ಮಹಾದಾಯಿ ವಿವಾದಕ್ಕೆ ಅಮಿತ್ ಶಾ ಪರಿಹಾರ ಕಂಡುಕೊಳ್ಳಲಿದ್ದಾರೆ: ಗೋವಾ ಬಿಜೆಪಿ ಅಧ್ಯಕ್ಷ
ಪಣಜಿ, ಮಾ.4: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗೋವಾ ಮತ್ತು ಕರ್ನಾಟಕದ ಮಧ್ಯೆ ವಿವಾದಕ್ಕೆ ಕಾರಣವಾಗಿರುವ ಮಹಾದಾಯಿ ನೀರು ಹಂಚಿಕೆಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲಿದ್ದಾರೆ ಎಂದು ಗೋವಾ ಬಿಜೆಪಿ ಅಧ್ಯಕ್ಷ ವಿನಯ್ ತೆಂಡೂಲ್ಕರ್ ತಿಳಿಸಿದ್ದಾರೆ.
ಎರಡು ರಾಜ್ಯಗಳ ಮಧ್ಯೆ ಸುದೀರ್ಘ ಸಮಯದಿಂದ ಬಾಕಿಯುಳಿದಿರುವ ಮಹಾದಾಯಿ ವಿವಾದವನ್ನು ಬಿಜೆಪಿ ಪರಿಹರಿಸಲಿದೆ ಎಂದು ಕಳೆದ ವಾರ ಕರ್ನಾಟಕದ ಜನತೆಗೆ ಅಮಿತ್ ಶಾ ಭರವಸೆ ನೀಡಿರುವ ಕುರಿತು ಮಾಧ್ಯಮಗಳು ತೆಂಡೂಲ್ಕರ್‌ರಲ್ಲಿ ಪ್ರಶ್ನಿಸಿದಾಗ ಉತ್ತರಿಸಿದ ಅವರು, ಬಹುಶಃ ಅವರ ಬಳಿ ಪರಿಹಾರವಿರಬಹುದು. ಅವರು ಒಂದಿಲ್ಲೊಂದು ದಾರಿ ಹುಡುಕುತ್ತಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ಶೀಘ್ರದಲ್ಲೇ ಕೇಂದ್ರ ಪೀಠವು ಈ ವಿವಾದದ ತೀರ್ಪನ್ನು ನೀಡಲಿರುವಾಗ ರಾಜ್ಯದ ಚುನಾವಣೆಯ ಸಮಯದಲ್ಲಿ ಶಾ ಜನರಿಗೆ ಈ ರೀತಿ ಭರವಸೆಯನ್ನು ನೀಡಿರುವುದು ಸರಿಯೇ ಎಂದು ಕೇಳಿದಾಗ, ಅದನ್ನು ನೀವು ಅಮಿತ್ ಶಾ ಅವರಲ್ಲಿ ಕೇಳಬೇಕು ಎಂದು ತೆಂಡೂಲ್ಕರ್ ಉತ್ತರಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಕರ್ನಾಟಕವು ಮಲಪ್ರಭಾ ನದಿ ಪ್ರದೇಶಕ್ಕೆ ನೀರು ಹಾಯಿಸುವ ಉದ್ದೇಶದಿಂದ ಮಹಾದಾಯಿ ನದಿಗೆ ನಿರ್ಮಿಸಲು ಉದ್ದೇಶಿಸಿರುವ ಕಳಸ-ಬಂಡೂರಿ ಯೋಜನೆಯ ಕಾರಣದಿಂದ ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರದ ಮಧ್ಯೆ ವಿವಾದ ತಲೆಯೆತ್ತಿದೆ. ಈ ಸಂಬಂಧ ವಿಚಾರಣೆ ನಡೆಸುತ್ತಿರುವ ಪೀಠವು ಕೆಲತಿಂಗಳಲ್ಲಿ ತನ್ನ ತೀರ್ಪನ್ನು ನೀಡಲಿದೆ.