ಎಚ್ಚರಿಕೆ...ಮುಂಬೈಗೆ ಹೋಗುವವರಾಗಿದ್ದರೆ ಈ ಸುದ್ದಿ ಓದಿಕೊಳ್ಳಿ

Update: 2018-02-28 15:20 GMT

ಮುಂಬೈ,ಫೆ.28: ಹವಾಮಾನ ಇಲಾಖೆಯು ಬುಧವಾರ ಮಧ್ಯಾಹ್ನ ಮುಂಬೈ, ರಾಯಗಡ ಮತ್ತು ರತ್ನಗಿರಿ ಪ್ರದೇಶಗಳಿಗಾಗಿ ಉಷ್ಣ ಮಾರುತ ಎಚ್ಚರಿಕೆಯನ್ನು ಹೊರಡಿಸಿದ್ದು, ಹೊರಗೆ ಹೆಚ್ಚು ತಿರುಗಾಡದಂತೆ ಮತ್ತು ನೀರು ಇತ್ಯಾದಿ ಪಾನೀಯ ಗಳನ್ನು ಹೆಚ್ಚು ಸೇವಿಸುವಂತೆ ಜನರಿಗೆ ಸೂಚಿಸಿದೆ. ಬುಧವಾರ ತಾಪಮಾನದಲ್ಲಿ ತೀವ್ರ ಏರಿಕೆಯಾಗಿದ್ದು, ಗುರುವಾರದವರೆಗೂ ಮುಂದುವರಿಯಲಿದೆ ಮತ್ತು 38 ಡಿ.ಸೆ.ತಲುಪುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಪಶ್ಚಿಮ ಪ್ರದೇಶದ ಉಪ ಮಹಾ ನಿರ್ದೇಶಕ ಕೆ.ಎಸ್.ಹೊಸಾಳಿಕರ ಅವರು ತಿಳಿಸಿದರು. ಇದು ಸಾಮಾನ್ಯ ತಾಪಮಾನಕ್ಕಿಂತ ಆರು ಡಿ.ಸೆ.ಅಧಿಕವಾಗಿದೆ.

ಶುಕ್ರವಾರ ಮಹಾನಗರವು ಹೋಳಿಹಬ್ಬವನ್ನು ಆಚರಿಸುತ್ತಿದ್ದು, ಅಂದು ತಾಪಮಾನ 35 ಡಿ.ಸೆ.ಗೆ ತಗ್ಗಲಿದೆ ಎಂಬ ಇಲಾಖೆಯ ಮುನ್ಸೂಚನೆ ಜನರಿಗೆ ಕೊಂಚ ನೆಮ್ಮದಿಯನ್ನು ನೀಡಿದೆ.

ಉಷ್ಣ ಮಾರುತಗಳು ಅಧಿಕ ತಾಪಮಾನವನ್ನು ಹೊಂದಿದ್ದು, ನಿರ್ಜಲೀಕರಣ, ಸೆಳೆತ, ಬಳಲಿಕೆ ಮತ್ತು ಬಿಸಿಲ ಆಘಾತಕ್ಕೆ ಕಾರಣವಾಗುತ್ತವೆ.

ಮಂಗಳವಾರ ನಗರದಲ್ಲಿ 37.8 ಡಿ.ಸೆ.ಗರಿಷ್ಠ ತಾಪಮಾನ ದಾಖಲಾಗಿದ್ದರೆ, ರವಿವಾರ ಅದು 37.6 ಡಿ.ಸೆ.ಆಗಿತ್ತು. ಕಳೆದ ವರ್ಷದ ಫೆ.19ರಂದು 38.8 ಡಿ.ಸೆ.ಗರಿಷ್ಠ ತಾಪಮಾನಕ್ಕೆ ನಗರವು ಸಾಕ್ಷಿಯಾಗಿತ್ತು. 1966,ಫೆ.25ರ ಗರಿಷ್ಠ ತಾಪಮಾನ 39.6 ಡಿ.ಸೆ. ಫೆಬ್ರವರಿ ತಿಂಗಳಿನಲ್ಲಿಯ ಸಾರ್ವಕಾಲಿಕ ದಾಖಲೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News