ಇರುವುದರಿಂದ ಎರಡು ಮೂರು ದಿನ ಕರೆ ಮಾಡದಂತೆ ಫೆಬ್ರವರಿ 9ರಂದು ಸಹೋದರನಿಗೆ ಸೂಚಿಸಿದ್ದ. ಫೋನ್ ದುರಸ್ತಿಯಾದ ಬಳಿಕ ಕರೆ ಮಾಡುವುದಾಗಿ ಹೇಳಿದ್ದ. ಒಂದು ವಾರವಾದರೂ ಕರೆ ಬಾರದಿದ್ದಾಗ ಕರೆ ಮಾಡಲು ಮುಂದಾದೆವು. ಆಗ ಮೊಬೈಲ್ ಸ್ವಿಚ್‌ಆಫ್ ಆಗಿತ್ತು" ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News