ಬಲ್ಗೇರಿಯಾದಲ್ಲಿ ನಡೆಯುತ್ತಿದೆ ಬ್ರಹ್ಮಾಸ್ತ್ರಕ್ಕೆ ಸಾಹಸ
ರಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್ ಇದೇ ಮೊದಲ ಬಾರಿ ಸಿನೆಮಾದಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ. ಕರಣ್ ಜೋಹರ್ ನಿರ್ಮಾಣದಲ್ಲಿ ಅಯನ್ ಮುಖರ್ಜಿ ನಿರ್ದೇಶಿಸುತ್ತಿರುವ ‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ಬ್ರಹ್ಮಾಸ್ತ್ರಕ್ಕೆ ಸಾಹಸ ದೃಶ್ಯಗಳಿಗೆ ರಣ್‌ಬೀರ್ ಮತ್ತು ಆಲಿಯಾರನ್ನು ಇಸ್ರೇಲ್‌ನ ಇಡೊ ಪೋರ್ಟಲ್ ತರಬೇತುಗೊಳಿಸುತ್ತಿದ್ದಾರೆ. ಬ್ರಹ್ಮಾಸ್ತ್ರ ಸಿನೆಮಾವನ್ನು ಮೂರು ಕಂತುಗಳಲ್ಲಿ ನಿರ್ಮಿಸಲಾಗುತ್ತಿದೆ. ಇದರ ಮೊದಲ ಕಂತು 2019ರ ಆಗಸ್ಟ್ 15ರಂದು ಬಿಡುಗಡೆ ಯಾಗುವ ನಿರೀಕ್ಷೆಯಿದೆ. ಇದೊಂದು ಕಾಲ್ಪನಿಕ ಸಾಹಸಮಯ ಸಿನೆಮಾವಾಗಿದ್ದು ಹಲವಾರು ಅಪಾಯಕಾರಿ ಸಾಹಸ ದೃಶ್ಯಗಳನ್ನು ಹೊಂದಿದೆ ಎಂದು ಹೇಳುತ್ತಾರೆ. ಸಾಹಸ ತರಬೇತುದಾರ ಇಡೊ ಪೋರ್ಟಲ್. ಅವರು ಈಗಾಗಲೇ ರಣ್‌ಬೀರ್ ಕಪೂರ್, ಆಲಿಯಾ ಭಟ್ ಹಾಗೂ ವೌನಿ ರಾಯ್‌ಗೆ ಕೆಲವೊಂದು ಸ್ಟಂಟ್‌ಗಳನ್ನು ಕಲಿಸಿರುವುದಾಗಿ ಟ್ವೀಟ್ ಮಾಡಿದ್ದಾರೆ. ಅಯನ್ ಮುಖರ್ಜಿ ಈ ಹಿಂದೆ ರಣ್‌ಬೀರ್ ಕಪೂರ್ ಜೊತೆ ‘ಏ ಜವಾನಿ ಹೇ ದಿವಾನಿ’, ‘ವೇಕ್ ಅಪ್ ಸಿಡ್’ ಚಿತ್ರಗಳಲ್ಲಿ ಕೆಲಸ ಮಾಡಿದ್ದರೆ, ಆಲಿಯಾ ಜೊತೆಗೆ ಬ್ರಹ್ಮಾಸ್ತ್ರ ಆತನ ಮೊದಲ ಸಿನೆಮಾ ಆಗಿದೆ. ಕಿರುಪರದೆಯಲ್ಲಿ ನಾಗಿನ್ ಧಾರಾವಾಹಿ ಮೂಲಕ ಮನೆಮಾತಾಗಿರುವ ವೌನಿ ರಾಯ್ ರೀಮಾ ಕಗ್ತಿ ನಿರ್ದೇಶನದ ಗೋಲ್ಡ್ ಸಿನೆಮಾದ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಸಿನೆಮಾದಲ್ಲಿ ಅಕ್ಷಯ್ ಕುಮಾರ್ ಜೊತೆ ಆಕೆ ನಟಿಸುತ್ತಿದ್ದಾರೆ. ಬ್ರಹ್ಮಾಸ್ತ್ರದಲ್ಲಿ ಆಕೆಯದ್ದು ಖಳನಾಯಕಿಯ ಪಾತ್ರ.
ಬ್ರಹ್ಮಾಸ್ತ್ರದಲ್ಲಿ ರಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್ ಜೊತೆಗೆ ಅಮಿತಾಭ್ ಬಚ್ಚನ್ ಕೂಡಾ ನಟಿಸುತ್ತಿದ್ದಾರೆ.