×
Ad

ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ದಲಾಯಿ ಲಾಮಾಗೆ ಸಂಪೂರ್ಣ ಸ್ವಾತಂತ್ರ್ಯ: ಭಾರತ

Update: 2018-03-02 21:06 IST

ಹೊಸದಿಲ್ಲಿ, ಮಾ.2: ಟಿಬೆಟ್‌ನ ಆಧ್ಯಾತ್ಮಿಕ ಗುರು ದಲಾಯಿ ಲಾಮಾರಿಗೆ ಭಾರತದಲ್ಲಿ ತಮ್ಮ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಸಂಪೂರ್ಣ ಸ್ವಾತಂತ್ರ ನೀಡಲಾಗಿದೆ ಎಂದು ಕೇಂದ್ರ ಸರಕಾರದ ಅಧಿಕೃತ ವಕ್ತಾರರು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. ಚೀನಾದ ಜೊತೆ ಸಂಬಂಧ ಸುಧಾರಣೆಗಾಗಿ ಕೇಂದ್ರ ಸರಕಾರವು ಭಾರತದಲ್ಲಿ ದಲಾಯಿ ಲಾಮಾ ಅವರ ಕಾರ್ಯಕ್ರಮಗಳನ್ನು ಮೊಟಕುಗೊಳಿಸುವಂತೆ ಸೂಚಿಸಿದೆ ಎಂಬ ಕೆಲವು ಮಾಧ್ಯಮ ವರದಿಗಳಿಗೆ ಸ್ಪಷ್ಟೀಕರಣವಾಗಿ ಈ ಹೇಳಿಕೆಯನ್ನು ನೀಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ತಿಳಿಸಿದೆ. ದಲಾಯಿ ಲಾಮಾ ಅವರ ಬಗ್ಗೆ ಭಾರತದ ನಿಲುವು ಸ್ಪಷ್ಟವಾಗಿದೆ. ಅವರೊಬ್ಬ ಬಹುವಾಗಿ ಪೂಜಿಸಲ್ಪಡುವ ಧಾರ್ಮಿಕ ಗುರುವಾಗಿದ್ದಾರೆ ಮತ್ತು ಭಾರತೀಯರು ಅವರನ್ನು ಬಹಳ ಗೌರವಿಸುತ್ತಾರೆ. ಅವರ ಬಗೆಗಿನ ನಿಲುವಲ್ಲಿ ಯಾವುದೇ ಬದಲಾವಣೆಯಿಲ್ಲ. ಅವರು ಭಾರತದಲ್ಲಿ ತಮ್ಮ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಸಂಪೂರ್ಣ ಸ್ವಾತಂತ್ರ್ಯ ಹೊಂದಿದ್ದಾರೆ ಎಂದು ಸಚಿವಾಲಯ ಬಿಡುಗಡೆ ಮಾಡಿದ ಪ್ರಕಟನೆಯಲ್ಲಿ ತಿಳಿಸಿದೆ. ಇದಕ್ಕೂ ಮೊದಲು ಫೆಬ್ರವರಿಯಲ್ಲಿ, ಚೀನಾದ ಜೊತೆ ಭಾರತದ ಸಂಬಂಧವನ್ನು ಸುಧಾರಿಸುವ ಕ್ರಮದ ಭಾಗವಾಗಿ ದಲಾಯಿ ಲಾಮಾರ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಸೂಚಿಸಿ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅಧಿಕೃತ ಹೇಳಿಕೆ ನೀಡಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News