ಎನ್ನ ಕಾಯವ ದಂಡಿಗೆಯ ಮಾಡಯ್ಯ

Update: 2018-03-12 18:35 GMT

ಎನ್ನ ಕಾಯವ ದಂಡಿಗೆಯ ಮಾಡಯ್ಯ,
ಎನ್ನ ಶಿರವ ಸೋರೆಯ ಮಾಡಯ್ಯ,
ಎನ್ನ ನರವ ತಂತಿಯ ಮಾಡಯ್ಯ,
ಎನ್ನ ಬೆರಳ ಕಡ್ಡಿಯ ಮಾಡಯ್ಯ,
ಬತ್ತೀಸ ರಾಗವ ಪಾಡಯ್ಯ, ಉರದಲೊತ್ತಿ ಬಾರಿಸು,
ಕೂಡಲಸಂಗಮದೇವಾ.
                                              -ಬಸವಣ್ಣ

‘ನಾದಪ್ರಿಯನೂ ಅಲ್ಲ, ವೇದಪ್ರಿಯನೂ ಅಲ್ಲ, ಭಕ್ತಿಪ್ರಿಯ ನಮ್ಮ ಕೂಡಲಸಂಗಮ ದೇವ.’ ಎಂದು ಇನ್ನೊಂದು ವಚನದಲ್ಲಿ ಹೇಳಿದ ಬಸವಣ್ಣನವರು ಈ ವಚನದಲ್ಲಿ ‘ಬತ್ತೀಸರಾಗವ ಹಾಡು’ ಎಂದು ದೇವರನ್ನು ಕೇಳಿಕೊಳ್ಳುತ್ತಿದ್ದಾರೆ. ನಾದ ಬಿಂದು ಕಳಾತೀತನಾದ ದೇವರು ನಾದಪ್ರಿಯನಲ್ಲವ್ದಾದರಿಂದ ನಾವು ಅವನನ್ನು ಹಾಡಿನ ಮೂಲಕ ಸಂಪ್ರೀತಗೊಳಿಸಲಾರೆವು. ಆದರೆ ದೇವರು ಭಕ್ತನ ದೇಹವನ್ನೇ ತಂತೀವಾದ್ಯ ವಾಗಿಸಿಕೊಂಡು ಸ್ವತಃ 32 ರಾಗಗಳನ್ನು ಹಾಡಬಯಸುತ್ತಾನೆ ಎಂದು ಸೂಚಿಸುತ್ತಾರೆ.
ಭಕ್ತನಾದವನು ಕಾಯಕಪ್ರಜ್ಞೆ, ಪ್ರಸಾದನಿಷ್ಠೆ, ದಾಸೋಹಭಾವ, ಅರಿವು, ಆಚಾರ, ವ್ರತ, ನೇಮ, ಶೀಲ, ಅಂತರಂಗಶುದ್ಧಿ ಮತ್ತು ಬಹಿರಂಗ ಶುದ್ಧಿಯಿಂದ ತನ್ನ ಅಂಗಾಂಗ ಗಳನ್ನೆಲ್ಲ ಭಕ್ತಿನಾದ ಹೊರಡಿಸುವ ತಂತೀವಾದ್ಯವಾಗಿಸಲು ಸಿದ್ಧಗೊಳಿಸಬೇಕು. ಭಕ್ತನ ಕಾಯವು ಪರಮಾತ್ಮನ ತಂತೀವಾದ್ಯದ ದಂಡವಾಗುವ ಯೋಗ್ಯತೆ ಹೊಂದಬೇಕು. ಶಿರವು ತಂತೀವಾದ್ಯದ ತುದಿಗೆ ಅಳವಡಿಸುವ ಸೋರೆಯ ಬುರುಡೆಯಾಗಬೇಕು. ನಮ್ಮ ನರನಾಡಿಗಳೆಲ್ಲ ಭಕ್ತಿನಾದ ಹೊರಡಿಸುವ ತಂತಿಗಳಾಗಬೇಕು. ಬೆರಳುಗಳು ತಂತಿಯನ್ನು ಬಿಗಿಗೊಳಿಸಲು ಅಳವಡಿಸಿದ ಕೀಲಿನಂಥ ಸಾಧನಗಳಾದ ಬಿರಡೆಗಳಾಗಬೇಕು. ಹೀಗೆ ‘‘ನನ್ನ ದೇಹವನ್ನು ತಂತೀವಾದ್ಯವಾಗಿಸಿ ದಯಾಮೂಲವಾದ ಎದೆಯಲ್ಲಿ ಒತ್ತಿ ಬಾರಿಸುತ್ತ 32 ರಾಗಗಳನ್ನು ಹಾಡು’’ ಎಂದು ಬಸವಣ್ಣನವರು ಕೂಡಲಸಂಗಮದೇವರಲ್ಲಿ ಬಿನ್ನವಿಸಿಕೊಳ್ಳುತ್ತಿದ್ದಾರೆ.
