ಬಿಜೆಪಿಗೆ ಆ ಪ್ರವೀಣ್ ಪೂಜಾರಿ ಬೇಕು, ಈ ಪ್ರವೀಣ್ ಪೂಜಾರಿ ಬೇಡ!

Update: 2018-03-02 11:12 GMT

ಮಂಗಳೂರು, ಮಾ.2: ರಾಜ್ಯ ವಿಧಾನಸಭಾ ಚುನಾವಣೆಯ ದಿನ ಹತ್ತಿರವಾಗುತ್ತಿರುವಂತೆಯೇ ಬಿಜೆಪಿ ವಿವಿಧ ಕಾರ್ಯಕ್ರಮಗಳ ಮೂಲಕ ಜನರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಕರಾವಳಿಯ ಮೇಲೆ ಕಣ್ಣಿಟ್ಟಿರುವ ಕೇಸರಿ ಪಕ್ಷ ಮಾರ್ಚ್ 3ರಿಂದ ‘ಮಂಗಳೂರು ಚಲೋ’ ಜನಸುರಕ್ಷಾ ಯಾತ್ರೆಯನ್ನು ಹಮ್ಮಿಕೊಂಡಿದೆ.

ಈ ಹಿನ್ನೆಲೆಯಲ್ಲಿ ಬಿಡುಗಡೆಗೊಳಿಸಿರುವ ಆಹ್ವಾನ ಪತ್ರಿಕೆಯಲ್ಲಿ ‘ಸಿದ್ದು ದರ್ಬಾರ್-ಹಿಂದುಗಳ ರಕ್ತದೋಕುಳಿ’ ಎನ್ನುವ ತಲೆಬರಹದಡಿ ಕೊಲೆಗೀಡಾದ ಹಿಂದೂಗಳ ಹೆಸರುಗಳನ್ನು ಪಟ್ಟಿ ಮಾಡಿದೆ. ಆದರೆ ಈ ಪಟ್ಟಿಯಲ್ಲಿ ಬಿಜೆಪಿ ಹಲವು ಎಡವಟ್ಟುಗಳನ್ನು ಮಾಡಿದೆ.

ಈ ಹಿಂದೆ ಸಂಸದೆ ಶೋಭಾ ಕರಂದ್ಲಾಜೆ ಒಂದು ಪಟ್ಟಿ ಮಾಡಿ ಇಷ್ಟು ಮಂದಿಯನ್ನು ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ಜಿಹಾದಿ ಶಕ್ತಿಗಳು ಕೊಂದು ಹಾಕಿವೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು. ಆದರೆ ಪಟ್ಟಿಯಲ್ಲಿರುವ ಒಬ್ಬ ಜೀವಂತವಿದ್ದು, ಕೆಲಸ ಮಾಡಿಕೊಂಡಿದ್ದ !. ಆತನನ್ನು ‘ವಾರ್ತಾ ಭಾರತಿ’ ಸಂಪರ್ಕಿಸಿ ಮಾತನಾಡಿಸಿತ್ತು. ಇನ್ನು ಆತ್ಮಹತ್ಯೆ ಮಾಡಿಕೊಂಡ, ಅಪಘಾತದಲ್ಲಿ ಮೃತರಾದವರ ಹೆಸರನ್ನೂ ಶೋಭಾ ಕೊಲೆಗೀಡಾದವರ ಪಟ್ಟಿಗೆ ಸೇರಿಸಿದ್ದನ್ನು ‘ವಾರ್ತಾ ಭಾರತಿ’ ಬೆಳಕಿಗೆ ತಂದಿತ್ತು. ಪ್ರಕರಣ ದೊಡ್ಡದಾಗಿ ವಿವಾದವಾದಾಗ ಶೋಭಾ ವಿಷಾದ ವ್ಯಕ್ತಪಡಿಸಬೇಕಾಯಿತು. ಈಗ ಮತ್ತೆ ಬಿಜೆಪಿಯಿಂದ ಕೊಲೆಗೀಡಾದ ಹಿಂದೂಗಳ ಪಟ್ಟಿಯೊಂದು ಬಿಡುಗಡೆಯಾಗಿದೆ. ಆದರೆ ಈ ಬಾರಿಯೂ ಪಟ್ಟಿ ವಿವಾದಾತೀತವಾಗಿಲ್ಲ ಎನ್ನುವುದು ವಿಶೇಷ.

