×
Ad

ಪಿಎನ್‌ಬಿಯ ಮತ್ತೊಬ್ಬ ಅಧಿಕಾರಿಯ ಬಂಧನ

Update: 2018-03-02 21:37 IST

ಹೊಸದಿಲ್ಲಿ, ಮಾ.2: ಪಂಜಾಬ್ ಬ್ಯಾಂಕ್‌ನಲ್ಲಿ ನಡೆದಿರುವ ಸುಮಾರು 12,723 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ)ನ ಮತ್ತೊಬ್ಬ ಹಿರಿಯ ಅಧಿಕಾರಿಯನ್ನು ಸಿಬಿಐ ಬಂಧಿಸಿದ್ದು , ಮುಂಬೈಯ ಚಾಲ್(ವಸತಿ ಕಟ್ಟಡ) ಒಂದರಿಂದ ಒಪ್ಪಂದದ ಕುರಿತ ದಾಖಲೆಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಕೇಂದ್ರ ಮುಂಬೈಯ ಉಪನಗರ ವಡಾಲದಲ್ಲಿರುವ ಚಾಲ್ ಒಂದರ ಸಣ್ಣ ಕೊಠಡಿಯಲ್ಲಿ ಈ ದಾಖಲೆಪತ್ರಗಳನ್ನು ಅಡಗಿಸಿ ಇಡಲಾಗಿತ್ತು. ಈ ನಿವೇಶನ ನೀರವ್ ಮೋದಿಗೆ ಸೇರಿದ್ದು ಎನ್ನಲಾಗಿದೆ. ಪಿಎನ್‌ಬಿಯ ಬ್ರಾಡಿ ಹೌಸ್ ಶಾಖೆಯಲ್ಲಿ 2011-15ರವರೆಗಿನ ಲೆಕ್ಕಪತ್ರ ಪರೀಕ್ಷೆ(ಆಡಿಟಿಂಗ್)ಯ ಜವಾಬ್ದಾರಿ ನಿರ್ವಹಿಸಿದ್ದ ನಿವೃತ್ತ ಮುಖ್ಯ ಆಂತರಿಕ ಲೆಕ್ಕಪತ್ರ ಪರೀಕ್ಷಕ(ಆಡಿಟರ್) ಬಿಷ್ಣುಬ್ರತ ಮಿಶ್ರರನ್ನು ಸಿಬಿಐ ಗುರುವಾರ ಬಂಧಿಸಿದೆ. ಅಲ್ಲದೆ ಪ್ರಕರಣದ ಕುರಿತಂತೆ ಇತರ 13 ಮಂದಿಯನ್ನೂ ಪ್ರಶ್ನಿಸಲಾಗಿದೆ. ವಿಚಾರಣೆ ಸಂದರ್ಭ ದೊರೆತ ಮಾಹಿತಿಯ ಮೇರೆಗೆ ಹಲವೆಡೆ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಧ್ಯೆ ತನಿಖೆಗೆ ಹಾಜರಾಗದೆ ತಲೆಮರೆಸಿಕೊಂಡಿರುವ ನೀರವ್ ಮೋದಿಗೆ ಖಡಕ್ ಪತ್ರ ಬರೆದಿರುವ ಸಿಬಿಐ, ಯಾವ ದೇಶದಲ್ಲಿ ಇದ್ದೀರೋ ಆ ದೇಶದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಬೇಕು ಎಂದು ಸೂಚಿಸಿದೆ. ಆರೋಪಿಯು ತನಿಖೆಗೆ ಒಳಪಡುವುದು ಕಡ್ಡಾಯವಾಗಿದ್ದು ಭಾರತೀಯ ರಾಯಭಾರಿ ಕಚೇರಿಯನ್ನು ತಕ್ಷಣ ಸಂಪರ್ಕಿಸಿದರೆ ನೀವು ಭಾರತಕ್ಕೆ ಪ್ರಯಾಣಿಸಲು ಅಗತ್ಯವಿರುವ ಕ್ರಮಗಳನ್ನು ಅವರು ಕೈಗೊಳ್ಳುತ್ತಾರೆ ಎಂದು ಸಿಬಿಐ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News