ಶ್ರೀದೇವಿ ಅಂತಿಮ ಕ್ಷಣದಲ್ಲಿ ಏನೆಲ್ಲಾ ನಡೆಯಿತು ಎನ್ನುವ ಬಗ್ಗೆ ಬೋನಿ ಕಪೂರ್ ಹೇಳಿದ್ದೇನು?

Update: 2018-03-04 11:18 GMT

ಮುಂಬೈ, ಮಾ.4: ಬಹುಭಾಷಾ ನಟಿ ಶ್ರೀದೇವಿ ಹಠಾತ್ ಸಾವು ಚಿತ್ರರಂಗಕ್ಕೆ ಆಘಾತ ತಂದಿದೆ. ದುಬೈ ಹೋಟೆಲ್‍ನ ಬಾತ್‍ಟಬ್‍ನಲ್ಲಿ ಆಕಸ್ಮಿಕವಾಗಿ ಮುಳುಗಿ ಸತ್ತಿದ್ದಾರೆ ಎಂದು ವರದಿಯಾಗಿದ್ದರೂ, ಸಾವಿನ ಸುತ್ತ ಹಲವು ಸಂಶಯಗಳು ಹುಟ್ಟಿಕೊಂಡಿದ್ದವು. ಆದರೆ ಅಂದು ರಾತ್ರಿ ನಿಜವಾಗಿ ನಡೆದದ್ದೇನು ಎನ್ನುವುದನ್ನು ಪತಿ ಬೋನಿ ಕಪೂರ್ ತಮ್ಮ ಸ್ನೇಹಿತ, ಚಿತ್ರ ವಿಮರ್ಶಕ ಕೋಮಲ್ ನಾಥ ಅವರ ಬಳಿ ಹೇಳಿಕೊಂಡಿದ್ದಾರೆ.

ಘಟನೆಯ ಪೂರ್ಣ ವಿವರಗಳನ್ನು ಕೋಮಲ್ ತಮ್ಮ ಬ್ಲಾಗ್‍ನಲ್ಲಿ ಹಂಚಿಕೊಂಡಿದ್ದಾರೆ. ಮೋಹಿತ್ ವಿವಾಹದ ಬಳಿಕ ಶ್ರೀದೇವಿ ತನ್ನ ಪುತ್ರಿ ಜಾಹ್ನವಿಗಾಗಿ ಶಾಪಿಂಗ್ ಮಾಡಲು ಬಯಸಿದ್ದರು. ಜಾಹ್ನವಿ 'ಧಡಕ್' ಚಿತ್ರದ ಚಿತ್ರೀಕರಣದ ನಿಮಿತ್ತ ಮುಂಬೈನಲ್ಲೇ ಉಳಿಯಬೇಕಾಗಿ ಬಂದದ್ದರಿಂದ ದುಬೈಗೆ ಬರಲು ಸಾಧ್ಯವಾಗಲಿಲ್ಲ. ಶಾಪಿಂಗ್ ಪಟ್ಟಿ ಸಿದ್ಧವಾಗಿತ್ತು. ಆದರೆ ಮೊಬೈಲ್ ಕಳೆದು ಹೋದ ಕಾರಣ ಕೊಠಡಿಯಲ್ಲೇ ಉಳಿಯಲು ಬಯಸಿದರು. ಈ ಕಾರಣದಿಂದ ಬೋನಿ ದುಬೈಗೆ ಟಿಕೆಟ್ ಕಾಯ್ದಿರಿಸಲು ಮುಂದಾದರು ಎಂದು ಬ್ಲಾಗ್‍ನಲ್ಲಿ ವಿವರಿಸಿದ್ದಾರೆ.

ಬೋನಿ ಕಪೂರ್ ಕೋಮಲ್ ನಾಥ ಬಳಿ ಹೇಳಿರುವ ಪ್ರಮುಖ ಅಂಶಗಳು ಇಲ್ಲಿವೆ: 

