ಎಸ್‌ಎಸ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆ: ಅಭ್ಯರ್ಥಿಗಳು ಸಾಬೀತು ಮಾಡುವ ಪುರಾವೆ ನೀಡಿದರೆ ಸಿಬಿಐ ತನಿಖೆ
ಹೊಸದಿಲ್ಲಿ, ಮಾ. 2: ಎಸ್‌ಎಸ್‌ಸಿ, ಸಿಜಿಎಲ್-2017ರ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವುದನ್ನು ವಿರೋಧಿಸಿ ಆಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ವೈಯುಕ್ತಿಕ, ಪಿಂಚಣಿ ಹಾಗೂ ಸಾರ್ವಜನಿಕ ದೂರು ಖಾತೆಯ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್ ಎಸ್‌ಎಸ್‌ಸಿ ಅಧ್ಯಕ್ಷ ಅಶಿಮ್ ಖುರಾನಾ ಅವರೊಂದಿಗೆ ತೆರಳಿ ಪ್ರತಿಭಟನಕಾರರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ತಾಂತ್ರಿಕ ಕಾರಣಕ್ಕಾಗಿ ಆಯೋಗ 2018 ಫೆಬ್ರವರಿ 21ರ ಪರೀಕ್ಷೆಯ ಪ್ರಶ್ನೆ ಪತ್ರಿಕೆ 1ನ್ನು ರದ್ದುಗೊಳಿಸಿದ್ದರೂ ರದ್ದುಗೊಂಡ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಸಚಿವರು ನಿರ್ದೇಶ ನೀಡಿದ್ದರು ಎಂದು ಎಸ್‌ಎಸ್‌ಸಿ ತಿಳಿಸಿದೆ.
ಅಭ್ಯರ್ಥಿಗಳು ಸಾಬೀತು ಮಾಡುವ ಪುರಾವೆ ನೀಡಿದರೆ ಈ ಬಗ್ಗೆ ತನಿಖೆ ನಡೆಸಲು ಸಿಬಿಐಗೆ ಶಿಫಾರಸು ಮಾಡಲಾಗುವುದು ಎಂದು ಆಯೋಗ ಹೇಳಿದೆ.
ಈ ವಿಷಯದ ಕುರಿತ ಎಸ್‌ಎಸ್‌ಸಿಯಿಂದ ಉಲ್ಲೇಖಿತ ದಾಖಲೆಗಳನ್ನು ದಿಲ್ಲಿ ಪೊಲೀಸ್‌ನ ಕ್ರೈಮ್ ಬ್ರಾಂಚ್ ಈಗಾಗಲೇ ವಶಪಡಿಸಿಕೊಂಡಿದ್ದು, ಸಮಯ ಮಿತಿಯ ಒಳಗಡೆ ತನಿಖೆ ಪೂರ್ಣಗೊಳಿಸಲಿದೆ ಹಾಗೂ ಮುಂದಿನ ಅತ್ಯಗತ್ಯದ ಕ್ರಮಕ್ಕೆ ವರದಿ ಸಲ್ಲಿಸಲಿದೆ ಎಂದು ಆಯೋಗದ ಹೇಳಿಕೆ ತಿಳಿಸಿದೆ.