87 ಕೋಟಿ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಪರ್ಕ
ಹೊಸದಿಲ್ಲಿ, ಮಾ.4: ಇದುವರೆಗೆ ಶೇ.80ರಷ್ಟು ಬ್ಯಾಂಕ್‌ಖಾತೆಗಳು ಹಾಗೂ ಶೇ.60ರಷ್ಟು ಮೊಬೈಲ್ ಸಂಪರ್ಕಗಳು ಆಧಾರ್‌ನೊಂದಿಗೆ ಜೋಡಿಸಲ್ಪಟ್ಟಿವೆ ಎಂದು ವಿಶಿಷ್ಟ ಗುರುತು ಪ್ರಾಧಿಕಾರದ(ಯುಐಡಿಎಐ) ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ರಮ ಸಂಪತ್ತನ್ನು ಬಯಲಿಗೆಳೆಯುವ ಉದ್ದೇಶದಿಂದ ಎಲ್ಲಾ ಬ್ಯಾಂಕ್ ಖಾತೆಗಳಿಗೆ 12 ಸಂಖ್ಯೆಗಳ ವಿಶಿಷ್ಟ ಗುರುತು ಸಂಖ್ಯೆ ಆಧಾರ್ ಅನ್ನು ಸಂಪರ್ಕಿಸಲು 2018ರ ಮಾರ್ಚ್ 31ರವರೆಗೆ ಕೇಂದ್ರ ಸರಕಾರ ಅವಕಾಶ ನೀಡಿದೆ. ಅಲ್ಲದೆ ಆದಾಯ ತೆರಿಗೆ ಶಾಶ್ವತ ಖಾತೆ ಸಂಖ್ಯೆ(ಪ್ಯಾನ್)ಗೆ ಆಧಾರ್ ಸಂಖ್ಯೆ ಜೋಡಣೆ, ಮೊಬೈಲ್ ಸಿಮ್ ಕಾರ್ಡ್‌ಗಳಿಗೆ ಆಧಾರ್ ಸಂಖ್ಯೆ ಜೋಡಣೆಗೂ ಮಾ.31 ಅಂತಿಮ ದಿನವಾಗಿರುತ್ತದೆ.
ಒಟ್ಟು 109.9 ಕೋಟಿ ಬ್ಯಾಂಕ್ ಖಾತೆಗಳಲ್ಲಿ ಸುಮಾರು 87 ಕೋಟಿ ಖಾತೆಗಳನ್ನು ಆಧಾರ್‌ನೊಂದಿಗೆ ಜೋಡಿಸಲಾಗಿದೆ. ಇದರಲ್ಲಿ 58 ಕೋಟಿ ಖಾತೆಗಳನ್ನು ಈಗಾಗಲೇ ಪರಿಶೀಲಿಸಲಾಗಿದೆ. ಉಳಿದ ಖಾತೆಗಳ ಬ್ಯಾಂಕ್ ದಾಖಲೆಯನ್ನು ಪರಿಶೀಲಿಸುವ ಕಾರ್ಯ ಪ್ರಗತಿಯಲ್ಲಿದೆ. ಅಲ್ಲದೆ ದೇಶದಲ್ಲಿ 142.9 ಕೋಟಿ ಸಕ್ರಿಯ ಮೊಬೈಲ್ ನಂಬರ್‌ಗಳಿದ್ದು ಇದರಲ್ಲಿ 85.7 ಕೋಟಿ ಮೊಬೈಲ್ ಸಂಖ್ಯೆಗಳನ್ನು ಆಧಾರ್ ಜೊತೆ ಸಂಪರ್ಕಿಸಲಾಗಿದೆ ಎಂದು ಯುಐಡಿಎಐ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಯ್ ಭೂಷಣ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ವಿಶ್ವದ ಬೃಹತ್ ಬಯೊಮೆಟ್ರಿಕ್ ದತ್ತಸಂಚಯ ಎನ್ನಲಾಗಿರುವ ಆಧಾರ್ ಕಾರ್ಯಕ್ರಮದಲ್ಲಿ ಈಗಾಗಲೇ 1.2 ಬಿಲಿಯನ್ ಜನರು ನೋಂದಣೆ ಮಾಡಿಕೊಂಡಿದ್ದಾರೆ. ಆಧಾರ್‌ಗೆ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಹಲವು ಅರ್ಜಿಗಳನ್ನು ಸಲ್ಲಿಸಲಾಗಿದ್ದು ಈ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್‌ನ ಐವರು ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠ ನಡೆಸುತ್ತಿದೆ.