ಎಸ್ ಎಸ್ ಸಿ ಪೇಪರ್ ಸೋರಿಕೆ: ಸಿಬಿಐ ತನಿಖೆಗೆ ಆದೇಶ

Update: 2018-03-05 14:25 GMT

ಹೊಸದಿಲ್ಲಿ, ಮಾ.5: ಕಳೆದ ತಿಂಗಳು ನಡೆದ ಸಿಬ್ಬಂದಿ ಆಯ್ಕೆ ಆಯೋಗಕ್ಕೆ ನಡೆದ ಪರೀಕ್ಷೆಗಳಲ್ಲಿ ಒಂದರಲ್ಲಿ ಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪದ ಬಗ್ಗೆ ಸರಕಾರವು ಸಿಬಿಐ ತನಿಖೆಗೆ ಆದೇಶಿಸಿದೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ಸೋಮವಾರ ತಿಳಿಸಿದ್ದಾರೆ.

ಫೆಬ್ರವರಿ 17ರಿಂದ 22ರವರೆಗೆ ನಡೆದ ಸಂಯೋಜಿತ ಪದವಿ ಮಟ್ಟದ (ಟೈರ್ 11) ಪರೀಕ್ಷೆ 2017ರಲ್ಲಿ ಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಅಧೀನ ಸೇವೆಗಳಿಗೆ ಪರೀಕ್ಷೆಗಳನ್ನು ನಡೆಸುವ ಎಸ್ ಎಸ್ ಸಿ ಆಗ್ರಹಿಸಿದ ಮರುದಿನವೇ ಸರಕಾರ ಈ ತೀರ್ಮಾನವನ್ನು ಕೈಗೊಂಡಿದೆ.

ಪತ್ರಿಕೆ ಸೋರಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳು ಫೆಬ್ರವರಿ 27ರಿಂದ ಆಯೋಗದ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ.

ರವಿವಾರದಂದು ದಿಲ್ಲಿ ಬಿಜೆಪಿ ಅಧ್ಯಕ್ಷ ಮತ್ತು ಸಂಸದ ಮನೋಜ್ ತಿವಾರಿ ಅಭ್ಯರ್ಥಿಗಳ ಪ್ರತಿನಿಧಿಗಳ ಜೊತೆಗೆ ಎಸ್ ಎಸ್ ಸಿ ಮುಖ್ಯಸ್ಥ ಅಶಿಮ್ ಖುರಾನರನ್ನು ಭೇಟಿಯಾಗಿದ್ದರು. ಇದೇ ವೇಳೆ ಗೃಹಸಚಿವರನ್ನು ಭೇಟಿಯಾದ ತಂಡವು ಸಿಬಿಐ ತನಿಖೆಗೆ ಮನವಿ ಮಾಡಿತ್ತು.

ಎಸ್ ಎಸ್ ಸಿ ಯು ಕೇಂದ್ರ ಸರಕಾರದ ಕೆಳಹಂತದ ವಿಭಾಗಗಳ ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪರೀಕ್ಷೆಗಳನ್ನು ಆಯೋಜಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News