ಲೋಕಪಾಲ್ ಸಭೆ: ಪ್ರಧಾನಿಯ ‘ವಿಶೇಷ ಆಹ್ವಾನಿತ’ ಆಮಂತ್ರಣ ತಿರಸ್ಕರಿಸಿದ ಖರ್ಗೆ

Update: 2018-03-01 06:56 GMT

ಹೊಸದಿಲ್ಲಿ, ಮಾ.1: ಇಂದು ಲೋಕಪಾಲ್ ಆಯ್ಕೆ ಕುರಿತು ನಡೆಯಲಿರುವ ಸಭೆಗೆ ತಮ್ಮನ್ನು ‘ವಿಶೇಷ ಆಹ್ವಾನಿತ’ನಾಗಿ ಪ್ರಧಾನಿ ಆಹ್ವಾನಿಸಿರುವುದನ್ನು ಸಹಿಸದ ಲೋಕಸಭೆಯಲ್ಲಿನ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಈ ಆಹ್ವಾನವನ್ನು ತಿರಸ್ಕರಿಸಿದ್ದಾರೆ. ತಮ್ಮನ್ನು ಆಯ್ಕೆ ಪ್ರಕ್ರಿಯೆಯಿಂದ ಹೊರಗಿಡುವ ಸಲುವಾಗಿಯೇ ಈ ರೀತಿ ವಿಶೇಷ ಆಹ್ವಾನಿತನನ್ನಾಗಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇಂದು ನಡೆಯಲಿರುವ ಉನ್ನತಾಧಿಕಾರ ಸಮಿತಿ ಸಭೆಯಲ್ಲಿ ಪ್ರಧಾನಿಯ ಹೊರತಾಗಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಭಾಗವಹಿಸಲಿದ್ದಾರೆ.

‘‘ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ಹಾಗೂ ಮತದಾನ ಮಾಡುವ ಹಕ್ಕಿಲ್ಲದ ವಿಶೇಷ ಆಹ್ವಾನ ಕೇವಲ ನನ್ನ ಹಾಜರಿಗೆ ಸೀಮಿತವಾಗಿದೆ ಹಾಗೂ ಇದು ಕಣ್ಣೊರೆಸುವ ತಂತ್ರವಾಗಿದೆ’’ ಎಂದು ಮೋದಿಗೆ ಬರೆದ ಪತ್ರದಲ್ಲಿ ಖರ್ಗೆ ಹೇಳಿದ್ದಾರೆ.

ತಮ್ಮನು ವಿಶೇಷ ಆಹ್ವಾನಿತನನ್ನಾಗಿರಿಸಿರುವುದು ಲೋಕಪಾಲ್ ಮತ್ತು ಲೋಕಾಯುಕ್ತ ಕಾಯಿದೆ 2013ರ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ವಿಪಕ್ಷ ನಾಯಕನೊಬ್ಬನನ್ನು ವಿಶೇಷ ಆಹ್ವಾನಿತನನ್ನಾಗಿಸುವಂತಿಲ್ಲ ಎಂದು ಖರ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಕೇವಲ ಔಪಚಾರಿಕತೆಗಾಗಿ ತನ್ನನ್ನು ಆಹ್ವಾನಿಸಲಾಗಿದ್ದು ಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅಲ್ಲ ಎಂದು ಖರ್ಗೆ ಹೇಳಿದ್ದಾರೆ.

ಪ್ರಧಾನಿ ಒಬ್ಬ ಮುತ್ಸದ್ದಿಯಂತೆ ವರ್ತಿಸಬೇಕು ಎಂದು ಹೇಳಿದ ಖರ್ಗೆ, ಸದ್ಯ ಲೋಕಪಾಲ್ ನೇಮಕಾತಿಗೆ ನಡೆಯುತ್ತಿರುವ ಪ್ರಕ್ರಿಯೆ ಕೇವಲ ಒಂದು ರಾಜಕೀಯ ತೋರ್ಪಡಿಕೆಯಾಗಿದೆ ಎಂದಿದ್ದಾರೆ.

ಲೋಕಪಾಲ್ ಕಾನೂನಿನಂತೆ ಆಯ್ಕೆ ಸಮಿತಿಯಲ್ಲಿ ವಿಪಕ್ಷ ನಾಯಕನೂ ಸದಸ್ಯನಾಗಿರಬೇಕು. ಮಾರ್ಚ್ 1ರಂದು ನಡೆಯುವ ಸಭೆಯಲ್ಲಿ ತಾನು ಲೋಕಸಭೆಯ ಅತ್ಯಂತ ದೊಡ್ಡ ವಿಪಕ್ಷವಾದ ಕಾಂಗ್ರೆಸ್ ಪಕ್ಷದ ನಾಯಕನನ್ನು ಆಹ್ವಾನಿಸುವುದಾಗಿ ಸರಕಾರ ಸುಪ್ರೀಂ ಕೋರ್ಟಿಗೆ ಈ ಹಿಂದೆ ತಿಳಿಸಿತ್ತು.

ಲೋಕಸಭೆಯ ವಿಪಕ್ಷ ನಾಯಕ ಸ್ಥಾನ ಪಡೆಯಲು ಅತ್ಯಂತ ದೊಡ್ಡ ವಿಪಕ್ಷಕ್ಕೆ ಕನಿಷ್ಠ ಶೇ.10ರಷ್ಟು ಸ್ಥಾನಗಳು ಅಂದರೆ 543 ಸ್ಥಾನಗಳ ಪೈಕಿ 54 ಸ್ಥಾನಗಳನ್ನು ಹೊಂದಿರಬೇಕಾಗಿರುವುದು ನಿಯಮ. ಆದರೆ ಕಾಂಗ್ರೆಸ್ ಪಕ್ಷದ ಬಳಿ ಕೇವಲ 44 ಸ್ಥಾನಗಳಿವೆ. ಇತ್ತೀಚಿಗಿನ ಉಪಚುನಾವಣೆಯ ಫಲಿತಾಂಶಗಳನ್ನೂ ಪರಿಗಣಿಸಿದರೆ ಪಕ್ಷದ ಬಳಿ ಒಟ್ಟು 48 ಸ್ಥಾನಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News