"24ರಂದು ಮುಂಜಾನೆ ಆಕೆಯ ಜತೆ ಮಾತನಾಡಿದ್ದೆ. ಆದರೆ ಸಂಜೆ ದುಬೈನಲ್ಲಿ ಜತೆ ಸೇರಿಕೊಳ್ಳುತ್ತೇನೆ ಎಂದು ಹೇಳಲಿಲ್ಲ. ಮಗಳು ಜಾಹ್ನವಿ ಕೂಡಾ ನಾನು ದುಬೈಗೆ ಹೋಗುವುದನ್ನು ಅನುಮೋದಿಸಿದಳು. ಏಕೆಂದರೆ ತಾಯಿ ಒಬ್ಬಳೇ ಇರುವುದು ಅವಳಿಗೂ ಆತಂಕ ತಂದಿತ್ತು. ಸಾಮಾನ್ಯವಾಗಿ ಒಬ್ಬಂಟಿಯಾಗಿರದ ತಾಯಿ ಪಾಸ್‍ಪೋರ್ಟ್ ಅಥವಾ ಮಹತ್ವದ ಇತರ ದಾಖಲೆಗಳನ್ನು ಕಳೆದುಕೊಂಡರೆ ಏನು ಮಾಡುವುದು ಎನ್ನುವುದು ಆಕೆಯ ಚಿಂತೆಯಾಗಿತ್ತು" ಎಂದು ಬೋನಿ ಹೇಳಿದ್ದಾರೆ.

"24ರಂದು ಮುಂಬೈ ವಿಮಾನ ನಿಲ್ದಾಣದಿಂದ 3.30ಕ್ಕೆ ದುಬೈಗೆ ಹೊರಡಲು ಲಾಂಜ್‍ನಲ್ಲಿ ಕಾಯುತ್ತಿದ್ದಾಗಲೂ ಶ್ರೀದೇವಿ ಕರೆ ಮಾಡಿದ್ದಳು. ಪತ್ನಿಗೆ ಅಚ್ಚರಿ ನೀಡಬೇಕೆಂಬ ಕಾರಣದಿಂದ ಮುಂದಿನ ಕೆಲ ಗಂಟೆ ಕಾಲ ಮೀಟಿಂಗ್‍ಗಳಲ್ಲಿ ಬ್ಯುಸಿ ಇರುವುದಾಗಿ ಹೇಳಿದ್ದೆ. ಜತೆಗೆ ಫೋನ್ ಸ್ವಿಚ್ ಆಫ್ ಇದ್ದರೂ ಚಿಂತೆ ಮಾಡಬೇಡ ಎಂದು ಹೇಳಿದ್ದರು. ಜುಮೆರಾಹ್ ಟವರ್ ಹೋಟೆಲ್‍ನಲ್ಲಿ ಅಚ್ಚರಿ ನೀಡುವುದು ಪ್ಲಾನ್ ಆಗಿತ್ತು. ಸಂಜೆ 6:20ಕ್ಕೆ ಹೋಟೆಲ್‍ನಲ್ಲಿ ಚೆಕ್ ಇನ್ ಮಾಡಿ ನಕಲಿ ಕೀ ಪಡೆದು ಬ್ಯಾಗನ್ನು ತಡವಾಗಿ ರೂಮಿಗೆ ತಲುಪಿಸುವಂತೆ ಸಹಾಯಕನಿಗೆ ಸೂಚಿಸಿ ದಿಢೀರ್ ಅಚ್ಚರಿ ನೀಡಲು ಬಯಸಿದ್ದೆ"

ಬೋನಿ ನಕಲಿ ಕೀಯಿಂದ ಬಾಗಿಲು ತೆಗೆದಾಗ ಇಬ್ಬರೂ ತಬ್ಬಿಕೊಂಡರು. ಆದರೆ ತನ್ನ ಸಲುವಾಗಿ ದುಬೈಗೆ ಬರುತ್ತೀರಿ ಎಂಬ ವಿಶ್ವಾಸವಿತ್ತು ಎಂದು ಶ್ರೀದೇವಿ ಹೇಳಿದ್ದರು. 