ಶೋಭಾ ಕರಂದ್ಲಾಜೆಯವರು ನೀಡಿದ್ದ ಕೊಲೆಗೀಡಾದವರ ಪಟ್ಟಿಯಲ್ಲಿ 23 ಮಂದಿಯ ಹೆಸರಿತ್ತು. ಬಿಜೆಪಿ ನಾಯಕರು ಕೂಡ ಕಾರ್ಯಕ್ರಮಗಳಲ್ಲಿ, ಸಭೆಗಳಲ್ಲಿ, ಸುದ್ದಿಗೋಷ್ಠಿಗಳಲ್ಲಿ 20ಕ್ಕೂ ಹೆಚ್ಚು ಹಿಂದೂಗಳು ಕಾಂಗ್ರೆಸ್ ಆಡಳಿತಾವಧಿಯಲ್ಲಿ ಹತ್ಯೆಗೀಡಾಗಿದ್ದಾರೆ ಎಂದು ಹೇಳಿಕೆಗಳನ್ನು ನೀಡುತ್ತಿದ್ದರು. ಆದರೆ ಇದೀಗ ಬಿಜೆಪಿಯ ‘ಜನಸುರಕ್ಷಾ ಯಾತ್ರೆ’ಯ ಆಹ್ವಾನ ಪತ್ರಿಕೆಯಲ್ಲಿ ಕೇವಲ 15 ಮಂದಿಯ ಹೆಸರುಗಳಿವೆ. ಇನ್ನುಳಿದವರ ಹೆಸರು ಮಾಯವಾಗಿದೆ!.

‘ಸಿದ್ದು ದರ್ಬಾರ್-ಹಿಂದುಗಳ ರಕ್ತದೋಕುಳಿ’ ಪಟ್ಟಿಯಲ್ಲಿ ‘2016 ಆಗಸ್ಟ್ 14 ಹಿಂದೂ ಕಾರ್ಯಕರ್ತ ಪ್ರವೀಣ್ ಪೂಜಾರಿ ಕಗ್ಗೊಲೆ ಎಂದು ಬರೆಯಲಾಗಿದೆ. ಆದರೆ ಅದೇ 2016 ಆಗಸ್ಟ್ 17ರಂದು ಜಾನುವಾರು ಸಾಗಾಟ ಮಾಡಿದ ಆರೋಪದಲ್ಲಿ ಸಂಘಪರಿವಾರದ ಕಾರ್ಯಕರ್ತರಿಂದ ಹತ್ಯೆಯಾದ ಬಿಜೆಪಿಯ ಸ್ಥಳೀಯ ನಾಯಕ ಉಡುಪಿಯ ಪ್ರವೀಣ್ ಪೂಜಾರಿ ಹೆಸರನ್ನು ಕೇಸರಿ ಪಕ್ಷ ಮರೆತಿದೆ.

