‘102 ನಾಟ್‌ಔಟ್’ನಲ್ಲಿ ಬಿಗ್ ಬಿ ಸೆಂಚುರಿ ಅಜ್ಜ
ಬಾಲಿವುಡ್‌ನ ಎವರ್‌ಗ್ರೀನ್ ನಟರಾದ ಅಮಿತಾಭ್ ಬಚ್ಚನ್ ಹಾಗೂ ರಿಶಿಕಪೂರ್, ಬರೋಬ್ಬರಿ 27 ವರ್ಷಗಳ ಬಳಿಕ ಮತ್ತೊಮ್ಮೆ ಒಂದೇ ಬೆಳ್ಳಿಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೌದು. ಉಮೇಶ್ ಶುಕ್ಲಾ ನಿರ್ದೇಶನದ ‘102 ನಾಟ್‌ಔಟ್’ನಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ. ಅಮಿತಾಭ್-ರಿಶಿ, ಕೊನೆಯದಾಗಿ 1991ರಲ್ಲಿ ತೆರೆಕಂಡ ಅಜೂಬಾ ಚಿತ್ರದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. 102 ನಾಟ್ ಔಟ್ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಅವರು 102 ವರ್ಷದ ತಂದೆಯಾಗಿ ಕಾಣಿಸಿಕೊಳ್ಳಲಿದ್ದು, ಆತನ 75 ವರ್ಷ ವಯಸ್ಸಿನ ಪುತ್ರನಾಗಿ ರಿಶಿ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಸೆಂಚುರಿ ಅಜ್ಜನ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ಅಮಿತಾಭ್ ಬಚ್ಚನ್ ರ್ಯಾಪ್ ಹಾಡೊಂದನ್ನು ಹಾಡಿರುವುದು , ಚಿತ್ರರಸಿಕರಲ್ಲಿ ಭಾರೀ ಕುತೂಹಲವನ್ನು ಸೃಷ್ಟಿಸಿದೆ. ಅಲ್ಲದೆ, ಈ ಹಾಡಿಗೆ ಸ್ವತಃ ಬಿಗ್‌ಬಿ ಕಂಠದಾನ ಮಾಡಿದ್ದಾರೆ.
ತೀರಾ ಇತ್ತೀಚೆಗೆ ಅಮಿತಾಭ್, 102 ನಾಟ್‌ಔಟ್‌ನಲ್ಲಿ ತಾನು ವಿಶಿಷ್ಟ ಗೆಟಪ್‌ನಲ್ಲಿರುವ ಫೋಟೋ ಒಂದನ್ನು ಇನ್‌ಸ್ಟಾಗ್ರಾಂನಲ್ಲಿ ಪ್ರಸಾರ ಮಾಡಿದ್ದರು.ಅಲ್ಲದೆ ತಾನು ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ರ್ಯಾಪ್ ಹಾಡುತ್ತಿರುವ ವೀಡಿಯೊವನ್ನು ಕೂಡಾ ಪೋಸ್ಟ್ ಮಾಡಿದ್ದಾರೆ.
ಉಮೇಶ್ ಶುಕ್ಲಾ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರವು ಸೌಮ್ಯಾ ಜೋಶಿಯವರ ಗುಜರಾತಿ ನಾಟಕವೊಂದನ್ನು ಆಧರಿಸಿದೆ.ಜಗತ್ತಿನಲ್ಲೇ ಅತ್ಯಂತ ಹಿರಿಯ ವಯಸ್ಸಿನ ವ್ಯಕ್ತಿಯೆಂಬ ಚೀನಿಯನೊಬ್ಬ ಹೊಂದಿರುವ ದಾಖಲೆಯನ್ನು ಮುರಿಯಲು ಪ್ರಯತ್ನಿಸುವ 102 ವರ್ಷ ವಯಸ್ಸಿನ ಶತಾಯುಷಿಯ ಸುತ್ತ ಈ ಚಿತ್ರದ ಕಥೆ ತಿರುಗುತ್ತದೆ. ಅಂದಹಾಗೆ ಅಮಿತಾಭ್ ಹಾಗೂ ರಿಶಿಕಪೂರ್ ಈ ಮೊದಲು ಕಭೀಕಭೀ (1976),ಅಮರ್ ಅಕ್ಬರ್ ಆ್ಯಂಟನಿ (1977), ನಸೀಬ್ (1981), ಕೂಲಿ (1983) ಹಾಗೂ ಅಜೂಬಾ (1991) ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರು.