ಉತ್ತರ ಪ್ರದೇಶ: ದಲಿತ ಮಹಿಳೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
ಲಕ್ನೋ,ಮಾ.9: ಸಾಲ ಮರುಪಾವತಿ ವಿಚಾರಕ್ಕೆ ಸಂಬಂಧಿಸಿ ನಡೆದ ಜಗಳದಲ್ಲಿ ಇಬ್ಬರು ಲೇವಾದೇವಿದಾರರು ದಲಿತ ಮಹಿಳೆಯೊಬ್ಬರಿಗೆ ಬೆಂಕಿ ಹಚ್ಚಿದ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ನಡೆದಿದೆ.
ಮಹಿಳೆಯನ್ನು ರೇಶಮಿ ಎಂದು ಗುರುತಿಸಲಾಗಿದ್ದು, ದೇಹದ 60 ಶೇ. ಭಾಗಗಳಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ವಾರಣಾಸಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿರುವ ಪೊಲೀಸ್ ಅಧಿಕಾರಿ ಅನಿಲ್ ಕುಮಾರ್, ಆರೋಪಿಗಳಾದ ಸತ್ಯಂ ಸಿಂಗ್ ಹಾಗು ಸೋನು ಸಿಂಗ್ ಎಂಬವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಸತ್ಯಂ ಹಾಗು ಸೋನುವಿಂದ ತಾನು 20 ಸಾವಿರ ರೂ. ಸಾಲ ಪಡೆದಿದ್ದೆ. ನಂತರ ಬಡ್ಡಿ ಸಮೇತ ಹಿಂದಿರುಗಿಸಿದ್ದೆ. ಆದರೆ ಅವರು ಇನ್ನೂ ಹೆಚ್ಚಿನ ಹಣ ಕೇಳುತ್ತಿದ್ದರು ಎಂದು ರೇಶಮಿ ತಿಳಿಸಿದ್ದಾರೆ. ರೇಶಮಿ ಮಲಗಿದ್ದ ಸಂದರ್ಭ ಆಗಮಿಸಿದ ಆರೋಪಿಗಳು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು. ರೇಶಮಿಯ ಕಿರುಚಾಟ ಕೇಳಿ ಸ್ಥಳಕ್ಕಾಗಮಿಸಿದ ಸಂಬಂಧಿಕರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು.