ಅಮೆರಿಕ ನಿರ್ಬಂಧ ಯುದ್ಧಕ್ಕೆ ಸಮಾನವಾದ ಕೃತ್ಯ: ಉತ್ತರ ಕೊರಿಯ ಆಕ್ರೋಶ

Update: 2018-02-25 17:42 GMT

ಸೋಲ್,ಫೆ.25: ತನ್ನ ವಿರುದ್ಧ ಹೊಸದಾಗಿ ಕಠಿಣ ನಿರ್ಬಂಧಗಳನ್ನು ವಿಧಿಸಿರುವ ಅಮೆರಿಕದ ವಿರುದ್ಧ ಉತ್ತರ ಕೊರಿಯ ರವಿವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದೊಂದು ‘ಯುದ್ಧದ ಕೃತ್ಯ’ ಎಂಬುದಾಗಿ ಬಣ್ಣಿಸಿದೆ.

ಉತ್ತರ ಕೊರಿಯವು ತನ್ನ ಅಣ್ವಸ್ತ್ರ ಕಾರ್ಯಕ್ರಮವನ್ನು ತ್ಯಜಿಸುವಂತೆ ಮಾಡುವುದಕ್ಕಾಗಿ ಅದರ ಮೇಲೆ ಒತ್ತಡ ಹೇರಲು ಆ ದೇಶದ ಜೊತೆ ನಂಟು ಹೊಂದಿರುವ 50ಕ್ಕೂ ಅಧಿಕ ಶಿಪ್ಪಿಂಗ್ ಸಂಸ್ಥೆ, ನೌಕೆಗಳು ಹಾಗೂ ವಾಣಿಜ್ಯ ಸಂಸ್ಥೆಗಳನ್ನು ಗುರಿಯಾಗಿರಿಸಿಕೊಂಡು ನಿರ್ಬಂಧಗಳನ್ನು ವಿಧಿಸಿರುವುದಾಗಿ ಅಮೆರಿಕ ಹೇಳಿದೆ.

ನಾವು ಪದೇ ಪದೇ ಹೇಳುತ್ತಿರುವ ಹಾಗೆ, ನಮ್ಮ ಮೇಲೆ ಹೇರುವ ಯಾವುದೇ ನಿರ್ಬಂಧಗಳು ಯುದ್ಧದ ಕೃತ್ಯವಾಗಿದೆ ಎಂದು ಉತ್ತರ ಕೊರಿಯದ ವಿದೇಶಾಂಗ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.

‘‘ ನಾವು ಈಗಾಗಲೇ ನಮ್ಮದೇ ಅದ ಅಣ್ವಸ್ತ್ರವನ್ನು ಹೊಂದಿದ್ದೇವೆ. ಅಮೆರಿಕದ ಇಂತಹ ಬೆದರಿಕೆಗಳಿಂದ ನಮ್ಮನ್ನು ರಕ್ಷಿಸಲು ಅದೊಂದು ಅಮೂಲ್ಯವಾದ ನ್ಯಾಯದ ಖಡ್ಗವಾಗಿದೆ’’ ಎಂದವರು ತಿಳಿಸಿದ್ದಾರೆ.

ಒಂದು ವೇಳೆ ಈ ನಿರ್ಬಂಧಗಳು ಕೆಲಸ ಮಾಡದೆ ಇದ್ದಲ್ಲಿ, ಅಮೆರಿಕವು ಎರಡನೆ ಹಂತದ ನಿರ್ಬಂಧಗಳನ್ನು ವಿಧಿಸಲಿದ್ದು, ಅದು ಅತ್ಯಂತ ಒರಟಾಗಿರುವುದು ಎಂದು ಟ್ರಂಪ್ ಶುಕ್ರವಾರ ಎಚ್ಚರಿಕೆ ನೀಡಿದ್ದರು.

‘‘ ಇಂತಹ ನಿರ್ಬಂಧಗಳು ಹಾಗೂ ದ್ವೇಷಪೂರಿತ ಹೇಳಿಕೆಗಳ ಮೂಲಕ ಟ್ರಂಪ್ ನಮ್ಮನ್ನು ಬದಲಾಯಿಸಲು ಯತ್ನಿಸುತ್ತಿದ್ದಾರೆ. ಆದರೆ ಇದು ನಮ್ಮ ಬಗ್ಗೆ ಅವರ ಅಜ್ಞಾನವನ್ನು ತೋರಿಸಿಕೊಡುತ್ತದೆ’’

ಉ.ಕೊರಿಯ ವಿದೇಶಾಂಗ ಸಚಿವಾಲಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News