ಕುಶಾಲನಗರದಲ್ಲಿ ಆ.14ರಂದು ಆಟೊ ಚಾಲಕ ಪ್ರವೀಣ್ ಪೂಜಾರಿ ಎಂಬವರನ್ನು ದುಷ್ಕರ್ಮಿಗಳ ತಂಡವೊಂದು ಹತ್ಯೆಗೈದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಬಂಧಿತರು ಪಿಎಫ್ ಐ ಸಂಘಟನೆಗೆ ಸೇರಿದವರು ಎನ್ನಲಾಗಿತ್ತು. ಕುಶಾಲನಗರದಲ್ಲಿ ದುಷ್ಕರ್ಮಿಗಳಿಂದ ಕೊಲೆಗೀಡಾದ ಪ್ರವೀಣ್ ಪೂಜಾರಿಯವರ ಹೆಸರನ್ನು ಪಟ್ಟಿ ಮಾಡಿರುವ ಬಿಜೆಪಿಗೆ ಈ ಘಟನೆ ನಡೆದು 3 ದಿನಗಳ ನಂತರ ಉಡುಪಿಯಲ್ಲಿ ಸಂಘಪರಿವಾರ ಕಾರ್ಯಕರ್ತರಿಂದ ಹತ್ಯೆಗೀಡಾದ ಸ್ಥಳೀಯ ಬಿಜೆಪಿ ನಾಯಕ ಪ್ರವೀಣ್ ಪೂಜಾರಿಯವರ ಹೆಸರು ಮರೆತುಹೋಗಿದೆ.

ಇಷ್ಟೇ ಅಲ್ಲದೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಆರ್ ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ, ಸಂಘ ಪರಿವಾರ ಕಾರ್ಯಕರ್ತರಿಂದ ಬಂಟ್ವಾಳದಲ್ಲಿ ಹತ್ಯೆಗೀಡಾದ ಹರೀಶ್ ಪೂಜಾರಿ ಹೆಸರುಗಳನ್ನು ಬಿಜೆಪಿ ತನ್ನ ‘ಸಿದ್ದು ದರ್ಬಾರ್-ಹಿಂದುಗಳ ರಕ್ತದೋಕುಳಿ’ಯಲ್ಲಿ ಪಟ್ಟಿ ಮಾಡಿಲ್ಲ. ವಿನಾಯಕ ಬಾಳಿಗಾ ಕೊಲೆ ಪ್ರಕರಣದಲ್ಲಿ ಯುವ ಬ್ರಿಗೇಡ್ ನಾಯಕ ನರೇಶ್ ಶೆಣೈ ಪ್ರಮುಖ ಆರೋಪಿ.

ಕೊಣಾಜೆಯಲ್ಲಿ ಕಾರ್ತಿಕ್ ರಾಜ್ ಎಂಬವರ ಹತ್ಯೆಯ ವಿಷಯದಲ್ಲೂ ಬಿಜೆಪಿ ರಾಜಕೀಯ ಬಯಲಾಗಿತ್ತು. ಕಾರ್ತಿಕ್ ರಾಜ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಡೆದ ಪ್ರತಿಭಟನೆಯೊಂದರಲ್ಲಿ ಮಾತನಾಡಿದ್ದ ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲೆಗೆ ಬೆಂಕಿ ಹಚ್ಚುವ ಹೇಳಿಕೆ ನೀಡಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕಾರ್ತಿಕ್ ರಾಜ್ ಮನೆಗೆ ಭೇಟಿ ನೀಡಿದ್ದರು. ಶೋಭಾ ಕರಂದ್ಲಾಜೆಯವರು ಗೃಹಸಚಿವರಿಗೆ ಸಲ್ಲಿಸಿದ ‘ಕೊಲೆಯಾದವರ ಪಟ್ಟಿ’ಯಲ್ಲೂ ಕಾರ್ತಿಕ್ ಹೆಸರಿತ್ತು. ಕೊನೆಗೆ ಕುಟುಂಬದೊಳಗಿನ ವೈಷಮ್ಯದಿಂದ ಕಾರ್ತಿಕ್ ರಾಜ್ ಕೊಲೆ ನಡೆದಿದೆ ಎನ್ನುವುದು ಬಯಲಾಗಿತ್ತು. ಕಾರ್ತಿಕ್ ಕೊಲೆಗೆ ಸಂಬಂಧಿಸಿ ಅವರ ತಂಗಿ ಕಾವ್ಯಾರನ್ನು ಪೊಲೀಸರು ಬಂಧಿಸಿದ್ದರು.

