ಇರ್ಫಾನ್‌ಖಾನ್‌ಗೆ ಅಪರೂಪದ ಕಾಯಿಲೆ!
ಸಾಮಾನ್ಯವಾಗಿ ಸಿನೆಮಾತಾರೆಯರು ತುಂಬಾ ಆರೋಗ್ಯವಂತರಾಗಿರುತ್ತಾರೆಂಬುದು ಸಾಮಾನ್ಯ ಜನರ ನಂಬಿಕೆ. ಅದರೆ ಕೆಲವು ತಾರೆಯರ ವಿಷಯದಲ್ಲಿ ಆ ನಂಬಿಕೆ ಹುಸಿಯಾಗಿದೆ. ಇದೀಗ ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್, ತಾನೊಂದು ಅತ್ಯಂತ ಅಪರೂಪದ ರೋಗದಿಂದ ನರಳುತ್ತಿರುವೆನೆಂದು ಬಹಿರಂಗಪಡಿಸಿದ್ದು, ಚಿತ್ರಪ್ರೇಮಿಗಳನ್ನು ಆಘಾತಕ್ಕೀಡು ಮಾಡಿದೆ.
ತನ್ನನ್ನು ಕಾಡುತ್ತಿರುವುದು ಅತ್ಯಂತ ಅಪರೂಪದ ರೋಗವೆಂದು ಇರ್ಫಾನ್ ಹೇಳಿಕೊಂಡಿದ್ದರಾದರೂ, ಅದು ಯಾವುದೆಂಬುದನ್ನು ತಿಳಿಸಿಲ್ಲ. ಇನ್ನೊಂದು ವಾರದಲ್ಲಿ ಅಥವಾ ಹತ್ತು ದಿವಸಗಳೊಳಗೆ ವೈದ್ಯರು, ರೋಗವನ್ನು ಡಯಾಗ್ನೈಸ್ ಮಾಡಲಿದ್ದಾರೆ. ಆನಂತರ ಎಲ್ಲಾ ವಿವರಗಳನ್ನು ಬಹಿರಂಗಪಡಿಸುವುದಾಗಿ ಇರ್ಫಾನ್ ಟ್ವೀಟ್ ಮಾಡಿದ್ದಾರೆ. ‘‘ಕಳೆದ 15 ದಿನಗಳಲ್ಲಿ ನನ್ನ ಬದುಕೇ ಒಂದು ನಿಗೂಢ ಕತೆಯಾಗಿ ಬಿಟ್ಟಿದೆ. ಅಪರೂಪದ ಕತೆಗಳಿಗಾಗಿನ ನನ್ನ ಹುಡುಕಾಟವು, ನನಗೆ ಅಪರೂಪದ ರೋಗವೊಂದು ತಗಲಿರುವುದನ್ನು ಕಂಡುಕೊಳ್ಳುವಂತೆ ಮಾಡಿದೆ. ಆದರೆ ನಾನೆಂದೂ ಎದೆಗುಂದಿಲ್ಲ. ಆ ರೋಗದೊಂದಿಗೆ ಹೋರಾಟ ನಡೆಸುವೆ. ಈ ಹೋರಾಟದಲ್ಲಿ ನನಗೆ ಬೆಂಬಲವಾಗಿ ನನ್ನ ಕುಟುಂಬ ಹಾಗೂ ಮಿತ್ರರಿದ್ದಾರೆ ಹಾಗೂ ಈ ವಿಷಮಪರಿಸ್ಥಿತಿಯಿಂದ ಹೊರಬರಲು ನಾವು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ನಡೆಸಲಿದ್ದೇವೆ ಎಂದು ಇರ್ಫಾನ್ ಟ್ವೀಟ್ ಮಾಡಿದ್ದಾರೆ. ಹತ್ತು ದಿವಸಗಳೊಳಗೆ ರೋಗ ಯಾವುದೆಂಬುದನ್ನು ವೈದ್ಯರು ದೃಢಪಡಿಸಲಿದ್ದಾರೆ ಆನಂತರ ನಿಮಗೆ ಆ ಬಗ್ಗೆ ನಾನೇ ತಿಳಿಸುವೆ. ಅಲ್ಲಿಯವರೆಗೆ ನನಗಾಗಿ ಶುಭ ಹಾರೈಸಿ ಎಂದು ಅವರು ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ರೋಗದ ಬಗ್ಗೆ ಇಲ್ಲ ಸಲ್ಲದ ಊಹಾಪೋಹಗಳನ್ನು ಹರಡದಂತೆಯೇ ಅವರು ಸಿನೆಮಾಪ್ರೇಮಿಗಳಿಗೆ ಕಿವಿಮಾತು ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಇರ್ಫಾನ್‌ರ ಪೋಸ್ಟ್ ಓದಿ, ಚಿತ್ರರಂಗದ ಮಂದಿ, ಅಭಿಮಾನಿಗಳಿಂದ ಸಾಂತ್ವನ ಹಾಗೂ ಬೆಂಬಲದ ಸಂದೇಶಗಳ ಮಹಾಪೂರವೇ ಹರಿದುಬರುತ್ತಿದೆ. ಬ್ಲಾಕ್‌ಮೇಲ್ ಸದ್ಯದಲ್ಲೇ ಬಿಡುಗಡೆಗೊಳ್ಳಲಿರುವ ಇರ್ಫಾನ್ ಖಾನ್ ಅಭಿನಯದ ಚಿತ್ರವಾಗಿದೆ. ಮಲಯಾಳಂನ ಜನಪ್ರಿಯ ನಟ ದುಲ್ಕರ್ ಸಲ್ಮಾನ್‌ರ ಚೊಚ್ಚಲ ಬಾಲಿವುಡ್ ಚಿತ್ರ ಕ್ಯಾರವಾನ್‌ನಲ್ಲಿಯೂ ಇರ್ಫಾನ್ ನಟಿಸಿದ್ದು ಆ ಚಿತ್ರವೂ ಬಿಡುಗಡೆಗೆ ಸಿದ್ಧವಾಗುತ್ತಿದೆ.