ಹಾಲೆಂಡ್ ಫುಟ್ಬಾಲ್ ಆಟಗಾರ ವೆಸ್ಲೆ ಸ್ನೆಜರ್ ವಿದಾಯ
ಆಮ್‌ಸ್ಟರ್‌ಡಮ್, ಮಾ.4: ಹಾಲೆಂಡ್ ಫುಟ್ಬಾಲ್ ತಂಡದ ಮಿಡ್ ಫೀಲ್ಡರ್ ವೆಸ್ಲೆ ಸ್ನೆಜರ್ ರವಿವಾರ ಅಂತಾರಾಷ್ಟ್ರೀಯ ಫುಟ್ಬಾಲ್‌ನಿಂದ ನಿವೃತ್ತಿಯಾಗಿದ್ದಾರೆ. ಹಾಲೆಂಡ್‌ನ ನೂತನ ಕೋಚ್ ರೊನಾಲ್ಡ್ ಕೋಮ್ಯಾನ್‌ರೊಂದಿಗೆ ಚರ್ಚಿಸಿದ ಬಳಿಕ ಸ್ನೆಜರ್ ನಿವೃತ್ತಿಯ ನಿರ್ಧಾರ ಪ್ರಕಟಿಸಿದರು ಎಂದು ಡಚ್ ಫುಟ್ಬಾಲ್ ಸಂಸ್ಥೆ ತಿಳಿಸಿದೆ.
2003ರಲ್ಲಿ ಫುಟ್ಬಾಲ್‌ಗೆ ಕಾಲಿಟ್ಟಿರುವ 33ರ ಹರೆಯದ ಸ್ನೆಜರ್ 15 ವರ್ಷಗಳ ಕಾಲ ಹಾಲೆಂಡ್ ತಂಡವನ್ನು ಪ್ರತಿನಿಧಿಸಿದ್ದರು. 2010ರಲ್ಲಿ ದಕ್ಷಿಣ ಆಫ್ರಿಕದಲ್ಲಿ ನಡೆದ ಫಿಫಾ ವಿಶ್ವಕಪ್‌ನಲ್ಲಿ ಎರಡನೇ ಸ್ಥಾನ ಪಡೆದ ಹಾಲೆಂಡ್ ತಂಡದ ಸದಸ್ಯರಾಗಿದ್ದರು.
ಸ್ನೆಜರ್ ಕಳೆದ ವರ್ಷದ ಜೂನ್‌ನಲ್ಲಿ 133ನೇ ಪಂದ್ಯ ಆಡುವ ಮೂಲಕ ಗರಿಷ್ಠ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಹಾಲೆಂಡ್‌ನ ಮೊದಲ ಆಟಗಾರ ಎನಿಸಿಕೊಳ್ಳುವುದರೊಂದಿಗೆ ಹೊಸ ದಾಖಲೆ ನಿರ್ಮಿಸಿದ್ದರು. ನವೆಂಬರ್‌ನಲ್ಲಿ ರೊಮಾನಿಯ ವಿರುದ್ಧ ಸೌಹಾರ್ದ ಪಂದ್ಯದಲ್ಲಿ 133ನೇ ಹಾಗೂ ಕೊನೆಯ ಪಂದ್ಯ ಆಡಿದ್ದರು. ಒಟ್ಟು 33 ಗೋಲುಗಳನ್ನು ಬಾರಿಸಿದ್ದಾರೆ. ಸ್ನೆಜರ್ 2006,2010 ಹಾಗೂ 2014ರ ಫಿಫಾ ವಿಶ್ವಕಪ್‌ನಲ್ಲಿ ಹಾಲೆಂಡ್‌ನ್ನು ಪ್ರತಿನಿಧಿಸಿದ್ದರು.
‘‘ಸ್ನೆಜರ್ ಡಚ್‌ನ ಓರ್ವ ಶ್ರೇಷ್ಠ ಆಟಗಾರನಾಗಿದ್ದರು. ನಾನು ಹೊಸ ತಂಡವನ್ನು ರಚಿಸಲು ಬಯಸಿದ್ದು, ಹಾಗಾಗಿ ಇಂತಹ ಆಯ್ಕೆ ಮಾಡಬೇಕಾಯಿತು’’ ಎಂದು ಹಾಲೆಂಡ್ ಕೋಚ್ ರೊನಾಲ್ಡ್ ಹೇಳಿದ್ದಾರೆ.