×
Ad

ಎಟಿಎಂನಲ್ಲಿ ನಿಮ್ಮ ಹಣವನ್ನು ಈ ರೀತಿ ದೋಚುತ್ತಾರೆ ಎಚ್ಚರವಿರಲಿ!

Update: 2018-02-28 21:27 IST

ಜೈಪುರ,ಫೆ.28: ಇಲ್ಲಿ ಕೇವಲ ನಾಲ್ಕೇ ದಿನಗಳಲ್ಲಿ ನಗರದಲ್ಲಿ 60 ಎಟಿಎಂ ವಂಚನೆ ಪ್ರಕರಣಗಳು ದಾಖಲಾಗಿದ್ದು, ಜನರು ಸುಮಾರು 11 ಲಕ್ಷ ರೂ.ಗಳನ್ನು ಕಳೆದುಕೊಂಡಿ ದ್ದಾರೆ. ತಮ್ಮ ಪಿನ್‌ಗಳನ್ನು ಬದಲಿಸಿಕೊಳ್ಳುವಂತೆ ಪೊಲೀಸರೀಗ ಬ್ಯಾಂಕ್ ಖಾತೆದಾರರನ್ನು ಕೋರಿಕೊಂಡಿದ್ದಾರೆ.

ಬುಧವಾರದವರೆಗೆ ನಗರದ ವಿವಿಧೆಡೆಗಳಿಂದ ಕನಿಷ್ಠ 60 ಎಟಿಎಂ ವಂಚನೆಗಳು ವರದಿಯಾಗಿವೆ. ಎಟಿಎಂ ಕ್ಲೋನಿಂಗ್ ವಂಚನೆ ರವಿವಾರ ಮಹೇಶ ನಗರ ಪ್ರದೇಶದಲ್ಲಿ ಮೊದಲು ಬಹಿರಂಗಗೊಂಡಿದ್ದು, 38 ಜನರು ದೂರುಗಳನ್ನು ದಾಖಲಿಸಿದ್ದರು. ಮಂಗಳವಾರ ಈ ಸಂಖ್ಯೆ 52ಕ್ಕೇರಿತ್ತು.

ಎಟಿಎಂ ಕ್ಲೋನಿಂಗ್ ವಂಚನೆ ನಗರದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಹೆಚ್ಚಿನ ಬಲಿಪಶುಗಳು ಫೆ.10-11ರ ನಡುವೆ ತಮ್ಮ ಕಾರ್ಡ್‌ಗಳನ್ನು ಎಟಿಎಂಗಳಲ್ಲಿ ಬಳಸಿದ್ದರು ಎಂದು ಡಿಸಿಪಿ ವಿಕಾಸ ಪಾಠಕ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಕಾರ್ಡ್‌ನಲ್ಲಿಯ ಮಾಹಿತಿಗಳನ್ನು ಕದಿಯುವ ಪುಟ್ಟ ವಿದ್ಯುನ್ಮಾನ ಸಾಧನ ‘ಸ್ಕಿಮ್ಮರ್’ನ್ನು ಎಟಿಎಂ ಯಂತ್ರಕ್ಕೆ ಅಳವಡಿಸಿ ಈ ವಂಚನೆಗಳನ್ನು ನಡೆಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಮಾಹಿತಿಗಳನ್ನು ನಂತರ ತದ್ರೂಪಿ ಎಟಿಎಂ ಕಾರ್ಡ್‌ಗಳನ್ನು ಸೃಷ್ಟಿಸಲು ಬಳಸಲಾಗುತ್ತದೆ. ಎಟಿಎಂ ತಂತ್ರದಲ್ಲಿ ಅಳವಡಿಸಲಾದ ಗುಪ್ತ ಕ್ಯಾಮೆರಾದ ಮೂಲಕ ಗ್ರಾಹಕನ್ ಪಿನ್ ಅನ್ನು ಖದೀಮರು ಪಡೆದುಕೊಳ್ಳುತ್ತಾರೆ.

ಮಹೇಶನಗರ ಠಾಣೆಯಲ್ಲದೆ, ನಗರದ ಜವಾಹರ ಸರ್ಕಲ್ ಠಾಣೆಯಲ್ಲಿ ನಾಲ್ಕು ಮತ್ತು ಬಜಾಜ್ ನಗರ ಠಾಣೆಯಲ್ಲಿ ಎರಡು ವಂಚನೆ ಪ್ರಕರಣಗಳು ದಾಖಲಾಗಿವೆ.

ವಂಚಕರು ತದ್ರೂಪಿ ಕಾರ್ಡ್‌ಗಳ ಮೂಲಕ ದಿಲ್ಲಿಯ ಎಟಿಎಂ ಯಂತ್ರಗಳಿಂದ ಹಣವನ್ನು ತೆಗೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದು, ಹೆಚ್ಚಿನ ತನಿಖೆಗಾಗಿ ವಿಶೇಷ ಪೊಲೀಸ್ ತಂಡವೊಂದು ದಿಲ್ಲಿಗೆ ತೆರಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News