ಸರಕಾರಕ್ಕೆ 10,000 ಕೋಟಿ ರೂ. ಲಾಭಾಂಶ ನೀಡಲಿರುವ ಆರ್‌ಬಿಐ
ಹೊಸದಿಲ್ಲಿ, ಮಾ.6: ಕೇಂದ್ರ ಸರಕಾರವು ಮಾರ್ಚ್‌ನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯದಿಂದ ಮಧ್ಯಂತರ ಲಾಭಾಂಶವಾಗಿ 10,000 ಕೋಟಿ ರೂ. ಪಡೆಯುವ ನಿರೀಕ್ಷೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ. ಆರ್‌ಬಿಐಯ ವಿತ್ತ ವರ್ಷವನ್ನು ಜುಲೈಯಿಂದ ಜೂನ್‌ವರೆಗೆ ಲೆಕ್ಕ ಹಾಕಲಾಗುತ್ತದೆ. ಸದ್ಯ ನೀಡಲಾಗುತ್ತಿರುವ ಮೊತ್ತವನ್ನು ಡಿಸೆಂಬರ್ 31ರಿಂದ ಆರು ತಿಂಗಳ ಕಾಲಕ್ಕೆ ಲೆಕ್ಕ ಹಾಕಲಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ. ಲಾಭಾಂಶ ಪಾವತಿಯು ಐದು ವರ್ಷಗಳಲ್ಲೇ ಅತ್ಯಂತ ಕೆಳಮಟ್ಟಕ್ಕೆ ಕುಸಿದ ಪರಿಣಾಮವಾಗಿ ಸರಕಾರವು ಹೆಚ್ಚಿನ ಪಾವತಿಗಾಗಿ ಇಟ್ಟಿದ್ದ ಬೇಡಿಕೆಯನ್ನು ಆರ್‌ಬಿಐ ತಿರಸ್ಕರಿಸಿತ್ತು. ವೆಚ್ಚವನ್ನು ಉತ್ತೇಜಿಸುವ ಮತ್ತು 2019ರ ಲೋಕಸಭಾ ಚುನಾವಣೆಗೂ ಮುನ್ನ ಜನಬೆಂಬಲವನ್ನು ಗಳಿಸುವ ಸರಕಾರದ ಪ್ರಯತ್ನದಿಂದ ಅದರ ವಿತ್ತೀಯ ಕೊರತೆ ಗುರಿಯು ಹೆಚ್ಚಾಗಿದೆ. ಹಾಗಾಗಿ ಸರಕಾರ ಹೆಚ್ಚಿನ ಲಾಭಾಂಶಕ್ಕೆ ಬೇಡಿಕೆಯಿಟ್ಟಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದಾಗಿ ಪತ್ರಿಕೆ ವರದಿ ಮಾಡಿದೆ. ಈ ಕುರಿತು ಪ್ರತಿಕ್ರಿಯೆ ಪಡೆಯಲು ವಿತ್ತ ಸಚಿವಾಲಯದ ವಕ್ತಾರ ಡಿ.ಎಸ್ ಮಲಿಕ್ ಲಭ್ಯವಿರಲಿಲ್ಲ ಮತ್ತು ಆರ್‌ಬಿಐ ವಕ್ತಾರ ಜೋಸ್ ಕಟ್ಟೂರ್‌ಗೆ ಕಳುಹಿಸಲಾದ ಇಮೇಲ್‌ಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ಪತ್ರಿಕೆ ವರದಿ ಮಾಡಿದೆ.