ಭಕ್ತನ ಅಂಗಾಂಗಗಳೆಲ್ಲ ಭಕ್ತಿನಾದಕ್ಕೆ ಸಜ್ಜಾಗಿರುವುದನ್ನು ದೇವರು ನೋಡಬಯಸು ತ್ತಾನೆ. ಮಾನವದೇಹವನ್ನು ತಂತಿವಾದ್ಯವಾಗಿಸುವ ಈ ವಚನ ಬಸವಣ್ಣನವರ ಕಲ್ಪನಾ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಒಂದು ವಾದ್ಯದ ಎಲ್ಲ ಬಿಡಿಭಾಗಗಳ ಮಧ್ಯೆ ನಾದಮಾಧುರ್ಯಕ್ಕೆ ಕುಂದುಂಟಾಗದ ರೀತಿಯ ಬಿಗಿ ಇದ್ದಾಗ ಮಾತ್ರ ನಾದ ಹೊರಡುತ್ತದೆ. ಮಾನವರು ತಮ್ಮ ಜ್ಞಾನ ಮತ್ತು ಕ್ರಿಯೆಯ ಮಧ್ಯದ ಅವಿನಾಭಾವ ಸಂಬಂಧವನ್ನು ಉಳಿಸಿಕೊಂಡು ಕಾಯವನ್ನು ಪ್ರಸಾದಕಾಯವಾಗಿಸಿಕೊಂಡಾಗ ಆ ಕಾಯವು, ದೇವರು ಉರದಲೊತ್ತಿ ಬಾರಿಸುವಂಥ ಸಂಗೀತ ಸಾಧನವಾಗುತ್ತದೆ. ಆಗ ಅದನ್ನು ಪರಮಾತ್ಮನು ನುಡಿಸಿದಾಗ ಪ್ರಣವನಾದ ಹೊರಡುತ್ತದೆ. (ಮಾನವ ಶರೀರದಲ್ಲಿ ನವಚಕ್ರಗಳಿದ್ದು ಅವುಗಳಿಗೆ ಸಂಬಂಧಿಸಿದಂತೆ ಒಂಬತ್ತು ಬಗೆಯ ಪ್ರಣವನಾದಗಳಿವೆ. ಶಿವಯೋಗದಲ್ಲಿ ನಿರತರಾದವರು ಈ ದಿವ್ಯನಾದವನ್ನು ಆಲಿಸುವರು ಎಂದು ಚೆನ್ನಬಸವಣ್ಣನವರು ತಿಳಿಸಿದ್ದಾರೆ.) ಹೀಗೆ ನಮ್ಮ ಕಾಯವು ದಿವ್ಯಸಂಗೀತಸಾಧನವಾಗಿ ಸಿದ್ಧವಾದಾಗ ಪರಶಿವನು ಅದನ್ನು ನುಡಿಸುವನು ಆಗ ಪ್ರಣವನಾದಗಳು ಹೊರಹೊಮ್ಮುವವು ಎಂಬ ಅನುಭಾವದ ಭಾಷೆ ಈ ವಚನದಲ್ಲಿ ಅಡಗಿದೆ. ಆತ್ಮನಾದವಾದ ಈ ಪ್ರಣವನಾದವೇ ಭಕ್ತಿನಾದ. ಹೀಗೆ ಬಸವಣ್ಣನವರ ವಚನಗಳಲ್ಲಿ ಬದುಕು, ಕಾವ್ಯ ಮತ್ತು ತತ್ತ್ವಗಳು ಮುಪ್ಪುರಿಗೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News