ಬೋನಿ ಫ್ರೆಶಪ್ ಆಗಿ ಹೊರಬಂದು ಡಿನ್ನರ್ ಗೆ ಅಣಿಯಾಗುವಂತೆ ಕೇಳಿ, ಶಾಪಿಂಗ್ ಅನ್ನು ಮರುದಿನಕ್ಕೆ ಮುಂದೂಡುವಂತೆ ಕೋರಿದರು. 25ರಂದು ರಾತ್ರಿ ಭಾರತಕ್ಕೆ ಇಬ್ಬರೂ ಜತೆಗೆ ವಾಪಸ್ಸಾಗುವ ಸಲುವಾಗಿ ಪ್ರಯಾಣದ ಟಿಕೆಟ್ ಬದಲಿಸಿದರು. ಅಂದು ಇಡೀ ದಿನ ಶಾಪಿಂಗ್ ಮಾಡಲು ನಿರ್ಧರಿಸಿದ್ದರು. ಶ್ರೀದೇವಿ ಸಂಪೂರ್ಣ ಆರಾಮದಿಂದ ಸ್ನಾನ ಮಾಡಿ ಸಿದ್ಧವಾಗುವುದಾಗಿ ಹೇಳಿ ಸ್ನಾನಕ್ಕೆ ಹೋದರು. ಬೋನಿ ಕ್ರಿಕೆಟ್ ನೋಡುತ್ತಾ ಕಾಲ ಕಳೆದರು. 15- 20 ನಿಮಿಷ ಪಾಕಿಸ್ತಾನ್ ಸೂಪರ್ ಲೀಗ್ ಕ್ರಿಕೆಟ್ ವೀಕ್ಷಿಸಿದರು. ಆಗಲೇ ರಾತ್ರಿ 8 ಕಳೆದಿತ್ತು. ಶನಿವಾರ ರೆಸ್ಟೋರೆಂಟ್‍ಗಳೆಲ್ಲ ಜನರಿಂದ ತುಂಬಿ ತುಳುಕುತ್ತವೆ ಎಂಬ ಕಾರಣದಿಂದ ಬೇಗ ಸಿದ್ಧವಾಗುವಂತೆ ಸೂಚಿಸಲು ಕೂತಲ್ಲಿಂದಲೇ ಪತ್ನಿಯನ್ನು ಕರೆದರು. ಪ್ರತಿಕ್ರಿಯೆ ಬಾರದಿದ್ದಾಗ ಬಾತ್‍ರೂಂ ಬಳಿಗೆ ತೆರಳಿ ಕರೆದರು. ಬಾಗಿಲು ತಳ್ಳಿ ಒಳಕ್ಕೆ ಹೋದಾದ ಬಾತ್‍ಟಬ್‍ನಲ್ಲಿ ಶ್ರೀದೇವಿ ಮುಳುಗಿದ್ದರು. ತಲೆಯಿಂದ ಪಾದದವರೆಗೂ ಟಬ್ ಒಳಗೆ ಇದ್ದರು. ದೇಹದಲ್ಲಿ ಚಲನೆ ಕಾಣದಿದ್ದಾಗ ಬೋನಿ ಭೀತಿಗೊಂಡರು.

ಇಡೀ ಪ್ರಪಂಚವೇ ಕುಸಿಯುತ್ತಿರುವ ಅನುಭವವಾಯಿತು. ದುಃಖದ ಮಡುವಿನಲ್ಲಿ ಮುಳುಗಿದರು. ಬೋನಿಯ ಜೀವ ಎನಿಸಿದ್ದ ಶ್ರೀದೇವಿ ಬೇರೆ ಲೋಕಕ್ಕೆ ಪಯಣಿಸಿದ್ದರು. ಎರಡು ಗಂಟೆ ಮೊದಲು ಅಚ್ಚರಿ ನೀಡಿದ್ದಕ್ಕೆ ಪ್ರತಿಯಾಗಿ ಶ್ರೀದೇವಿ ಎಂದೂ ಮರೆಯಲಾರದ ಶಾಕ್ ನೀಡಿದರು, ರೊಮ್ಯಾಂಟಿಕ್ ಡಿನ್ನರ್ ಕನಸು ದುರದೃಷ್ಟಕರ ತಿರುವು ಪಡೆದಿತ್ತು. ಆದರೆ ಬಾತ್‍ರೂಂ ಒಳಗೆ ಏನಾಯಿತು ಎನ್ನುವುದು ಯಾರಿಗೂ ತಿಳಿಯಲಿಲ್ಲ.

ಮೊದಲು ಮುಳುಗಿ ನಂತರ ಪ್ರಜ್ಞೆ ಕಳೆದುಕೊಂಡರೇ, ಅಥವಾ ಪ್ರಜ್ಞೆ ಕಳೆದುಕೊಂಡು ಬಿದ್ದರೇ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ. ಆದರೆ ಬಹುಶಃ ಒಂದು ನಿಮಿಷವೂ ಹೋರಾಡುವ ಅವಕಾಶವೇ ಸಿಗಲಿಲ್ಲ. ಏಕೆಂದರೆ ಒಂದು ತೊಟ್ಟು ನೀರು ಕೂಡಾ ಟಬ್‍ನಿಂದ ಹೊರ ಚೆಲ್ಲಿರಲಿಲ್ಲ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News