×
Ad

ಮಾನವ ಸಾಗಣೆ ಪ್ರಕರಣಗಳ ವಿಚಾರಣೆ ನಡೆಸಲಿರುವ ಎನ್‌ಐಎ

Update: 2018-02-28 22:12 IST

ಹೊಸದಿಲ್ಲಿ, ಫೆ.28: ಮಾನವ ಸಾಗಣೆ ಪ್ರಕರಣಗಳ ವಿಚಾರಣೆ ನಡೆಸುವ ನೋಡಲ್ ಅಧಿಕಾರಿಯಾಗಿ ರಾಷ್ಟ್ರೀಯ ತನಿಖಾ ಮಂಡಳಿ(ಎನ್‌ಐಎ)ಗೆ ಅಧಿಕಾರ ನೀಡುವ ಪ್ರಸ್ತಾಪಕ್ಕೆ ಸರಕಾರ ಅನುಮೋದನೆ ನೀಡಿದೆ.

 ಮಾನವ ಸಾಗಣೆ(ತಡೆ, ರಕ್ಷಣೆ ಮತ್ತು ಪುನರ್ವಸತಿ)ಕರಡು ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು ಅಪರಾಧವನ್ನು ಪುನರಾವರ್ತಿಸುವವರಿಗೆ ಜೀವಾವಧಿ ಶಿಕ್ಷೆ ವಿಧಿಸಲು ಮಸೂದೆಯಲ್ಲಿ ಅವಕಾಶವಿದೆ.

      ಮಾನವ ಸಾಗಣೆ ಪ್ರಕರಣಗಳ ತನಿಖೆ ನಡೆಸುವ ಉದ್ದೇಶದಿಂದ ರಾಷ್ಟ್ರೀಯ ಮಾನವ ಸಾಗಣೆ ವಿರೋಧಿ ಮತ್ತು ಪುನರ್ವಸತಿ ಸಮಿತಿಯನ್ನು ರೂಪಿಸಲು ಎನ್‌ಐಎ ನಿರ್ಧರಿಸಿದ್ದು, ಇದಕ್ಕೆ ನಿರ್ಭಯಾ ನಿಧಿಯಿಂದ ಆರ್ಥಿಕ ನೆರವು ಪಡೆಯಲಾಗುವುದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಈ ಸಮಿತಿಯ ಮುಖ್ಯಸ್ಥರಾಗಿರುತ್ತಾರೆ. ಜೊತೆಗೆ, ಪುನರ್ವಸತಿ ನಿಧಿಯನ್ನು ಸ್ಥಾಪಿಸಲು ಹಾಗೂ ದೇಶದಿಂದ ಹೊರಗೆ ಸಾಗಿಸಲ್ಪಟ್ಟವರನ್ನು ದೇಶಕ್ಕೆ ಮರಳಿ ಕರೆತರಲು ನಡೆಸಬೇಕಾದ ಪ್ರಕ್ರಿಯೆಗಳ ಕುರಿತು ಮಸೂದೆಯಲ್ಲಿ ವಿವರವಿದೆ. ಅಲ್ಲದೆ ಮಾನವ ಸಾಗಣೆ ಪ್ರಕರಣಗಳ ತನಿಖೆ ನಡೆಸಲು ಎನ್‌ಐಎಗೆ ಅಧಿಕಾರ ನೀಡುವುದಕ್ಕಾಗಿ ರಾಷ್ಟ್ರೀಯ ತನಿಖಾ ಕಾಯ್ದೆ 2008ನ್ನು ತಿದ್ದುಪಡಿ ಮಾಡಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

ಮಸೂದೆಯಲ್ಲಿ ಮಾನವ ಸಾಗಣೆ ಪ್ರಕರಣವನ್ನು ‘ಸಾಗಣೆ’ ಹಾಗೂ ‘ಗಂಭೀರ ಸಾಗಣೆ’ ಎಂದು ವಿಂಗಡಿಸಲಾಗಿದೆ. ಸಾಗಣೆ ವಿಭಾಗದಲ್ಲಿ ನಡೆಯುವ ದುಷ್ಕೃತ್ಯಗಳಿಗೆ 7ರಿಂದ 10 ವರ್ಷದ ಜೈಲು ಶಿಕ್ಷೆ ಇದ್ದರೆ, ಗಂಭೀರ ಸಾಗಣೆಗೆ ಕನಿಷ್ಟ 10 ವರ್ಷದ ಜೈಲುಶಿಕ್ಷೆ ಇದ್ದು, ಇದನ್ನು 10 ವರ್ಷಾವಧಿಗೆ ವಿಸ್ತರಿಸಬಹುದಾಗಿದೆ. ಗಂಭೀರ ಅಪರಾಧ ವಿಭಾಗದಲ್ಲಿ ಬಲವಂತದ ದುಡಿಮೆ, ಜೀತದ ದುಡಿಮೆ, ಮದುವೆಯ ಹೆಸರಲ್ಲಿ ಮಾನವ ಸಾಗಣೆ ಮುಂತಾದವು ಸೇರಿದೆ. ಮಾನವ ಸಾಗಣೆಗೆ ಪ್ರೇರೇಪಣೆ ನೀಡುವುದು, ಮಾನವ ಸಾಗಣೆಗೆ ನೆರವಾಗುವುದು ಹಾಗೂ ಪ್ರೋತ್ಸಾಹ ನೀಡುವ ಕಾರ್ಯಗಳಿಗೆ 3 ವರ್ಷದ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾವ ಮಸೂದೆಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News