ರಾಜ್ಯ ಸಭೆ: ಸಚಿನ್, ರೇಖಾ ಕೊಟ್ಟಿದ್ದೆಷ್ಟು ? ಪಡೆದಿದ್ದೆಷ್ಟು ?

Update: 2018-03-02 11:28 GMT

ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತು ಹಿರಿಯ ಬಾಲಿವುಡ್ ನಟಿ ರೇಖಾ ಅವರ ರಾಜ್ಯಸಭಾ ಸದಸ್ಯತ್ವಗಳು ಈ ತಿಂಗಳ ಕೊನೆಯಲ್ಲಿ ಅಂತ್ಯಗೊಳ್ಳಲಿವೆ. ಮೇಲ್ಮನೆಯಲ್ಲಿ ಅವರ ಆರು ವರ್ಷಗಳ ಅಧಿಕಾರಾವಧಿಯತ್ತ ಕಣ್ಣು ಹಾಯಿಸಿದರೆ ಖಂಡಿತ ನಿರಾಸೆಯಾಗುತ್ತದೆ.

ಸಚಿನ್ ಮತ್ತು ರೇಖಾ ರಾಜ್ಯಸಭೆಗೆ ನಾಮಕರಣಗೊಂಡಿರುವ 12 ಸದಸ್ಯರಲ್ಲಿ ಸೇರಿದ್ದಾರೆ. 2012, ಮಾರ್ಚ್‌ನಲ್ಲಿ ಆಗಿನ ಯುಪಿಎ ಸರಕಾರವು ಇವರಿಬ್ಬರನ್ನೂ ರಾಜ್ಯಸಭಾ ಸದಸ್ಯರನ್ನಾಗಿ ನಾಮಕರಣಗೊಳಿಸಿತ್ತು.

ರಾಜ್ಯಭೆಯು ಬಹಿರಂಗಗೊಳಿಸಿರುವ ಅಂಕಿಅಂಶಗಳಂತೆ ಸದನದಲ್ಲಿ ಸಚಿನ್ ಹಾಜರಾತಿಯು ಶೇ.7.3 ಆಗಿದೆ. ಸದನಕ್ಕೆ ಹಾಜರಾಗಿದ್ದ 29 ದಿನಗಳ ಅವಧಿಯಲ್ಲಿ ಅವರು ಕೇವಲ 22 ಪ್ರಶ್ನೆಗಳನ್ನು ಕೇಳಿದ್ದಾರೆ. ಯಾವುದೇ ಖಾಸಗಿ ಮಸೂದೆಯನ್ನು ಮಂಡಿಸುವ ಗೋಜಿಗೆ ಹೋಗಿಲ್ಲ.

ರೇಖಾರ ಹಾಜರಾತಿ ದಾಖಲೆ ಇನ್ನೂ ಕೆಟ್ಟದ್ದಾಗಿದೆ. ರಾಜ್ಯಸಭಾ ಸದಸ್ಯತ್ವ ಆರಂಭಗೊಂಡಾಗಿನಿಂದ ಅವರ ಹಾಜರಾತಿಯ ಪ್ರಮಾಣ ಕೇವಲ ಶೇ.4.5 ಆಗಿದೆ. ಅವರು ಒಟ್ಟು 18 ದಿನ ಸದನಕ್ಕೆ ಹಾಜರಾಗಿದ್ದರೂ, ಯಾವುದೇ ಅಧಿವೇಶನದಲ್ಲಿ ಒಂದು ದಿನಕ್ಕಿಂತ ಹೆಚ್ಚು ಭಾಗಿಯಾಗಿಲ್ಲ. ಅವರ ಅವಧಿಯಲ್ಲಿ ಸದನದಲ್ಲಿ ಮಸೂದೆಯನ್ನು ಮಂಡಿಸುವುದು ಬಿಡಿ, ಒಂದೇ ಒಂದು ಪ್ರಶ್ನೆಯನ್ನೂ ಕೇಳಿಲ್ಲ!

 ಸಚಿನ್ ಮತ್ತು ರೇಖಾ ಅವರ ಕಳಪೆ ಹಾಜರಾತಿ ರಾಜ್ಯಸಭೆಯಲ್ಲಿ ಆಗಾಗ್ಗೆ ಪ್ರಸ್ತಾಪಗೊಳ್ಳುತ್ತಲೇ ಇತ್ತು. 2017ರಲ್ಲಿ ಸಮಾಜವಾದಿ ಪಾರ್ಟಿಯ ಸಂಸದ ನರೇಶ ಅಗರವಾಲ್ ಅವರು ಇವರಿಬ್ಬರ ಹಾಜರಾತಿಯನ್ನು ಪ್ರಶ್ನಿಸುವ ಮೂಲಕ ನಮ್ಮ ಕೆಲವು ಸಂಸದರ ಕಳಪೆ ಸಾಧನೆಗಳ ಮೇಲೆ ಬೆಳಕು ಚೆಲ್ಲಿದ್ದರು. ಸದನಕ್ಕೆ ಗೈರುಹಾಜರಾಗುವುದೇ ಒಂದು ಸಾಧನೆ ಎನ್ನುವಂತೆ ಮುಂದುವರಿಸಿಕೊಂಡ ಬಂದ ಸಚಿನ್ ಮತ್ತು ರೇಖಾ ಅವರ ಸದಸ್ಯತ್ವವೇ ಈಗ ಕೊನೆಗೊಳ್ಳುತ್ತಿದೆ.

