ನಟನಾನುಭವದ ಬಗ್ಗೆ ಭಾವನಾ ಮಾತುಕತೆ

Update: 2018-03-10 18:33 GMT
Editor : -ಶಶಿ

ಟಗರು ಚಿತ್ರವನ್ನು ಒಪ್ಪಿಕೊಂಡ ಬಗ್ಗೆ?

ಉ: ಟಗರುಗೂ ಮೊದಲೇ ಶಿವಣ್ಣನ ಚಿತ್ರಕ್ಕೆ ನನ್ನನ್ನು ಆಹ್ವಾನಿಸಿದ್ದರು. ಆದರೆ ಕಾಲ್‌ಶೀಟ್ ಸಮಸ್ಯೆಯಿಂದ ಆಗ ನನಗೆ ನಟಿಸಲು ಸಾಧ್ಯವಾಗಿರಲಿಲ್ಲ. ಆದರೆ ಟಗರುನಲ್ಲಿ ವಿಶೇಷ ಪಾತ್ರವಿದೆ ಎಂದು ಹೇಳಿದಾಗ ಒಪ್ಪಿದೆ.

ನಿರ್ದೇಶಕರ ಬಗ್ಗೆ?
ಉ: ನಿಜ ಹೇಳಬೇಕೆಂದರೆ ನಾನು ಸೂರಿ ಅವರನ್ನು ತುಂಬ ಗೌರವಿಸುತ್ತೇನೆ! ಯಾಕೆಂದರೆ ಅವರೇ ನನಗೆ ಕನ್ನಡದಲ್ಲಿ ಮೊದಲ ಅವಕಾಶ ಕೊಟ್ಟವರು. ಇಲ್ಲಿಯೂ 9 ದಿನಗಳ ಚಿತ್ರೀಕರಣ ಎಂದರು. ಈಗ ಪಾತ್ರ ಸಣ್ಣದಾದರೂ ಪ್ರಶಂಸೆ ಪಡೆಯುವಂತಿದೆ. ಅದು ಅವರ ಶಕ್ತಿ.

 ಪುನೀತ್ ಮತ್ತು ಶಿವರಾಜ್ ಕುಮಾರ್ ಜೊತೆಗಿನ ನಟನೆ ಹೇಗೆ ವಿಭಿನ್ನವೆನಿಸುತ್ತದೆ?

ಉ: ಇಬ್ಬರೂ ಕೂಡ ಬಹಳ ಫ್ರೆಂಡ್ಲಿ, ಡೌನ್ ಟು ಅರ್ಥ್. ಸ್ಟಾರ್ ನಟರೆಂಬ ಭಾವವನ್ನೇ ತೋರಿಸದ ವ್ಯಕ್ತಿತ್ವ ಇವರದು. ರಾಜಕುಮಾರ್ ಸರ್‌ರಂಥ ದೊಡ್ಡ ಫ್ಯಾಮಿಲಿಯಿಂದ ಬಂದಿದ್ದರೂ, ಇವರಲ್ಲಿ ಯಾವುದೇ ಅಹಂಭಾವಗಳನ್ನು ಕಂಡಿಲ್ಲ. ವೃತ್ತಿಯೆಡೆಗಿನ ಅವರ ಅರ್ಪಣಾಭಾವ ಕಂಡು ಅಚ್ಚರಿ, ಖುಷಿ ನೀಡಿದೆ.

ಸುದೀಪ್‌ರೊಂದಿಗೆ ಎರಡು ಚಿತ್ರಗಳಲ್ಲಿ ನಟಿಸಿದ ಅನುಭವ ಹೇಗಿತ್ತು?
ಉ: ಹೌದು. ಸುದೀಪ್ ಜೊತೆಗೆ ಎರಡು ಸಿನೆಮಾಗಳಲ್ಲಿ ನಟಿಸಿದ್ದೇನೆ. ಒಂದರಲ್ಲಿ ನಾಯಕಿಯಾಗಿ ಮತ್ತು ಇನ್ನೊಂದು ಚಿತ್ರದಲ್ಲಿ ಹಾಡಲ್ಲಿ ಕಾಣಿಸಿಕೊಂಡಿದ್ದೇನೆ. ಸುದೀಪ್ ಕೂಡ ನಾನು ಮೆಚ್ಚುವ ನಟರಲ್ಲಿ ಒಬ್ಬರು.

