ಗೃಹಸಾಲ, ವಾಹನಸಾಲ ಆಗಲಿದೆಯೇ ದುಬಾರಿ?
ಮುಂಬೈ, ಮಾ.1: ಬಂಡವಾಳ ಆಧರಿತ ಸಾಲ ದರದ ಕನಿಷ್ಟ ವೆಚ್ಚ(ಎಂಸಿಎಲ್‌ಆರ್)ವನ್ನು ಬ್ಯಾಂಕ್‌ಗಳು ಶೇ.8.15ಕ್ಕೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಗೃಹ ಸಾಲ, ವಾಹನ ಸಾಲದ ಮೇಲಿನ ಸಮಾನ ಮಾಸಿಕ ಕಂತು(ಇಎಂಐ) ಕೂಡಾ ಹೆಚ್ಚುವ ನಿರೀಕ್ಷೆಯಿದೆ.
ಠೇವಣಿ ದರವನ್ನು 75 ಮೂಲ ಅಂಕದಷ್ಟು ಹೆಚ್ಚಿಸಿದ ಒಂದು ದಿನದ ಬಳಿಕ ಗುರುವಾರ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಒಂದು ವರ್ಷದ ಎಂಸಿಎಲ್‌ಆರ್ ಅನ್ನು 20 ಮೂಲ ಅಂಕ ಹೆಚ್ಚಿಸುವ ಮೂಲಕ ಶೇ.8.15ಕ್ಕೆ ಏರಿಸಿದೆ(ಶೇ.7.95ರಷ್ಟಿತ್ತು). ಇತರ ಎಂಸಿಎಲ್‌ಆರ್ ದರವನ್ನು ಶೇ.7.8ರಿಂದ ಶೇ.7.95ಕ್ಕೆ ಹೆಚ್ಚಿಸಲಾಗಿದೆ. ಹೊಸ ಸಾಲಗಳು ಒಂದು ವರ್ಷದ ಎಂಸಿಆರ್‌ಎಲ್‌ಗೆ ಜೋಡಣೆಯಾಗಿರುವ ಕಾರಣ ದುಬಾರಿಯಾಗಲಿವೆ ಎಂದು ಐಸಿಐಸಿಐ ಬ್ಯಾಂಕ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಠೇವಣಿ ದರ ಹಾಗೂ ಎಂಸಿಎಲ್‌ಆರ್ ದರದಲ್ಲಿ ಹೆಚ್ಚಳವಾಗಿರುವುದು ಬ್ಯಾಂಕಿಂಗ್ ವ್ಯವಸ್ಥೆಯ ಬಡ್ಡಿದರದಲ್ಲಿ ಏರಿಕೆಯಾಗಿರುವುದನ್ನು ತೋರಿಸುತ್ತದೆ. ಎಂಸಿಎಲ್‌ಆರ್ ವ್ಯವಸ್ಥೆಯನ್ನು 2016ರ ಎಪ್ರಿಲ್‌ನಿಂದ ಆರಂಭಿಸಿದ ಬಳಿಕ ಬೆಂಚ್‌ಮಾರ್ಕ್ ಸಾಲ ದರದಲ್ಲಿ ಆಗಿರುವ ಮೊದಲ ಏರಿಕೆ ಇದಾಗಿದೆ. ಬ್ಯಾಂಕ್‌ಗಳು ಒಂದು ವರ್ಷದ ಎಂಸಿಎಲ್‌ಆರ್ ಆಧಾರದಲ್ಲಿ ಗ್ರಾಹಕರಿಗೆ ಸಾಲ ನೀಡುವ ಕಾರಣ ಗೃಹ ಸಾಲ, ವಾಹನ ಸಾಲ, ಶಿಕ್ಷಣ ಸಾಲ, ಕೆಲವು ವೈಯಕ್ತಿಕ ಸಾಲಗಳು, ಆಸ್ತಿ ಅಡವಿಟ್ಟು ಪಡೆಯುವ ಸಾಲಗಳು ದುಬಾರಿಯಾಗುವ ನಿರೀಕ್ಷೆಯಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಒಂದು ವರ್ಷದ ಎಂಸಿಎಲ್‌ಆರ್ ದರವನ್ನು ಶೇ.8.15ರಿಂದ ಶೇ.8.30ಕ್ಕೇರಿಸಿದ್ದರೆ, ಮೂರು ವರ್ಷದ ಎಂಸಿಎಲ್‌ಆರ್ ದರವನ್ನು ಶೇ.8.30ರಿಂದ ಶೇ.8.45ಕ್ಕೆ, ಐದು ವರ್ಷದ ದರವನ್ನು ಶೇ.8.45ರಿಂದ ಶೇ.8.60ಕ್ಕೆ ಹೆಚ್ಚಿಸಿದೆ. ಎಸ್‌ಬಿಐ ಎರಡು ವರ್ಷದ ಎಂಸಿಎಲ್‌ಆರ್ ದರವನ್ನು ಶೇ.8.05ರಿಂದ ಶೇ.8.25ಕ್ಕೆ, ಮೂರು ವರ್ಷದ ಎಂಸಿಎಲ್‌ಆರ್ ದರವನ್ನು ಶೇ.8.10ರಿಂದ ಶೇ.8.35ಕ್ಕೆ ಏರಿಸಲಿದೆ. ಆರು ತಿಂಗಳ ಎಂಸಿಎಲ್‌ಆರ್ ದರ ಶೇ.7.90ರಿಂದ ಶೇ.8ಕ್ಕೆ ಏರಲಿದೆ.
ಠೇವಣಿ ದರದಲ್ಲಿ ಹೆಚ್ಚಳವಾಗಿರುವುದು , ಬಂಡವಾಳದ ಸಮಗ್ರ ವೆಚ್ಚ ಹಾಗೂ ಹಣದ ಕೊರತೆ ಎಂಸಿಎಲ್‌ಆರ್ ದರ ಹೆಚ್ಚಲು ಕಾರಣವಾಗಿದೆ ಎಂದು ಬ್ಯಾಂಕರ್‌ಗಳು ತಿಳಿಸಿದ್ದಾರೆ. ಸಾಮಾನ್ಯವಾಗಿ ಬ್ಯಾಂಕ್‌ಗಳು ಎಂಸಿಎಲ್‌ಆರ್ ದರವನ್ನು ಮಾಸಿಕ ಆಧಾರದಲ್ಲಿ ಪರಿಷ್ಕರಿಸುತ್ತವೆ. ಎಪ್ರಿಲ್‌ನಲ್ಲಿ ನಡೆಸಲಿರುವ ವಿತ್ತೀಯ ನೀತಿಯ ಪರಿಷ್ಕರಣೆ ಸಂದರ್ಭ ರಿಸರ್ವ್ ಬ್ಯಾಂಕ್ ರೆಪೊ ದರವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಅಲ್ಲದೆ ಸೆಕ್ಯುರಿಟೀಸ್ ಮಾರುಕಟ್ಟೆಯಲ್ಲಿ ಬಾಂಡ್ ದರಗಳೂ ಏರಿಕೆಯಾಗುತ್ತಿರುವುದು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಬಡ್ಡಿದರದ ಮೇಲೆ ಹೆಚ್ಚಿನ ಒತ್ತಡ ಬೀಳಲು ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.