×
Ad

ಚೀನಾದಲ್ಲೂ ಭಾಯ್‌ಜಾನ್ ದಾಖಲೆ

Update: 2018-03-10 16:24 IST

ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್ ಚಿತ್ರಗಳು ಆಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಸಂಜಯ್‌ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್, ಆಸ್ಟ್ರೇಲಿಯದಲ್ಲಿ ಬಾಕ್ಸ್‌ಆಫೀಸ್ ದಾಖಲೆ ನಿರ್ಮಿಸಿದರೆ, ಆಮಿರ್‌ಖಾನ್‌ರ ದಂಗಲ್, ಚೀನಾದಲ್ಲಿ 1 ಸಾವಿರ ಕೋಟಿ ರೂ.ಗೂ ಅಧಿಕ ಹಣವನ್ನು ಬಾಚಿಕೊಂಡಿದೆ. ಇದೀಗ ಬಾಕ್ಸ್‌ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯ್‌ಜಾನ್ ಚೀನಾದಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸುವತ್ತ ದಾಪುಗಾಲಿಡುತ್ತಿದೆ.

     ಮಾರ್ಚ್ 2ರಂದು ಚೀನಾದಲ್ಲಿ ಬಿಡುಗಡೆಯಾದ ಭಜರಂಗಿ ಭಾಯ್‌ಜಾನ್ , ಅಲ್ಲೀಗ ದಾಖಲೆಯ ಹೊಸ ಮೈಲುಗಲ್ಲನ್ನು ನೆಟ್ಟಿದ್ದು, ಚೀನಾದಲ್ಲಿ ಅತ್ಯಧಿಕ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಚಿತ್ರವೆನಿಸಿಕೊಂಡಿದೆ. ಸುಮಾರು 8 ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಭಜರಂಗಿ ಭಾಯ್‌ಜಾನ್ ಮೊದಲ ದಿನವೇ 15.43 ಕೋಟಿ ರೂ. ಬಾಚಿಕೊಂಡಿದ್ದಾನೆ. ಚೀನಾದಲ್ಲಿ ಈ ಹಿಂದೆ, ಆಮಿರ್‌ಖಾನ್ ಅಭಿನಯದ ತ್ರಿ ಈಡಿಯಟ್ ಒಟ್ಟು ಗಳಿಕೆ 14.26 ಕೋಟಿ ರೂ. ಆಗಿತ್ತು, ಭಜರಂಗಿ ಭಾಯ್‌ಜಾನ್‌ನ ಗಳಿಕೆ ಅದನ್ನು ಒಂದೇ ದಿನದಲ್ಲಿ ದಾಟಿದೆ. ಚೀನಾದಲ್ಲಿ ದಂಗಲ್ 6 ಸಾವಿರ ಪರದೆಗಳಲ್ಲಿ ಹಾಗೂ ಸಿಕ್ರೇಟ್ ಸೂಪರ್‌ಸ್ಟಾರ್ 5 ಸಾವಿರ ಪರದೆಗಳಲ್ಲಿ ತೆರೆಕಂಡಿತ್ತು.

ಕಬೀರ್‌ಖಾನ್ ನಿರ್ದೇಶನದ ಭಜರಂಗಿ ಭಾಯ್‌ಜಾನ್‌ನಲ್ಲಿ ಸಲ್ಮಾನ್ ಜೊತೆಗೆ ಕರೀನಾ ಕಪೂರ್ ಖಾನ್ ಹಾಗೂ ಬಾಲನಟಿ ಹರ್ಷಾಲಿ ಮೆಹ್ತಾ ಅಭಿನಯಿಸಿದ್ದಾರೆ. ಭಾರತದಲ್ಲಿ ಈ ಚಿತ್ರ 320.34 ಕೋಟಿ ರೂ. ಸಂಪಾದಿಸಿದ್ದು, ಭಾರತದ ಅತ್ಯಧಿಕ ಗಳಿಕೆಯ ಚಿತ್ರಗಳಲ್ಲೊಂದೆನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News