×
Ad

ಅಂತಾರಾಷ್ಟ್ರೀಯ ಭಯೋತ್ಪಾದಕರನ್ನು ಪಾಕಿಸ್ತಾನ ರಕ್ಷಿಸಬಾರದು

Update: 2018-02-26 23:05 IST

ವಾಶಿಂಗ್ಟನ್, ಫೆ. 26: ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರಿ ಹಫೀಝ್ ಸಯೀದ್ ಮುಂತಾದ ಖಚಿತ ಅಂತಾರಾಷ್ಟ್ರೀಯ ಭಯೋತ್ಪಾದಕರನ್ನು ಪಾಕಿಸ್ತಾನ ರಕ್ಷಿಸಬಾರದು ಎಂದು ಆ ದೇಶದ ಮಾಜಿ ಅಮೆರಿಕ ರಾಯಭಾರಿ ಹುಸೈನ್ ಹಕ್ಕಾನಿ ಇಲ್ಲಿ ಹೇಳಿದ್ದಾರೆ.

 ಪಾಕಿಸ್ತಾನದ ನ್ಯಾಯಾಂಗ ಮತ್ತು ಕಾನೂನು ಅನುಷ್ಠಾನ ವ್ಯವಸ್ಥೆ ಜಾಗತಿಕ ಮಟ್ಟದಲ್ಲಿ ತಮ್ಮೆಲ್ಲ ಗೌರವ ಕಳೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.

‘‘ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದಕನೆಂದು ಗುರುತಿಸಲ್ಪಟ್ಟ ಸಯೀದ್, ದಾವೂದ್ ಇಬ್ರಾಹೀಂ, ಸಿರಾಜ್ ಹಕ್ಕಾನಿ ಮತ್ತು ಮಸೂದ್ ಅಝರ್ ಮುಂತಾದವರಿಗೆ ರಕ್ಷಣೆ ನೀಡುವುದನ್ನು ಪಾಕಿಸ್ತಾನ ನಿಲ್ಲಿಸಬೇಕು’’ ಎಂದಿದ್ದಾರೆ.

ಹುಸೈನ್ ಹಕ್ಕಾನಿಯನ್ನು ಬಂಧಿಸುವಂತೆ ಕೋರಿ ಪಾಕಿಸ್ತಾನದ ಕೇಂದ್ರೀಯ ತನಿಖಾ ಸಂಸ್ಥೆ ಇಂಟರ್‌ಪೋಲ್‌ಗೆ ಈಗಾಗಲೇ ಪತ್ರ ಬರೆದಿರುವುದನ್ನು ಸ್ಮರಿಸಬಹುದಾಗಿದೆ.

ತನ್ನ ವಿರುದ್ಧ ಬಂಧನ ವಾರಂಟ್ ಹೊರಡಿಸಿರುವ ಪಾಕ್ ತನಿಖಾ ಸಂಸ್ಥೆಯು, ತಾನು ಪಾಕಿಸ್ತಾನ ಸರಕಾರದ ನೀತಿಗಳನ್ನು ಟೀಕಿಸುತ್ತಿರುವುದನ್ನು ಹೊರತುಪಡಿಸಿ ತನ್ನ ವಿರುದ್ಧ ಏನು ಆರೋಪಗಳಿವೆ ಎಂಬುದನ್ನು ಹೇಳಿಲ್ಲ ಎಂದು ಹಕ್ಕಾನಿ ಹೇಳಿದರು.

ಹಕ್ಕಾನಿ 2008ರಿಂದ 2011ರವರೆಗೆ ಅಮೆರಿಕಕ್ಕೆ ಪಾಕಿಸ್ತಾನದ ರಾಯಭಾರಿಯಾಗಿದ್ದರು.

ನಾನು ರಾಜಕೀಯ ಹಿಂಸೆಯ ಬಲಿಪಶು

‘‘ನನ್ನ ಪುಸ್ತಕಗಳಲ್ಲಿ ಹಾಗೂ ಇತರ ಲೇಖನಗಳಲ್ಲಿ ನಾನು ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗಾಗಿ ನಾನು ರಾಜಕೀಯ ಹಿಂಸೆಯ ಗುರಿಯಾಗಿದ್ದೇನೆ. ನನ್ನ ವಿರುದ್ಧ ಯಾವುದೇ ಆರೋಪಗಳಿಲ್ಲ. ಪಾಕಿಸ್ತಾನ ಸರಕಾರದ ಈ ರಾಜಕೀಯ ಪ್ರೇರಿತ ಕ್ರಮಗಳಿಗಾಗಿ ಇಂಟರ್‌ಪೋಲ್ ಅಥವಾ ಯಾವುದೇ ಅಂತಾರಾಷ್ಟ್ರೀಯ ಸಂಸ್ಥೆಯು ನನ್ನ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇಲ್ಲ’’ ಎಂದು ಹುಸೈನ್ ಹಕ್ಕಾನಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News