ವೈಯಕ್ತಿಕ ದ್ವೇಷದ ಕೊಲೆಗೆ ರಾಜಕೀಯದ ಟಚ್?

ಇನ್ನು ಬಿಜೆಪಿಯ ಪಟ್ಟಿಯಲ್ಲಿ '2016 ಜೂನ್ 1 ಹಿಂದುಳಿದ ವರ್ಗಗಳ ನಾಯಕ ಆನೇಕಲ್ ಹರೀಶ್ ಕಗ್ಗೊಲೆ' ಎಂದು ಬರೆಯಲಾಗಿದೆ. ಆದರೆ ಬೆಂಗಳೂರು ಗ್ರಾಮಾಂತರ ಪೊಲೀಸರು ಜೂನ್ 3ರಂದು ‘ಈ ಕೊಲೆಯ ಹಿಂದೆ ಯಾವುದೇ ರಾಜಕೀಯ ದ್ವೇಷವಿಲ್ಲ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ’ ಎಂದು ಸ್ಪಷ್ಟನೆ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ರಾಜು, ಕಾರ್ತಿಕ್, ಸಂದೀಪ್ ಹಾಗು ಸಂತೋಷ್ ಎನ್ನುವವರನ್ನು ಪೊಲೀಸರು ಬಂಧಿಸಿದ್ದರು.

ಬಿಜೆಪಿಯ ಪಟ್ಟಿಯಲ್ಲಿರುವ ಮತ್ತೊಂದು ಹೆಸರು ಧಾರವಾಡ ಜಿಪಂ ಸದಸ್ಯ ಯೋಗೀಶ್ ಗೌಡರದ್ದು. ಮುಂಜಾನೆ ಯೋಗೇಶ್ ಗೌಡರನ್ನು ದುಷ್ಕರ್ಮಿಗಳ ತಂಡವೊಂದು ಕೊಲೆಗೈದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಬಸವರಾಜ, ವಿಕ್ರಂ, ವಿನಾಯಕ ಕಟಗಿ, ಕೀರ್ತಿ ಕುಮಾರ, ಸಂದೀಪ್ ಎಂಬವರನ್ನು ಬಂಧಿಸಿರುವುದಾಗಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಜಮೀನು ವಿವಾದಕ್ಕೆ ಸಂಬಂಧಿಸಿ ಈ ಕೊಲೆ ನಡೆದಿತ್ತು ಎನ್ನಲಾಗಿದೆ. ಈ ಬಗ್ಗೆ ಸದನದಲ್ಲಿ ಮಾತನಾಡಿದ್ದ ಗೃಹಸಚಿವ ರಾಮಲಿಂಗಾ ರೆಡ್ಡಿ, “ಧಾರವಾಡ ಜಿಲ್ಲಾ ಹೆಬ್ಬಳಿ ಜಿಪಂ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣವನ್ನು ಮುಚ್ಚಿಹಾಕುವ ಪ್ರಶ್ನೆಯೇ ಇಲ್ಲ. ಜಮೀನು ವೈಷಮ್ಯದ ಹಿನ್ನೆಲೆಯಲ್ಲಿ ಹತ್ಯೆ ನಡೆದಿರುವುದು ತನಿಖೆಯಿಂದ ಗೊತ್ತಾಗಿದೆ. ಈಗಾಗಲೇ ಹತ್ಯೆ ಪ್ರಕರಣ ಸಂಬಂಧ ಆರೋಪಿ ಬಸವರಾಜ ಮುತ್ತಗಿ ಸೇರಿದಂತೆ ಹತ್ತು ಮಂದಿಯನ್ನು ಬಂಧಿಸಲಾಗಿದೆ. ಹತ್ಯೆಗೀಡಾದ ಯೋಗೇಶ್ ಗೌಡ ಮೇಲೆ ಕೊಲೆ, ಕೊಲೆಯತ್ನ ಸೇರಿದಂತೆ 25ಕ್ಕೂ ಹೆಚ್ಚು ಪ್ರಕರಣಗಳಿದ್ದು, ರೌಡಿ ಪಟ್ಟಿಯಲ್ಲಿಯೂ ಇದ್ದಾನೆ” ಎಂದು ಹೇಳಿದ್ದರು.

