ಐಎನ್‌ಎಕ್ಸ್ ಮೀಡಿಯ ಪ್ರಕರಣ: ಕಾರ್ತಿಗೆ ನ್ಯಾಯಾಂಗ ಬಂಧನಕ್ಕೆ ಸಿಬಿಐ ಮನವಿ

Update: 2018-03-12 14:01 GMT

ಹೊಸದಿಲ್ಲಿ, ಮಾ.12: ಐಎನ್‌ಎಕ್ಸ್ ಮೀಡಿಯ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದ ಕಾರ್ತಿ ಚಿದಂಬರಂ ಅವರನ್ನು ಸೋಮವಾರದಂದು ದಿಲ್ಲಿ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಈ ವೇಳೆ ಕಾರ್ತಿಯನ್ನು ಹದಿನೈದು ದಿನಗಳ ಕಾಲ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸುವಂತೆ ಸಿಬಿಐ ಮನವಿ ಮಾಡಿದೆ. ಮಾಜಿ ಕೇಂದ್ರ ಸಚಿವ ಪಿ. ಚಿದಂಬರಮ್ ಪುತ್ರರಾದ ಕಾರ್ತಿಯನ್ನು ವಿಶೇಷ ನ್ಯಾಯಾಧೀಶ ಸುನೀಲ್ ರಾನಾ ಅವರ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಈ ವೇಳೆ ಸಿಬಿಐ ವಕೀಲ ವಿ.ಕೆ ಶರ್ಮಾ, ಕಾರ್ತಿಯನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸುವಂತೆ ಮನವಿ ಮಾಡಿದ್ದಾರೆ. ಆದರೆ ಮಾರ್ಚ್ 15ಕ್ಕೆ ನಿಗದಿಯಾಗಿದ್ದ ಕಾರ್ತಿಯ ಜಾಮೀನು ವಿಚಾರಣೆಯನ್ನು ಇಂದೇ (ಸೋಮವಾರ) ನಡೆಸಬೇಕೆಂದು ಅವರ ಪರ ವಕೀಲರು ನ್ಯಾಯಾಲಯದಲ್ಲಿ ಮನವಿ ಮಾಡಿದರು. ಕಾರ್ತಿಯನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದರೆ ಅವರಿಗೆ ಪ್ರತ್ಯೇಕ ಕೋಣೆಯ ವ್ಯವಸ್ಥೆ ಮಾಡಲು ಸೂಚಿಸುವಂತೆ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಫೆಬ್ರವರಿ 28ರಂದು ಬಂಧನವಾದ ದಿನದಿಂದ ಕಾರ್ತಿ ಸಿಬಿಐ ಕಸ್ಟಡಿಯಲ್ಲಿದ್ದಾರೆ. ಕಳೆದ ವರ್ಷ ಮೇ 15ರಂದು ದಾಖಲಾದ ಎಫ್‌ಐಅರ್‌ಗೆ ಸಂಬಂಧಿಸಿದಂತೆ ಬ್ರಿಟನ್‌ನಿಂದ ವಾಪಾಸಾಗುತ್ತಿದ್ದ ಕಾರ್ತಿಯನ್ನು ಬಂಧಿಸಲಾಗಿತ್ತು. 2007ರ ಅವಧಿಯಲ್ಲಿ ಪಿ. ಚಿದಂಬರಂ ಕೇಂದ್ರ ವಿತ್ತ ಸಚಿವರಾಗಿದ್ದ ಸಮಯದಲ್ಲಿ ಸುಮಾರು 305 ಕೋಟಿ ರೂ. ವಿದೇಶಿ ಬಂಡವಾಳವನ್ನ್ನು ಪಡೆಯುವ ಸಲುವಾಗಿ ಕಾರ್ತಿ ವಿದೇಶಿ ಹೂಡಿಕೆ ಪ್ರೋತ್ಸಾಹ ಮಂಡಳಿಯ (ಎಫ್‌ಐಪಿಬಿ) ಅನುಮತಿಯಲ್ಲಿ ಅವ್ಯವಹಾರ ನಡೆಸಿದ್ದರು ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿತ್ತು. ಈ ಅವ್ಯವಹಾರದಲ್ಲಿ ಕಾರ್ತಿಗೆ 4.50 ಕೋಟಿ ರೂ. ಲಂಚ ನೀಡಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News