ವಂಚಕರ ಆಸ್ತಿ ಮುಟ್ಟುಗೋಲು: ಮಸೂದೆ ಮಂಡನೆ

Update: 2018-03-12 14:43 GMT

ಹೊಸದಿಲ್ಲಿ, ಮಾ.12: ಬೃಹತ್ ಮೊತ್ತದ ಸಾಲ ಪಡೆದು ಬಳಿಕ ತಲೆಮರೆಸಿಕೊಳ್ಳುವ ವಂಚಕರ ಹಾಗೂ ಭಾರೀ ಮೊತ್ತದ ಸಾಲವನ್ನು ಬಾಕಿ ಇರಿಸಿಕೊಂಡಿರುವ ವ್ಯಕ್ತಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಅದನ್ನು ಮಾರಲು ಅವಕಾಶ ಮಾಡಿಕೊಡುವ ಮಸೂದೆಯನ್ನು ಕೇಂದ್ರ ಸರಕಾರ ಮಂಡಿಸಿದೆ.

‘ದಿ ಫ್ಯುಜಿಟಿವ್ ಇಕನಾಮಿಕ್ ಅಫೆಂಡರ್ಸ್‌ ಬಿಲ್ 2018 (ತಲೆಮರೆಸಿಕೊಂಡಿರುವ ಆರ್ಥಿಕ ಅಪರಾಧಿಗಳ ಮಸೂದೆ ) ಎಂಬ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿದ್ದು, ಭಾರತದಲ್ಲಿ ಆರ್ಥಿಕ ವಂಚನೆ ಎಸಗಿದ ಬಳಿಕ ವಿದೇಶದಲ್ಲಿ ತಲೆಮರೆಸಿಕೊಂಡಿರುವ ನೀರವ್ ಮೋದಿಯಂತಹ ಅಪರಾಧಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಅದನ್ನು ಮಾರಾಟ ಮಾಡಲು ಮಸೂದೆ ಅವಕಾಶ ನೀಡುತ್ತದೆ.

ವಂಚನೆ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡು ಭಾರತದಲ್ಲಿ ನಡೆಯುವ ಕಾನೂನು ಪ್ರಕ್ರಿಯೆಗೆ ಗೈರು ಹಾಜರಾಗುತ್ತಿರುವುದು ಹಲವು ಹಾನಿಕಾರಕ ಪರಿಣಾಮ ಉಂಟು ಮಾಡುತ್ತದೆ. ಕ್ರಿಮಿನಲ್ ಪ್ರಕರಣದ ತನಿಖಾ ಪ್ರಕ್ರಿಯೆಗೆ ಇದು ಅಡ್ಡಿಯಾಗುತ್ತದೆ. ಅಲ್ಲದೆ ನ್ಯಾಯಾಲಯಗಳ ಅಮೂಲ್ಯ ಸಮಯವನ್ನು ವ್ಯರ್ಥಗೊಳಿಸುತ್ತದೆ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.

ಅಲ್ಲದೆ ಬಹುತೇಕ ಪ್ರಕರಣಗಳಲ್ಲಿ ಬ್ಯಾಂಕ್‌ನಿಂದ ಸಾಲ ಪಡೆದು ಅದನ್ನು ಮರುಪಾವತಿಸಿಲ್ಲ. ಇದರಿಂದ ಬ್ಯಾಂಕ್‌ಗಳ ಆರ್ಥಿಕ ಸ್ವಾಸ್ಥ್ಕಕೆ ಹಾನಿಯಾಗುತ್ತದೆ. ಈ ಸಂದರ್ಭ ದೇಶದಲ್ಲಿರುವ ಕಾನೂನುಗಳು ಈ ತೀವ್ರ ಸಮಸ್ಯೆಗೆ ಸೂಕ್ತ ಪರಿಹಾರ ಹುಡುಕಲು ವಿಫಲವಾಗಿದೆ. ಆದ್ದರಿಂದ ಹೊಸ ಕಾನೂನಿನ ಅಗತ್ಯವಿದೆ ಎಂದು ಸರಕಾರ ತಿಳಿಸಿದೆ.

   ತಲೆತಪ್ಪಿಸಿಕೊಂಡಿರುವ ಆರ್ಥಿಕ ಅಪರಾಧಿ ಎಂದರೆ 100 ಕೋಟಿ ರೂ. ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತದ ಸಾಲ ಮಾಡಿ ಅದನ್ನು ಪಾವತಿಸದೆ ಭಾರತದಿಂದ ತಲೆತಪ್ಪಿಸಿಕೊಂಡಿರುವ  ಭಾರತಕ್ಕೆ ಮರಳಿ ಕಾನೂನು ಕ್ರಮ ಎದುರಿಸಲು ನಿರಾಕರಿಸುವ ವ್ಯಕ್ತಿ ಎಂದು ಮಸೂದೆಯಲ್ಲಿ ವ್ಯಾಖ್ಯಾನಿಸಲಾಗಿದೆ. ಇಂತಹ ಪ್ರಕರಣಗಳಲ್ಲಿ ಆ ವ್ಯಕ್ತಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನು ಸಂಬಂಧಪಟ್ಟ ಸಂಸ್ಥೆಗಳಿಗೆ ನೀಡಲಾಗುತ್ತದೆ. ಸಂಸ್ಥೆಯ ನಿರ್ದೇಶಕರು ಈ ವಂಚಕ ಅಪರಾಧಿಗಳ ಆಸ್ತಿಯ ಸಮೀಕ್ಷೆ, ಶೋಧ ಹಾಗೂ ಜಪ್ತಿ ಕಾರ್ಯಾಚರಣೆಗೆ ಆದೇಶಿಸುವ ಅಧಿಕಾರ ಹೊಂದುತ್ತಾರೆ.

ಈಗ ಜಾರಿಯಲ್ಲಿರುವ ಹಣ ಅಕ್ರಮ ಸಾಗಣೆ ತಡೆ ಕಾಯ್ದೆಗಿಂತ ಈ ಪ್ರಸ್ತಾವಿತ ಕಾಯ್ದೆ ವಿಭಿನ್ನವಾಗಿದೆ. ಹಣ ಅಕ್ರಮ ಸಾಗಣೆ ತಡೆ ಕಾಯ್ದೆಯಲ್ಲಿ ಅಪರಾಧಿಯು ಅಪರಾಧ ಕೃತ್ಯದಲ್ಲಿ ಪಡೆದ ಲಾಭವನ್ನು ಮಾತ್ರ ಮುಟ್ಟುಗೋಲು ಹಾಕಿಕೊಳ್ಳಲು, ಅದೂ ಕೂಡಾ ಆತನ ಅಪರಾಧ ಸಾಬೀತಾದರೆ ಮಾತ್ರ ಅವಕಾಶವಿದೆ. ಆದರೆ ಪ್ರಸ್ತಾವಿತ ಮಸೂದೆಯಲ್ಲಿ ಅಪರಾದಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. ಇಲ್ಲಿ ಆತನ ಅಪರಾಧ ಸಾಬೀತಾಗುವವರೆಗೆ ಕಾಯುವ ಅಗತ್ಯವಿರುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News