×
Ad

ಪ್ರಪಾತಕ್ಕುರುಳಿದ ವಾಹನ: ಎಂಟು ಯಾತ್ರಿಕರು ಮೃತ್ಯು

Update: 2018-03-02 18:08 IST

ಶಿಮ್ಲಾ,ಮಾ.2: ಯಾತ್ರೆಯಿಂದ ಮರಳುತ್ತಿದ್ದ ಪಂಜಾಬ್ ಮೂಲದ ಸಿಖ್ ಭಕ್ತರಿದ್ದ ಇನೋವಾ ವಾಹನ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಪರಿಣಾಮ ಎಂಟು ಜನರು ಮೃತಪಟ್ಟು, ಓರ್ವ ಗಂಭೀರವಾಗಿ ಗಾಯಗೊಂಡಿರುವ ದುರಂತ ಘಟನೆ ಶುಕ್ರವಾರ ಬೆಳಗಿನ ಜಾವ ಹಿಮಾಚಲ ಪ್ರದೇಶದ ಬಿಲಾಸಪುರ ಜಿಲ್ಲೆಯ ಚಂಡಿಗಢ-ಮನಾಲಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸ್ವಾರ್‌ಘಾಟ್ ಬಳಿ ಸಂಭವಿಸಿದೆ.

ಪಂಜಾಬ್‌ನ ಅಮೃತಸರ ಸಮೀಪದ ಕಾಲೆ ಘನುಪುರ ನಿವಾಸಿಗಳಾದ ಈ ಯಾತ್ರಿಕರು ಕುಲು ಜಿಲ್ಲೆಯ ಮಣಿಕರಣ್‌ನಲ್ಲಿರುವ ಪ್ರಸಿದ್ಧ ಸಿಖ್ ಮಂದಿರದಿಂದ ಸ್ವಗ್ರಾಮಕ್ಕೆ ವಾಪಸಾಗುತ್ತಿದ್ದರು. ಗಾಯಾಳುವನ್ನು ನಾಲಾಗಢದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರಲ್ಲಿ ಹೆಚ್ಚಿನವರು ನಿಕಟ ಸಂಬಂಧಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

ವಾಹನದಲ್ಲಿ ನಿಗದಿಗಿಂತ ಹೆಚ್ಚಿನ ಪ್ರಯಾಣಿಕರಿದ್ದರು ಮತ್ತು ತಿರುವಿನಲ್ಲಿ ಚಾಲಕ ವಾಹನದ ಮೇಲಿನ ನಿಯಂತ್ರಣವನ್ನು ಕಳೆದುಕೊಂಡಿದ್ದು ಅಪಘಾತಕ್ಕೆ ಕಾರಣವಾಗಿ ರಬಹುದು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಮಣಿಕರಣ್ ಮಂದಿರವು ಕುಲುವಿನಿಂದ ಸುಮಾರು 50 ಕಿ.ಮೀ. ದೂರದಲ್ಲಿರುವ ಪಾರ್ವತಿ ಕಣಿವೆಯಲ್ಲಿ ಪಾರ್ವತಿ ನದಿ ದಂಡೆಯ ಮೇಲಿದ್ದು, ಉತ್ತರ ಭಾರತದಲ್ಲಿಯ ಅತ್ಯಂತ ದಟ್ಟಣೆಯ ಸಿಖ್‌ರ ಪವಿತ್ರ ಯಾತ್ರಾಸ್ಥಳಗಳಲ್ಲಿ ಒಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News