ಈ ಸೆಲೆಬ್ರಿಟಿಗಳ ಕಳಪೆ ಸಾಧನೆಗೆ ಇಷ್ಟೇ ಸಾಲದೆಂಬಂತೆ 2014ರವರೆಗೆ, ಅಂದರೆ ರಾಜ್ಯಸಭಾ ಸದಸ್ಯರಾಗಿ ಎರಡು ವರ್ಷಗಳವರೆಗೂ ಇವರಿಬ್ಬರೂ ತಮ್ಮ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಒಂದೇ ಒಂದು ಪೈಸೆಯನ್ನು ಜನಪರ ಕಾರ್ಯಕ್ರಮಗಳಿಗಾಗಿ ಖರ್ಚು ಮಾಡಿರಲಿಲ್ಲ! ದೇಶದ ಯಾವುದೇ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಪ್ರತಿ ರಾಜ್ಯಸಭಾ ಸದಸ್ಯನಿಗೂ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ವಾರ್ಷಿಕ ಐದು ಕೋಟಿ ರೂ.ಗಳನ್ನು ಒದಗಿಸಲಾಗುತ್ತದೆ. ಮಾಧ್ಯಮಗಳು ಈ ಬಗ್ಗೆ ಟೀಕಿಸಿದ ಬಳಿಕವೇ ಈ ನಿಧಿಗಳನ್ನು ಬಳಸಲು ಅವರು ಮನಸ್ಸು ಮಾಡಿದ್ದರು.

ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಸಚಿನ್ ಅವರು 2015ರಲ್ಲಿ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಪುಟ್ಟಂರಾಜು ಕಂದ್ರಿಗಾ ಮತ್ತು 2015, ನವೆಂಬರ್‌ನಲ್ಲಿ ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯ ಡೋಂಜಾ ಗ್ರಾಮಗಳನ್ನು ದತ್ತು ತೆಗೆದುಕೊಂಡಿದ್ದರು.

ರೇಖಾ ಕೂಡ ತನ್ನ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು ಬಳಸಲು ಆರಂಭಿಸಿದ್ದರು. ಅವರು 2018ರಲ್ಲಿ ಪುಣೆಯ ಪಿಂಪ್ರಿ-ಚಿಂಚವಾಡಾ ಮಹಾನಗರ ಪಾಲಿಕೆ ವ್ಯಾಪ್ತಿಯ ಕಾಸರವಾಡಿಯಲ್ಲಿರುವ ಛತ್ರಪತಿ ಶಾಹು ಮಹಾರಾಜ ಶಾಲೆಯ ಕಟ್ಟಡ ನಿರ್ಮಾಣಕ್ಕೆ 3.03 ಕೋ.ರೂ.ಗಳ ಕೊಡುಗೆ ನೀಡಿದ್ದಾರೆ.

ಸೋನಿಯಾ ಗಾಂಧಿಯವರ ಲೋಕಸಭಾ ಕ್ಷೇತ್ರ ರಾಯಬರೇಲಿಯಲ್ಲಿ ಶಾಲೆಯೊಂದರ ನಿರ್ಮಾಣಕ್ಕೂ ಅವರು ತನ್ನ ಪ್ರದೇಶಾಭಿವೃದ್ಧಿ ನಿಧಿಯಿಂದ 2.5 ಕೋ.ರೂ.ಗಳ ಆರ್ಥಿಕ ನೆರವನ್ನು ಒದಗಿಸಿದ್ದಾರೆ.

ಈ ಸಂಸದರಿಬ್ಬರೂ ಇನ್ನೂ ಕೆಲವು ಯೋಜನೆಗಳಿಗೆ ಆರ್ಥಿಕ ನೆರವು ಒದಗಿಸಿದ್ದಾರೆ ಎಂದು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಜಾಲತಾಣವು ಹೇಳಿದೆಯಾದರೂ, ಯಾವುದೇ ಯೋಜನೆ ಪೂರ್ಣಗೊಂಡ ಬಗ್ಗೆ ಅದು ಮಾಹಿತಿಯನ್ನು ಒದಗಿಸಿಲ್ಲ.

ಇಲ್ಲಿದೆ ಕೊನೆಯ ಡೋಸ್: ಒಟ್ಟು 397 ಅಧಿವೇಶನ ದಿನಗಳ ಪೈಕಿ ಕೇವಲ 29 ದಿನಗಳ ಕಾಲ ಸದನಕ್ಕೆ ಹಾಜರಾಗಿದ್ದ ಸಚಿನ್ ಪಡೆದುಕೊಂಡಿರುವ ವೇತನ ಮತ್ತು ಭತ್ಯೆಗಳ ಮೊತ್ತ 86,23,266 ರೂ.ಗಳಾಗಿದ್ದರೆ, ಕೇವಲ 18 ದಿನಗಳ ಹಾಜರಾತಿಯ ದಾಖಲೆ ಹೊಂದಿರುವ ರೇಖಾ ಸ್ವೀಕರಿಸಿರುವ ಮೊತ್ತ 99,59,178 ರೂ.ಗಳು. ಇದಕ್ಕೇ ಅಲ್ಲವೇ ‘ಯಾರದ್ದೋ ದುಡ್ಡು,ಯಲ್ಲಮ್ಮನ ಜಾತ್ರೆ’ ಎಂದು ಹೇಳುವುದು?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News