2004ರ ಒಲಿಂಪಿಕ್ಸ್ ವೇಳೆ ವಿಮಾನ ಕೆಡವಲು ಆದೇಶ ನೀಡಿದ್ದ ಪುಟಿನ್!
ಮಾಸ್ಕೊ, ಮಾ. 12: ನಾಲ್ಕು ವರ್ಷಗಳ ಹಿಂದೆ ಬಾಂಬೊಂದನ್ನು ಹೊತ್ತುಕೊಂಡು ಸೋಚಿ ಚಳಿಗಾಲದ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದತ್ತ ಧಾವಿಸುತ್ತಿತ್ತು ಎನ್ನಲಾದ ಪ್ರಯಾಣಿಕ ವಿಮಾನವೊಂದನ್ನು ಹೊಡೆದುರುಳಿಸಲು ತಾನು ಆದೇಶ ನೀಡಿದ್ದೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.
ರವಿವಾರ ಪ್ರದರ್ಶಿಸಲಾದ ಚಿತ್ರವೊಂದರಲ್ಲಿ ಅವರು ಈ ಮಾತುಗಳನ್ನು ಹೇಳಿದ್ದಾರೆ. ‘ಪುಟಿನ್’ ಎಂಬ ಹೆಸರಿನ ಎರಡು ಗಂಟೆಗಳ ಸಾಕ್ಷಚಿತ್ರದಲ್ಲಿ ಈ ಬಗ್ಗೆ ವಿವರಗಳಿವೆ. ಚಿತ್ರವು ರಶ್ಯದ ಸಾಮಾಜಿಕ ಜಾಲತಾಣದಲ್ಲಿ ಲಭ್ಯವಿದೆ.
ಸೋಚಿ ಒಲಿಂಪಿಕ್ಸ್‌ನ ಭದ್ರತೆಯ ಉಸ್ತುವಾರಿ ಹೊತ್ತ ಅಧಿಕಾರಿಗಳಿಂದ 2014 ಫೆಬ್ರವರಿ 7ರಂದು ತನಗೆ ಟೆಲಿಫೋನ್ ಕರೆಯೊಂದು ಬಂತು ಎಂದು ಚಿತ್ರದಲ್ಲಿ ಪತ್ರಕರ್ತ ಆ್ಯಂಡ್ರಿ ಕೊಂಡ್ರಶೊವ್‌ರಿಗೆ ಸಂದರ್ಶನ ನೀಡುತ್ತಿರುವ ಪುಟಿನ್ ಹೇಳುತ್ತಾರೆ. ಕೆಲವೇ ಕ್ಷಣಗಳಲ್ಲಿ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ಆರಂಭಗೊಳ್ಳಬೇಕಿತ್ತು.
‘‘ಯುಕ್ರೇನ್‌ನಿಂದ ಇಸ್ತಾಂಬುಲ್‌ಗೆ ಹೋಗುತ್ತಿದ್ದ ವಿಮಾನವೊಂದನ್ನು ಅಪಹರಿಸಲಾಗಿದೆ. ವಿಮಾನವನ್ನು ಸೋಚಿಯಲ್ಲಿ ಇಳಿಸಬೇಕು ಎಂಬುದಾಗಿ ಅಪಹರಣಕಾರರು ಒತ್ತಾಯಿಸುತ್ತಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ನನಗೆ ಹೇಳಿದರು’’ ಎಂದು ಪುಟಿನ್ ಹೇಳುತ್ತಾರೆ.
ವಿಮಾನದಲ್ಲಿರುವ ಓರ್ವ ಪ್ರಯಾಣಿಕನ ಬಳಿ ಬಾಂಬ್ ಇದೆ ಹಾಗೂ ವಿಮಾನ ಸೋಚಿಯತ್ತ ಹೋಗಬೇಕಾಗಿದೆ ಎಂಬುದಾಗಿ ಟರ್ಕಿಯ ಪೆಗಸಸ್ ಏರ್‌ಲೈನ್ಸ್ ವಿಮಾನದ ಪೈಲಟ್‌ಗಳು ವರದಿ ಮಾಡಿದ್ದಾರೆ ಎಂದು ಪತ್ರಕರ್ತ ಕೊಂಡ್ರಶೊವ್ ಹೇಳುತ್ತಾರೆ.
ವಿಮಾನದಲ್ಲಿ 110 ಪ್ರಯಾಣಿಕರಿದ್ದರು ಹಾಗೂ ಸೋಚಿಯ ಸ್ಟೇಡಿಯಂನಲ್ಲಿ 40,000 ಪ್ರೇಕ್ಷಕರು ಸೇರಿದ್ದರು.
‘‘ನಾನು ಭದ್ರತಾ ಅಧಿಕಾರಿಗಳಿಂದ ಸಲಹೆ ಕೋರಿದೆ. ಇಂಥ ಸಂದರ್ಭದಲ್ಲಿ ಅನುಸರಿಸಲಾಗುವ ತುರ್ತು ಕ್ರಮವೆಂದರೆ ವಿಮಾನವನ್ನು ಹೊಡೆದುರುಳಿಸುವುದು ಎಂಬುದಾಗಿ ಅವರು ಹೇಳಿದರು’’ ಎಂದು ಪುಟಿನ್ ಹೇಳಿದರು.
‘‘ಯೋಜನೆಯ ಪ್ರಕಾರ ಮುಂದುವರಿಯಿರಿ’’ ಎಂದು ನಾನು ಅವರಿಗೆ ಸೂಚನೆ ನೀಡಿದೆ ಎಂದು ಪುಟಿನ್ ಹೇಳಿದರು.
‘‘ಅದಾದ ಕ್ಷಣಗಳ ಬಳಿಕ ನಾನು ಸೋಚಿ ಒಲಿಂಪಿಕ್ಸ್ ಉದ್ಘಾಟನಾ ಸ್ಥಳಕ್ಕೆ ಬಂದೆ. ಕೆಲವು ನಿಮಿಷಗಳ ಬಳಿಕ ನನಗೆ ಫೋನ್ ಕರೆಯೊಂದು ಬಂತು. ಅದು ತಪ್ಪು ಮಾಹಿತಿಯಾಗಿತ್ತು. ಆ ಪ್ರಯಾಣಿಕ ಕುಡಿದ ಮತ್ತಿನಲ್ಲಿ ಬೆದರಿಕೆ ಹಾಕಿದ್ದಾನೆ ಹಾಗೂ ವಿಮಾನ ಈಗ ಟರ್ಕಿಯತ್ತ ಹೋಗುತ್ತಿದೆ ಎಂದು ನನಗೆ ಹೇಳಲಾಯಿತು’’ ಎಂದರು ಪುಟಿನ್.