×
Ad

ಭೂಸ್ವಾಧೀನ ಪ್ರಕ್ರಿಯೆ: ವಿಚಾರಣೆಗೆ ಸಾಂವಿಧಾನಿಕ ಪೀಠ ರಚನೆ

Update: 2018-02-26 22:26 IST

ಹೊಸದಿಲ್ಲಿ, ಫೆ.26: ಭೂಸ್ವಾಧೀನ ವಿಷಯದ ಕುರಿತು ಸೂಕ್ತ ತೀರ್ಪು ಪ್ರಕಟಿಸುವ ಉದ್ದೇಶದಿಂದ ಸುಪ್ರೀಂಕೋರ್ಟ್ ಐವರು ಸದಸ್ಯರ ಸಾಂವಿಧಾನಿಕ ಪೀಠವನ್ನು ರಚಿಸಿದ್ದು ಈ ವಿವಾದಾತ್ಮಕ ವಿಷಯದ ಬಗ್ಗೆ ಮಾರ್ಚ್ 6ರಂದು ವಿಚಾರಣೆ ನಡೆಸಲಿದೆ.

 ಭೂಸ್ವಾಧೀನ ಕುರಿತಂತೆ ಸುಪ್ರೀಂಕೋರ್ಟ್‌ನ ಪ್ರತ್ಯೇಕ ಪೀಠಗಳು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ‘ನ್ಯಾಯಿಕ(ನ್ಯಾಯಸ್ಥಾನದ ) ಶಿಸ್ತು’ ಬಗ್ಗೆ ಉದ್ಭವಿಸಿರುವ ಆತಂಕವನ್ನು ನಿವಾರಿಸುವ ಉದ್ದೇಶದಿಂದ ಸಾಂವಿಧಾನಿಕ ಪೀಠವನ್ನು ರಚಿಸಲಾಗಿದೆ ಎಂದು ಸರ್ವೋಚ್ಛ ನ್ಯಾಯಾಲಯ ತಿಳಿಸಿದೆ.

 ಫೆ.8ರಂದು ಸರ್ವೋಚ್ಛ ನ್ಯಾಯಾಲಯದ ಮೂವರು ಸದಸ್ಯರ ಪೀಠವು, ನಿಗದಿತ ಐದು ವರ್ಷದ ಅವಧಿಯಲ್ಲಿ ಪರಿಹಾರಧನವನ್ನು ಬಳಸಿಕೊಳ್ಳದಿರುವುದು ಭೂಸ್ವಾಧೀನ ಪ್ರಕ್ರಿಯೆ ರದ್ದತಿಗೆ ಕಾರಣವಾಗಲಾರದು ಎಂದು ತೀರ್ಪು ನೀಡಿತ್ತು. ಆದರೆ ಈ ತೀರ್ಪನ್ನು ಮೂವರು ಸದಸ್ಯರ ಮತ್ತೊಂದು ನ್ಯಾಯಪೀಠ ಫೆ.21ರಂದು ತಳ್ಳಿಹಾಕಿತ್ತು. 2014ರಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದ ತ್ರಿಸದಸ್ಯರ ನ್ಯಾಯಪೀಠವು ನಿಗದಿತ ಐದು ವರ್ಷದ ಅವಧಿಯಲ್ಲಿ ಪರಿಹಾರಧನವನ್ನು ಬಳಸಿಕೊಳ್ಳದಿದ್ದರೆ ಭೂಸ್ವಾಧೀನ ಪ್ರಕ್ರಿಯೆ ರದ್ದಾಗುತ್ತದೆ ಎಂದು ತೀರ್ಪು ನೀಡಿರುವುದನ್ನು ಫೆ.21ರ ತೀರ್ಪಿನಲ್ಲಿ ಉಲ್ಲೇಖಿಸಿದ್ದ ನ್ಯಾಯಾಧೀಶ ಮದನ್ ಲೋಕುರ್ ನೇತೃತ್ವದ ನ್ಯಾಯಪೀಠ , ಒಂದು ವೇಳೆ ಅಭಿಪ್ರಾಯ ಬೇಧವಿದ್ದರೆ ಅಂತಹ ಪ್ರಕರಣಗಳನ್ನು ದೊಡ್ಡ ಪೀಠಕ್ಕೆ ವಹಿಸಿಕೊಡಬೇಕು ಎಂದು ತಿಳಿಸಿತ್ತು.

   ಇದಾದ ಮರುದಿನ, ಭೂಸ್ವಾಧೀನ ಪ್ರಕ್ರಿಯೆ ಕುರಿತ ಮತ್ತೊಂದು ಪ್ರಕರಣ ಸುಪ್ರೀಂಕೋರ್ಟ್‌ನ ಇಬ್ಬರು ಸದಸ್ಯರ ನ್ಯಾಯಪೀಠದೆದುರು ವಿಚಾರಣೆಗೆ ಬಂದಿತ್ತು. ಫೆ.21ರ ತೀರ್ಪಿನ ಬಳಿಕ ಉದ್ಭವಿಸಿರುವ ವಿಚಿತ್ರ ಪರಿಸ್ಥಿತಿಯ ಹಿನ್ನೆಲೆಯಲ್ಲಿ , ಭೂಸ್ವಾಧೀನದ ವಿಷಯವನ್ನು ನಿರ್ವಹಿಸಲು ಸೂಕ್ತ ನ್ಯಾಯಪೀಠವನ್ನು ರಚಿಸುವಂತೆ ಕೋರಿ ಪ್ರಕರಣವನ್ನು ಮುಖ್ಯ ನ್ಯಾಯಾಧೀಶರ ಗಮನಕ್ಕೆ ತಂದಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಅವರು ಐವರು ಸದಸ್ಯರುಳ್ಳ ಸಾಂವಿಧಾನಿಕ ಪೀಠವನ್ನು ರಚಿಸಿದ್ದಾರೆ. ಮುಖ್ಯ ನ್ಯಾಯಾಧೀಶರ ಜೊತೆಗೆ, ನ್ಯಾಯಾಧೀಶರಾದ ಎ.ಕೆ.ಸಿಕ್ರಿ, ಎ.ಎಂ.ಖಾನ್ವಿಲ್ಕರ್, ಡಿ.ವೈ.ಚಂದ್ರಚೂಡ್ ಹಾಗೂ ಅಶೋಕ್ ಭೂಷಣ್ ಸಮಿತಿಯಲ್ಲಿ ಸದಸ್ಯರಾಗಿರುತ್ತಾರೆ.

 ಭೂಸ್ವಾಧೀನ ಪ್ರಕ್ರಿಯೆ ಕುರಿತ ಮಧ್ಯಾಂತರ ತೀರ್ಪು ಹಾಗೂ ಅಂತಿಮ ವಿಚಾರಣೆಗೆ ಬಾಕಿ ಇರುವ ಎಲ್ಲಾ ಪ್ರಕರಣಗಳನ್ನೂ ಸಾಂವಿಧಾನಿಕ ಪೀಠದ ನಿರ್ವಹಣೆಗೆ ವಹಿಸಿರುವ ಕಾರಣ , ಇಂತಹ ಯಾವುದೇ ಪ್ರಕರಣಗಳನ್ನೂ ವಿಚಾರಣೆಗೆ ಎತ್ತಿಕೊಳ್ಳದಂತೆ ಎಲ್ಲಾ ಹೈಕೋರ್ಟ್‌ಗಳಿಗೂ ಸೂಚಿಸಲಾಗುವುದು ಹಾಗೂ ಮಾರ್ಚ್ 6ರಂದು ಮುಂದಿನ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಪೀಠ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News