 ನಿರ್ಮಾಪಕ ನವೀನ್‌ರೊಂದಿಗೆ ನಡೆದ ನಿಮ್ಮ ವಿವಾಹದ ಬಗ್ಗೆ?
ಉ: ನವೀನ್‌ಗೆ ಕನ್ನಡ ಗೊತ್ತು. ನವೀನ್ ನಿರ್ಮಿಸಿರುವುದು ಕನ್ನಡ ಚಿತ್ರಗಳನ್ನು. ಆದರೆ ಅವರು ತೆಲುಗಿನವರು. ರೋಮಿಯೋ ಎಂಬ ಗಣೇಶ್ ಚಿತ್ರದ ಸೆಟ್‌ನಲ್ಲಿಯೇ ನಿರ್ಮಾಪಕರಾದ ನವೀನ್ ಪರಿಚಯವಾಗಿದ್ದರು. ಆ ಪರಿಚಯ ನಮ್ಮನ್ನು ಮದುವೆಯ ತನಕ ತಂದಿತು.

ಪ್ರಸ್ತುತ ನೀವು ತೊಡಗಿಸಿಕೊಂಡಿರುವ ಚಿತ್ರಗಳು ಯಾವುವು?
ಉ: ಕೊನೆಯದಾಗಿ ಮಲಯಾಳಂನಲ್ಲಿ ಪೃಥ್ವಿರಾಜ್‌ಗೆ ಜೋಡಿಯಾಗಿರುವ ಆ್ಯಡಂ ಜ್ಯೂವ ಎಂಬ ಸಿನೆಮಾ ಬಿಡುಗಡೆ ಯಾಯಿತು. ಅದರ ಬಳಿಕ ಥಿಯೇಟರ್‌ನಲ್ಲಿರುವ ಚಿತ್ರ ಇದೇ. ಕನ್ನಡದಲ್ಲಿ ಪ್ರಜ್ವಲ್ ದೇವರಾಜ್ ನಾಯಕರಾಗಿರುವ ‘ಇನ್‌ಸ್ಪೆಕ್ಟರ್ ವಿಕ್ರಮ್’ ಚಿತ್ರವನ್ನು ಒಪ್ಪಿಕೊಂಡಿದ್ದೇನೆ.

 ಮದುವೆಯ ಬಳಿಕ ಅವಕಾಶಗಳು ಕಡಿಮೆ ಎನಿಸಿದೆಯೇ?
ಉ: ಖಂಡಿತವಾಗಿ ಇಲ್ಲ. ಆದರೆ ನಾನು ಆರಂಭದಿಂದಲೂ ಆಯ್ದ ಚಿತ್ರಗಳಲ್ಲಿ ಮಾತ್ರ ನಟಿಸುತ್ತೇನೆ. ಹಾಗಾಗಿ ನಿಧಾನಕ್ಕೆ ಒಪ್ಪಿಕೊಳ್ಳುತ್ತಿದ್ದೇನೆ.

