ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ರಾಜೀನಾಮೆ
Update: 2018-03-04 22:07 IST
ಅಗರ್ತಲಾ, ಮಾ. 4: ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ರವಿವಾರ ರಾಜ್ಯಪಾಲ ತಥಾಗತ್ ರಾಯ್ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ‘‘ನಾನು ರಾಜೀನಾಮೆಯನ್ನು ರಾಜ್ಯ ಪಾಲರಿಗೆ ಸಲ್ಲಿಸಿದ್ದೇನೆ. ನೂತನ ಮುಖ್ಯಮಂತ್ರಿ ಅಧಿಕಾರ ಸ್ವೀಕರಿಸುವ ವರೆಗೆ ತಾನು ಅಧಿಕಾರದಲ್ಲಿ ಮುಂದುವರಿಯುವಂತೆ ರಾಜ್ಯಪಾಲರು ಹೇಳಿದ್ದಾರೆ’’ ಎಂದು ಅವರು ತಿಳಿಸಿದರು.
‘‘ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ನೆರವಾದ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿಗೆ ನಾನು ವಂದನೆ ಸಲ್ಲಿಸುತ್ತೇನೆ’’ ಎಂದು ಔಪಚಾರಿಕವಾಗಿ ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ರಾಜಭವನದಲ್ಲಿ ಮಾಧ್ಯಮದವರಿಗೆ ಸರ್ಕಾರ್ ತಿಳಿಸಿದರು. ಫೆಬ್ರವರಿ 18ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಐಪಿಎಫ್‌ಟಿ ಆಡಳಿತಾರೂಢ ಎಡ ಪಕ್ಷವನ್ನು ಹೀನಾಯವಾಗಿ ಸೋಲಿಸಿದ ಬಳಿಕ 69 ಹರೆಯದ ಸರ್ಕಾರ್ ಈ ರಾಜೀನಾಮೆ ಪತ್ರ ಸಲ್ಲಿಸಿದರು.