ಪಟ್ಟಿಯಲ್ಲಿರುವ ಮತ್ತೊಂದು ಹೆಸರು ಬಂಡಿ ರಮೇಶ್. ರಮೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಜಗದೀಶ, ಮಾರಣ್ಣ, ಪವನ್, ಕಲ್ಯಾಣಕುಮಾರ, ಹರಿ, ವೀರೇಶ್, ಮಲ್ಲಿಕಾರ್ಜುನ, ಸೂರಿ, ಶಾಂತಿ ನಗರದ ಮಲ್ಲಿಕಾರ್ಜುನ ಹಾಗೂ ನಾಸಿರ್ ನನ್ನು ಪೊಲೀಸರು ಬಂಧಿಸಿದ್ದರು. ಇಷ್ಟೇ ಅಲ್ಲದೆ ಬಂಡಿ ರಮೇಶ್ ರೌಡಿ ಶೀಟರ್ ಆಗಿದ್ದ ಎಂದು ಮಾಧ್ಯಮಗಳು ವರದಿ ಮಾಡಿತ್ತು. ವೈಯಕ್ತಿಕ ದ್ವೇಷವೇ ಈ ಕೊಲೆಗೆ ಕಾರಣ ಎನ್ನಲಾಗಿತ್ತು.

ಒಟ್ಟಿನಲ್ಲಿ ಸಂಘ ಪರಿವಾರ ಕಾರ್ಯಕರ್ತರಿಂದ ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ಉಡುಪಿಯ ಪ್ರವೀಣ್ ಪೂಜಾರಿ, ಆರ್ ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಹಾಗು ಅಮಾಯಕ ಯುವಕ ಹರೀಶ್ ಪೂಜಾರಿಯವರ ಕೊಲೆಯ ಬಗ್ಗೆ ಜಾಣಮೌನ ವಹಿಸುತ್ತಾ ಬಂದಿರುವ ಬಿಜೆಪಿ ತನ್ನ ಪಟ್ಟಿಯಲ್ಲೂ ಇದೇ ಮೌನವನ್ನು ಮುಂದುವರಿಸಿದೆ. ಇಷ್ಟೇ ಅಲ್ಲದೆ ವೈಯಕ್ತಿಕ ಕಾರಣಗಳಿಂದಾದ ಕೊಲೆಗೆ ರಾಜಕೀಯ, ಧಾರ್ಮಿಕ ಬಣ್ಣ ನೀಡಿ ಪಟ್ಟಿಯಲ್ಲಿ ಹೆಸರುಗಳನ್ನು ಹಾಕಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ವಿನಾಯಕ ಬಾಳಿಗಾ, ಪ್ರವೀಣ್ ಪೂಜಾರಿ ಹಾಗು ಹರೀಶ್ ಪೂಜಾರಿಯವರ ಹೆಸರುಗಳನ್ನು ಮರೆತಿರುವ ಬಿಜೆಪಿಯ ಜನಸುರಕ್ಷಾ ಯಾತ್ರೆಯ ಬರಿಯ ಸೋಗಲಾಡಿತನವೇ ಹೊರತು ಹಿಂದೂಗಳ ಬಗೆಗಿನ ನಿಜವಾದ ಕಾಳಜಿಯಲ್ಲ ಎನ್ನುವ ಅಭಿಪ್ರಾಯ ಜನರದ್ದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News