ತೀವ್ರ ವಿರೋಧದ ನಂತರ ತೆರಿಗೆ ಪ್ರಸ್ತಾಪ ಹಿಂದಕ್ಕೆ ಪಡೆದ ಇಸ್ರೇಲ್

Update: 2018-02-28 17:16 GMT

ಜೆರುಸಲೇಂ, ಫೆ. 28: ತೆರಿಗೆ ವಿಧಿಸುವ ಪ್ರಸ್ತಾಪದಿಂದ ಇಸ್ರೇಲ್ ಸರಕಾರ ಮಂಗಳವಾರ ಹಿಂದೆ ಸರಿದ ಹಿನ್ನೆಲೆಯಲ್ಲಿ, ಜೆರುಸಲೇಂನ ಹೋಲಿ ಸೆಪಲ್ಚರ್ ಚರ್ಚ್ ಬುಧವಾರ ಬಾಗಿಲು ತೆರೆದಿದೆ.

ಈಗ ಈ ಚರ್ಚ್ ಇರುವ ಸ್ಥಳದಲ್ಲಿ ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಲಾಗಿತ್ತು ಹಾಗೂ ಬಳಿಕ ದಫನ ಮಾಡಲಾಗಿತ್ತು ಎಂಬುದಾಗಿ ನಂಬಲಾಗಿದೆ. ಸರಕಾರ ಮಂಡಿಸಿದ ಕರಡು ಆಸ್ತಿ ಮಸೂದೆಯನ್ನು ಪ್ರತಿಭಟಿಸಿ ರವಿವಾರದಿಂದ ಮೂರು ದಿನಗಳ ಕಾಲ ಚರ್ಚನ್ನು ಮುಚ್ಚಲಾಗಿತ್ತು.

ಈ ಪ್ರಾಚೀನ ಚರ್ಚ್ ಪ್ರವಾಸಿಗರು ಹಾಗೂ ಯಾತ್ರಿಕರ ನೆಚ್ಚಿನ ತಾಣವಾಗಿದೆ ಹಾಗೂ ಮುಂಬರುವ ಈಸ್ಟರ್ ರಜಾದಿನಗಳ ಅವಧಿಯಲ್ಲಿ ಇಲ್ಲಿಗೆ ಭೇಟಿ ನೀಡಲಿರುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ.

ಇದೇ ಅವಧಿಯಲ್ಲಿ ಚರ್ಚನ್ನು ಮುಚ್ಚುವ ಆಡಳಿತದ ನಿರ್ಧಾರವು ಇಸ್ರೇಲ್ ಸರಕಾರದ ಮೇಲೆ ಹೆಚ್ಚಿನ ಒತ್ತಡ ಸೃಷ್ಟಿಸಿತು ಹಾಗೂ ಚರ್ಚ್‌ಗೆ ತೆರಿಗೆ ವಿಧಿಸುವ ತನ್ನ ಹಿಂದಿನ ನಿರ್ಧಾರವನ್ನು ಮರುಪರಿಶೀಲಿಸುವ ಅನಿವಾರ್ಯತೆಯನ್ನು ಉಂಟು ಮಾಡಿತು.

ಮಂಗಳವಾರ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಚೇರಿಯಿಂದ ಹೇಳಿಕೆಯೊಂದನ್ನು ಪಡೆದ ಬಳಿಕ, ಬುಧವಾರ ಬೆಳಗ್ಗೆ ಚರ್ಚ್‌ನ್ನು ತೆರೆಯಲಾಗುವುದು ಎಂದು ರೋಮನ್ ಕ್ಯಾಥೊಲಿಕ್, ಗ್ರೀಕ್ ಆರ್ತೊಡಾಕ್ಸ್ ಮತ್ತು ಆರ್ಮೇನಿಯನ್ ಚರ್ಚ್‌ನ ಅಧಿಕಾರಿಗಳು ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News