ಕಬಾಲಿ ನಂತರ ತೆರೆ ಮೇಲೆ ಬರಲಿದ್ದಾನೆ ಕಾಲಾ
ಸೂಪರ್‌ಸ್ಟಾರ್ ರಜನಿಕಾಂತ್ ಚಿತ್ರ ಎಂದರೆ ಅವರ ಅಭಿಮಾನಿಗಳಿಗೆ ಮಾತ್ರವಲ್ಲ ಇತರ ಚಿತ್ರ ರಸಿಕರಿಗೂ ಸುಗ್ಗಿಯೋ ಸುಗ್ಗಿ. ಹಾಗಿದೆ ತಲೈವಾನ ತೆರೆ ಮೇಲಿನ ಪ್ರಭಾವ. ಈ ಹಿಂದೆ ಕಬಾಲಿ ಯಾಗಿ ಚಿತ್ರಪ್ರೇಮಿಗಳಿಗೆ ಮನರಂಜನೆಯ ರಸದೌತಣ ಉಣಬಡಿಸಿದ್ದ ರಜನಿ ಈಗ ಕಾಲಾ ಆಗಿ ಮತ್ತೊಮ್ಮೆ ತೆರೆಯ ಮೇಲೆ ಸದ್ದು ಮಾಡಲು ಸಿದ್ಧವಾಗಿದ್ದಾರೆ. ಈ ಸಿನೆಮಾವನ್ನು ಕೂಡಾ ಕಬಾಲಿ ಚಿತ್ರ ನಿರ್ದೇಶಿಸಿರುವ ಪ ರಂಜಿತ್ ನಿರ್ದೇಶಿಸಿದ್ದಾರೆ. ಈ ಕುರಿತು ರಜನಿ ಅಳಿಯ ಧನುಷ್ ಪೋಸ್ಟರ್‌ವೊಂದನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಕಪ್ಪು ಬಟ್ಟೆ ಧರಿಸಿರುವ ರಜನಿ ನಿಂತಿರುವ ಭಂಗಿ ಈಗಾಗಲೇ ಸಿನೆಮಾ ಬಗ್ಗೆ ಇದ್ದ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಕಾಲಾ ಚಿತ್ರದ ಮೊದಲ ಟೀಸರ್ ಮಾರ್ಚ್ 1ರಂದು ಬಿಡುಗಡೆಯಾಗಲಿದೆ ಎಂದು ಧನುಷ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಕಾಲಾ ಚಿತ್ರದಲ್ಲಿ ರಜನಿ ಜೊತೆ ಬಾಲಿವುಡ್‌ನ ಮೇರು ನಟ ನಾನಾ ಪಾಟೇಕರ್, ಹುಮಾ ಖುರೇಷಿ, ಸಂಪತ್‌ರಾಜ್, ಅಂಜಲಿ ಪಾಟೀಲ್ ಹಾಗೂ ಪಂಕಜ್ ತ್ರಿಪಾಠಿ ನಟಿಸುತ್ತಿದ್ದಾರೆ.
ಒಂದೆಡೆ ಕಾಲಾ ಅಬ್ಬರ ಜೋರಾಗಿದ್ದರೆ ಮತ್ತೊಂದೆಡೆ ಭಾರತದ ಸ್ಪೀಲ್‌ಬರ್ಗ್ ಎಂದೇ ಕರೆಯಲ್ಪಡುವ ಶಂಕರ್ ನಿರ್ದೇಶನದ 2.0 ಬಿಡುಗಡೆಗೂ ದಿನಗಣನೆ ಆರಂಭವಾಗಿದೆ. 2010ರ ಸೂಪರ್ ಹಿಟ್ ರೋಬೊ ಚಿತ್ರದ ಮುಂದುವರಿದ ಭಾಗವಾಗಿರುವ 2.0 ಈಗಾಗಲೇ ತನ್ನ ಮೇಕಿಂಗ್‌ನಿಂದಾಗಿ ಸುದ್ದಿ ಮಾಡಿದೆ. ಎ.ಆರ್. ರೆಹ್ಮಾನ್ ಸಂಗೀತ ಸಂಯೋಜಿಸಿರುವ 2.0ನ ಎರಡು ಹಾಡುಗಳು ಈಗಾಗಲೇ ಬಿಡುಗಡೆಯಾಗಿವೆೆ. ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ 2.0 ಚಿತ್ರದಲ್ಲಿ ಖಳನಾಯಕನ ಪಾತ್ರ ನಿರ್ವಹಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ರಜನಿ, ವಿಜ್ಞಾನಿ ವಸೀಗರನ್ ಹಾಗೂ ರೊಬೊಟ್ ಚಿಟ್ಟಿಯ ಪಾತ್ರಕ್ಕೆ ಮತ್ತೊಮ್ಮೆ ಜೀವತುಂಬಲಿದ್ದಾರೆ.
ಈ ಎರಡು ಸಿನೆಮಾಗಳ ಜೊತೆ ರಜನಿ ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಸಿನೆಮಾಕ್ಕೂ ಹಸಿರು ನಿಶಾನೆ ತೋರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸುಬ್ಬರಾಜು, ಇದು ನಾನು ಬಹಳ ಹಿಂದಿನಿಂದ ಕಾಣುತ್ತಿದ್ದ ಅತ್ಯಂತ ದೊಡ್ಡ ಕನಸು ನನಸಾಗುವ ಕಾಲ. ಅದನ್ನು ನಾನು ಶಬ್ದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ತಲೈವಾಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಒಂದೆಡೆ ರಾಜಕೀಯ ಪ್ರವೇಶಿಸಲು ಸಿದ್ಧತೆ ಮಾಡುತ್ತಿರುವ ರಜನಿ ಮತ್ತೊಂದೆಡೆ ಒಂದರ ಹಿಂದೆ ಒಂದರಂತೆ ಸಿನೆಮಾಗಳನ್ನು ಒಪ್ಪಿಕೊ ಳ್ಳುತ್ತಿದ್ದಾರೆ. ಬೆಳ್ಳಿತೆರೆಯಲ್ಲಿ ಅವರಿಗೆ ಸಿಕ್ಕ ಯಶಸ್ಸು ರಾಜಕೀಯದಲ್ಲಿ ಸಿಗುವುದೇ.. ಕಾಲವೇ ಉತ್ತರಿಸಬೇಕು.