ಇನ್ನು ಗ್ಲಾಮರಸ್ ಪಾತ್ರಗಳಲ್ಲಿ ನಿಮ್ಮನ್ನು ನಿರೀಕ್ಷಿಸುವಂತಿಲ್ಲ, ಎನ್ನಬಹುದೇ?
ಉ: ಹಾಗೇನಿಲ್ಲ. ನೀವು ಸೂಕ್ಷ್ಮವಾಗಿ ಗಮನಿಸಿದರೆ ನಾನು ಇದುವರೆಗೆ ನಟಿಸಿದ ಯಾವ ಚಿತ್ರಗಳಲ್ಲಿಯೂ ಹೆಚ್ಚು ಗ್ಲಾಮರಸ್ಸಾಗಿ ಕಾಣಿಸಿಲ್ಲ. ಮಾತ್ರವಲ್ಲ, ಮದುವೆಯ ಬಳಿಕ ಇಂಥದೇ ಪಾತ್ರಗಳನ್ನಷ್ಟೇ ಮಾಡುತ್ತೇನೆ ಎಂಬ ನಿರ್ಧಾರ ತೆಗೆದುಕೊಂಡಿಲ್ಲ. ಉದಾಹರಣೆಗೆ ‘ಇನ್‌ಸ್ಪೆಕ್ಟರ್ ವಿಕ್ರಮ್’ ಚಿತ್ರದಲ್ಲಿ ಡ್ರಗ್ಸ್ ಡೀಲರ್ ಪಾತ್ರ ನಿರ್ವಹಿಸುತ್ತಿದ್ದೇನೆ!

 ನಿಮಗೆ ವಿಶ್ವ ಪರ್ಯಟನೆಯ ಕನಸಿರುವುದು ಗೊತ್ತು. ನಿಮಗೆ ಇಷ್ಟವಾಗುವ ವಿದೇಶ ಯಾವುದು?

ಉ: ಸಾಮಾನ್ಯವಾಗಿ ನಾನು ಎಲ್ಲೇ ಹೋದರೂ ಅಲ್ಲಿ ಕೇರಳದವರು ಸಿಗುತ್ತಾರೆ. ಹಾಗಾಗಿ ನನಗೆ ಎಲ್ಲ ದೇಶಗಳೂ ಒಂದೇ ಅನಿಸುತ್ತವೆ. ಉಳಿದಂತೆ ದುಬೈ ಒಂದಷ್ಟು ಆಪ್ತವಾಗುತ್ತದೆ. ನಮ್ಮ ದೇಶದಿಂದ ಮೂರುವರೆ ಗಂಟೆಗಳ ಪ್ರಯಾಣ ಮಾತ್ರ ಇದೆ. ಶಾಪಿಂಗ್‌ಗೂ ಇಷ್ಟ. ಯುಎಸ್ ಕೂಡ ಇಷ್ಟ.

► ಬೇರೆ ಭಾಷೆಗಳಿಗಿಂತ ಕನ್ನಡದಲ್ಲಿನ ನಟನೆ ಹೇಗೆ ಭಿನ್ನವೆನಿಸುತ್ತದೆ?
ಉ: ನನ್ನ ನಟನೆಯ ವಿಚಾರಕ್ಕೆ ಬಂದರೆ ನನಗೆ ಭಾರೀ ಬದಲಾವಣೆ ಮಾಡಬೇಕಾಗಿ ಬಂದಿಲ್ಲ. ತಮಿಳು, ತೆಲುಗು ಮತ್ತು ಈಗ ಕನ್ನಡ ಹೀಗೆ ಭಾಷೆಗಳು ಕೂಡ ನನಗೆ ದೊಡ್ಡ ಮಟ್ಟದ ತೊಂದರೆಯೆನಿಸಿಲ್ಲ. ಸಾಮಾನ್ಯವಾಗಿ ನನಗೆ ಇಂಗ್ಲಿಷ್ ಲೆಟರ್ಸ್‌ನಲ್ಲಿ ಡೈಲಾಗ್ಸ್ ಬರೆದು ಕೊಡುತ್ತಾರೆ. ಅದರ ಅರ್ಥ ಕೇಳಿಕೊಂಡು ಕಂಠಪಾಠ ಮಾಡಿ ಹೇಳುತ್ತೇನೆ.

Writer - -ಶಶಿ

contributor

Editor - -ಶಶಿ

contributor

Similar News