80 ಕೋಟಿ ರೂ. ಸುಲಿಗೆ ಆರೋಪ : ಡೇರಾ ವಕೀಲನ ಸಹಿತ 40 ಮಂದಿ ವಿರುದ್ಧ ಪ್ರಕರಣ ದಾಖಲು

Update: 2018-03-04 14:12 GMT
ಗುರ್ಮೀತ್ ಸಿಂಗ್

ಚಂಡಿಗಡ್, ಮಾ.4: ಝಿಕ್ರಪುರದಲ್ಲಿರುವ ತನ್ನ 80 ಕೋಟಿ ರೂ. ಮೌಲ್ಯದ ಜಮೀನನ್ನು ಒತ್ತಡದಿಂದ ಪಡೆದುಕೊಂಡಿದ್ದಾರೆ ಎಂದು ಸ್ಥಳೀಯ ಬಿಲ್ಡರ್‌ವೊಬ್ಬರು ಆರೋಪಿಸಿರುವ ಹಿನ್ನೆಲೆಯಲ್ಲಿ ಪಂಚಕುಲ ಪೊಲೀಸರು ಹಿರಿಯ ವಕೀಲ ಎಸ್.ಕೆ ಗರ್ಗ್ ನರ್ವನ ಸಹಿತ 40 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನರ್ವನ, ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್ ನ ಮೇಲಿರುವ ಅತ್ಯಾಚಾರ ಆರೋಪ ಸಹಿತ ಇತರ ಆರೋಪಿಗಳ ವಿರುದ್ಧ ನ್ಯಾಯಾಲಯದಲ್ಲಿ ವಾದಿಸುತ್ತಿದ್ದಾರೆ. ಆರೋಪಿಗಳ ವಿರುದ್ಧ ವಂಚನೆ, ಸುಲಿಗೆ ಮತ್ತು ಬೆದರಿಕೆ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

ಆರೋಪಿಗಳ ಪಟ್ಟಿಯಲ್ಲಿ ಡೇರಾದ ಪಂಚಕುಲ ವಿಭಾಗದ ಮುಖ್ಯಸ್ಥ ಹಾಗೂ ಆಗಸ್ಟ್ 25ರಂದು ಪಂಚಕುಲದಲ್ಲಿ ನಡೆದ ಹಿಂಸಾಚಾರದ ಪ್ರಮುಖ ಆರೋಪಿ ಚವ್ಕೌರ್ ಸಿಂಗ್ ಮತ್ತು ಡೇರಾದ ಇನ್ನೊರ್ವ ಸದಸ್ಯ ಮತ್ತು ಪರ್ಲ್ ಇನ್ಫ್ರಾಸ್ಟ್ರಕ್ಚರ್‌ನ ನಿರ್ದೇಶಕ ರಾಮ್ ಮೂರ್ತಿ ಹೆಸರು ಕೂಡಾ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಮೇಲಿನ ಆರೋಪವನ್ನು ನಿರಾಕರಿಸಿರುವ ನರ್ವನ ತನ್ನ ವಿರುದ್ಧ ಸಂಚು ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. ಪಂಜಾಬ್ ಮತ್ತು ಹರ್ಯಾಣದ ಉಚ್ಚ ನ್ಯಾಯಾಲಯದ ವಕೀಲರ ಸಂಘ ಕೂಡಾ ನರ್ವನ ಮೇಲಿನ ಆರೋಪವನ್ನು ನಿರಾಕರಿಸಿದೆ.

ಪಂಚಕುಲ ನಿವಾಸಿ ಹಾಗೂ ಒಪೆರ ಗಾರ್ಡನ್ ರಿಯಲ್ ಎಸ್ಟೇಟ್ ಮಾಲಕ ಅಜಯ್‌ವೀರ್ ಸೆಹ್ಗಲ್ ನೀಡಿರುವ ದೂರಿನ ಆಧಾರದಲ್ಲಿ ಫೆಬ್ರವರಿ 28ರಂದು ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಮೀನನ್ನು ನೀಡುವುದರ ಜೊತೆಗೆ ಜಮೀನು ವಿವಾದ ಬಗೆಹರಿಸುವ ಹೆಸರಿನಲ್ಲಿ ಡೇರಾ ಸಚ್ಚಾ ಸೌದಕ್ಕೆ ಒಂದು ಫ್ಲಾಟ್ ಹಾಗೂ 80 ಲಕ್ಷ ರೂ. ದೇಣಿಗೆ ನೀಡುವಂತೆಯೂ ಆರೋಪಿಗಳು ಸೂಚಿಸಿದ್ದರು ಎಂದು ಸೆಹ್ಗಲ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಈ ಎಲ್ಲ ಬೆದರಿಕೆಗಳು ನರ್ವನ ಮತ್ತು ಮೂರ್ತಿಯ ಸೂಚನೆಯಂತೆ ನಡೆದಿದೆ ಎಂದು ಸೆಹ್ಗಲ್ ಆರೋಪಿಸಿದ್ದಾರೆ. ಅವರಿಂದ ಸುಲಿಗೆ ಮಾಡಲಾಗಿರುವ ಜಮೀನಿನ ಮಾರುಕಟ್ಟೆಯ ಮೌಲ್ಯ 80 ಕೋಟಿ ರೂ. ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಝಿಕ್ರಪುರದಲ್ಲಿ 12.5 ಎಕರೆ ಜಮೀನನ್ನು ಸೆಹ್ಗಲ್ 10 ಜನರಿಂದ ಖರೀದಿಸಿದ್ದರು. ಆದರೆ ಈ ಜಮೀನಿನಲ್ಲಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಮುಂದಾದಾಗ ಆ ಜಾಗ ವಿವಾದಗ್ರಸ್ತವಾಗಿದ್ದು, ಹಲವರು ಅದರ ಮೇಲೆ ತಮ್ಮ ಮಾಲಕತ್ವವನ್ನು ಸ್ಥಾಪಿಸುತ್ತಿದ್ದಾರೆ ಎಂಬ ಅಂಶ ಬಯಲಾಗಿದೆ. ಈ ಪೈಕಿ ಹಲವರ ಹೆಸರುಗಳನ್ನು ಸೆಹ್ಗಲ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News