×
Ad

ಐಎನ್‌ಎಕ್ಸ್ ಮೀಡಿಯಾ ಪ್ರಕರಣ: ಇಂದ್ರಾಣಿ, ಪೀಟರ್ ಮುಖರ್ಜಿ ಎದುರು ಕಾರ್ತಿ ವಿಚಾರಣೆ

Update: 2018-03-04 13:26 IST

ಹೊಸದಿಲ್ಲಿ, ಮಾ.4: ಐಎನ್‌ಎಕ್ಸ್ ಮೀಡಿಯಾ ಆರೋಪಿಸಿರುವ ಲಂಚ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಕಸ್ಟಡಿಯಲ್ಲಿರುವ ಕಾರ್ತಿ ಚಿದಂಬರಂರನ್ನು ಮುಂಬೈಗೆ ಕರೆದೊಯ್ದು ಇಂದ್ರಾಣಿ ಹಾಗೂ ಪೀಟರ್ ಮುಖರ್ಜಿ ಎದುರು ವಿಚಾರಣೆ ನಡೆಸಲು ನಿರ್ಧರಿಸಲಾಗಿದೆ.

ಕಾರ್ತಿ ಅವರನ್ನು ಮುಂಬೈನ ಬೈಕಲಾ ಜೈಲಿಗೆ ಕರೆದೊಯ್ದು ಇಂದ್ರಾಣಿ ಹಾಗೂ ಪೀಟರ್ ಮುಖರ್ಜಿ ಅವರನ್ನು ಮುಖಾಮುಖಿಯಾಗಿಸಿ ತನಿಖೆ ನಡೆಸಲು ಸಿಬಿಐ ಅಧಿಕಾರಿಗಳು ನಿರ್ಧರಿಸಿದ್ದಾರೆ. ಇಂದ್ರಾಣಿ ಹಾಗೂ ಪೀಟರ್ ಅವರು ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಸ್ತುತ ಜೈಲುಪಾಲಾಗಿದ್ದಾರೆ.

ಕಾರ್ತಿ ಅವರು ಮಾಜಿ ವಿತ್ತಸಚಿವ ಪಿ.ಚಿದಂಬರಂ ಪ್ರಭಾವ ಬಳಸಿಕೊಂಡು ಹತ್ಯೆ ಆರೋಪಿಗಳಾದ ಪೀಟರ್ ಹಾಗೂ ಇಂದ್ರಾಣಿ ಮುಖರ್ಜಿ ನೇತೃತ್ವದ ಐಎನ್‌ಎಕ್ಸ್ ಮೀಡಿಯಾಕ್ಕೆ ವಿದೇಶಿ ಬಂಡವಾಳ ಪ್ರಚಾರ ಮಂಡಳಿ(ಎಫ್‌ಐಪಿಬಿ)ಅನುಮತಿ ನೀಡಿದ್ದಾರೆ. ಐಎನ್‌ಎಕ್ಸ್ ಮೀಡಿಯಾ ವಿದೇಶಿ ನಿಧಿ ಸ್ವೀಕಾರದಲ್ಲಿ ನಿಯಮ ಉಲ್ಲಂಘಿಸಿರುವ ಗಂಭೀರ ಆರೋಪ ಎದುರಿಸುತ್ತಿದೆ.

ಎಫ್‌ಐಪಿಬಿಯಿಂದ ಅನುಮತಿ ಪಡೆಯಲು ಕಾರ್ತಿ ತಂದೆ ಪಿ.ಚಿದಂಬರಂ ಸೂಚನೆಯಂತೆ ಕಾರ್ತಿಗೆ 7 ಲಕ್ಷ ಡಾಲರ್ ಲಂಚ ನೀಡಿದ್ದಾಗಿ ಇಂದ್ರಾಣಿ ಮುಖರ್ಜಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಬಿಐ ಕಾರ್ತಿ ಅವರನ್ನು ಫೆ.28 ರಂದು ವಿಮಾನನಿಲ್ದಾಣದಲ್ಲಿ ಬಂಧಿಸಿ ತನ್ನ ವಶಕ್ಕೆ ಪಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಇತರ ಆರೋಪಿಗಳು ಹಾಗೂ ಶಂಕಿತರ ಮುಖಾಮುಖಿಯಾಗಿಸಲು ಕಾರ್ತಿ ಅವರನ್ನು ತನ್ನ ಕಸ್ಟಡಿಗೆ ಒಪ್ಪಿಸಬೇಕು ಎಂದು ವಿಶೇಷ ನ್ಯಾಯಾಲಯಕ್ಕೆ ಸಿಬಿಐ ಪ್ರಾಸಿಕ್ಯೂಟರ್ ಒತ್ತಾಯಿಸಿದ್ದರು.

‘‘ಇಂದ್ರಾಣಿ ಅವರಿಂದ ಸಿಬಿಐ ಬಲವಂತದ ತಪ್ಪೊಪ್ಪಿಗೆ ಪಡೆದಿದೆ’’ ಎಂದು ಕಾರ್ತಿ ಪರ ವಕೀಲ ಅಭಿಷೇಕ್ ಸಿಂಘ್ವಿ ಆರೋಪಿಸಿದ್ದಾರೆ. ‘‘ಇಂದ್ರಾಣಿ ನ್ಯಾಯಾಂಗ ಕಸ್ಟಡಿಯಲ್ಲಿದ್ದಾರೆ. ಅವರ ಹೇಳಿಕೆಯನ್ನು ಪುರಾವೆಯಾಗಿ ಪರಿಗಣಿಸಲಾಗುವುದು’’ ಎಂದು ಸಿಬಿಐ ಪ್ರಾಸಿಕ್ಯೂಟರ್ ತುಷಾರ್ ಮೆಹ್ತಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News