×
Ad

ರಾಜಮೌಳಿ ಚಿತ್ರಕ್ಕೆ ಮತ್ತೆ ಸಮಂತಾ ಹೀರೋಯಿನ್

Update: 2018-03-10 16:22 IST

ಬಾಹುಬಲಿ ಚಿತ್ರಕ್ಕೂ ಮುನ್ನ ರಾಜವೌಳಿ ನಿರ್ದೇಶನದ ‘ಈಗ’ ಬಾಕ್ಸ್‌ಆಫೀಸ್ ಕೊಳ್ಳೆಹೊಡೆದಿದ್ದುದು ಈಗ ಇತಿಹಾಸ. ಅದ್ಭುತವಾದ ಗ್ರಾಫಿಕ್‌ತಂತ್ರಜ್ಞಾನದೊಂದಿಗೆ ತಯಾರಾಗಿದ್ದ ಈ ಚಿತ್ರದ ಮೂಲಕ ಕಿಚ್ಚ ಸುದೀಪ್, ದೇಶಾದ್ಯಂತ ಚಿತ್ರಪ್ರೇಮಿಗಳ ಕಣ್ಮಣಿಯಾಗಿಬಿಟ್ಟರು. ನಾಯಕಿ ನಟಿ ಸಮಂತಾಗೂ ತಾರಾಪಟ್ಟವನ್ನು ಈ ಚಿತ್ರ ದೊರಕಿಸಿಕೊಟ್ಟಿತ್ತು.

   ಇದೀಗ ಸಮಂತಾ ಮತ್ತೊಮ್ಮೆ ರಾಜವೌಳಿ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜೂನಿಯರ್ ಎನ್‌ಟಿಆರ್ ಹಾಗೂ ರಾಮ್‌ಚರಣ್ ತೇಜಾ ನಟಿಸುತ್ತಿರುವ ಈ ಮಲ್ಟಿಸ್ಟಾರ್ ಚಿತ್ರದಲ್ಲಿ ಆಕೆಗೆ ನಾಯಕಿ ಪಾತ್ರವಿದೆ. ಕನ್ನಡ ಕರಾವಳಿಯ ಬೆಡಗಿ, ಬಾಲಿವುಡ್ ಬೆಡಗಿ ಪೂಜಾ ಹೆಗ್ಡೆ ಕೂಡಾ ಈ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದಾಗ್ಯೂ ಪೂಜಾಹೆಗ್ಡೆಗೆ ಇದು ಮೊದಲ ತೆಲುಗು ಚಿತ್ರವೇನಲ್ಲ. ಆಕೆ ಈ ಮೊದಲು ಅಲ್ಲು ಅರ್ಜುನ್ ಜೊತೆ ದುವ್ವಾಡ ಜಗನ್ನಾದಂ ಚಿತ್ರದಲ್ಲಿ ನಟಿಸಿದ್ದರು. ಭಾರತೀಯ ಚಿತ್ರರಂಗದಲ್ಲೇ ದಾಖಲೆ ನಿರ್ಮಿಸಿದ ಬಾಹುಬಲಿ ಬಳಿಕ ರಾಜವೌಳಿ ನಿರ್ದೇಶನ ಚಿತ್ರವಾದುದರಿಂದ ಸಹಜವಾಗಿಯೇ ಚಿತ್ರರಸಿಕರಲ್ಲಿ ಕುತೂಹಲ ಗರಿಗೆದರಿದೆ. ಇನ್ನೂ ಹೆಸರಿಡದ ಈ ಚಿತ್ರವು ಆಗಸ್ಟ್‌ನಲ್ಲಿ ಸೆಟ್ಟೇರಲಿದೆ. ಈ ಚಿತ್ರದ ಬಳಿಕ ರಾಜವೌಳಿ ಅವರು ಮಹೇಶ್‌ಬಾಬು ನಾಯಕನಾಗಿರುವ ಬಿಗ್‌ಬಜೆಟ್ ಚಿತ್ರವೊಂದನ್ನು ನಿರ್ದೇಶಿಸುವುದಾಗಿ ಘೋಷಿಸಿದ್ದಾರೆ. ಸಮಂತಾ ಹಾಗೂ ರಾಮ್‌ಚರಣ್ ತೇಜಾ ಜೊತೆಯಾಗಿ ನಟಿಸಿರುವ ಇನ್ನೊಂದು ಚಿತ್ರ ರಂಗಸ್ಥಳಂ, ಮಾರ್ಚ್ ನಲ್ಲಿ ರಿಲೀಸ್ ಆಗಲಿದೆ. ಈಗಾಗಲೇ ರಂಗಸ್ಥಳಂನ ಫಸ್ಟ್‌ಲುಕ್ ಪೋಸ್ಟರ್ ಹಾಗೂ ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆ ದೊರೆತಿದೆ. ನಾಗಚೈತನ್ಯರನ್ನು ಕಳೆದ ವರ್ಷ ವಿವಾಹವಾಗಿರುವ ಸಮಂತಾಗೆ ಈಗಲೂ ಕೈತುಂಬಾ ಪ್ರಾಜೆಕ್ಟ್ ಗಳಿವೆ. ರಂಗಸ್ಥಳಂ ಅಲ್ಲದೆ, ತಮಿಳಿನಲ್ಲಿ ವಿಶಾಲ್‌ರೊಂದಿಗೆ ಇರುಂಬು ತಿರೈ ಮತ್ತು ವಿಜಯ್ ಸೇತುಪತಿ ಜೊತೆ ಸೂಪರ್‌ಡಿಲಕ್ಸ್ ಮತ್ತು ಶಿವಕಾರ್ತಿಕೇಯನ್ ಜೊತೆ ಸೀಮರಾಜಾದಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಸೂಪರ್ ಹಿಟ್ ಚಿತ್ರ ಯೂಟರ್ನ್‌ನ ತಮಿಳು ರಿಮೇಕ್‌ಗೂ ಆಕೆ ನಾಯಕಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News