ಎರಡನೇ ಟೆಸ್ಟ್: ದಕ್ಷಿಣ ಆಫ್ರಿಕಕ್ಕೆ ಆರು ವಿಕೆಟ್ ಗೆಲುವು

Update: 2018-03-12 19:08 GMT

ಪೋರ್ಟ್ ಎಲಿಝಬೆತ್, ಮಾ.12: ವೇಗದ ಬೌಲರ್ ಕಾಗಿಸೊ ರಬಾಡ ಅವರ ಅಮೋಘ ಬೌಲಿಂಗ್ ಸಹಾಯದಿಂದ ದಕ್ಷಿಣ ಆಫ್ರಿಕ ತಂಡ ಆಸ್ಟ್ರೇಲಿಯ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಆರು ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 1-1ರಿಂದ ಸಮಬಲಗೊಳಿಸಿದೆ.

ನಾಲ್ಕನೇ ದಿನವಾದ ಸೋಮವಾರ ದಕ್ಷಿಣ ಆಫ್ರಿಕ ತಂಡ ಗೆಲುವಿಗೆ 101 ರನ್ ಗುರಿ ಪಡೆದಿತ್ತು. ಆಫ್ರಿಕ 22.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 102 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಆತಿಥೇಯರ ಪರ ಎಬಿಡಿ ವಿಲಿಯರ್ಸ್(28), ಹಾಶೀಮ್ ಅಮ್ಲ(27), ಮಾರ್ಕರಮ್(21) ಹಾಗೂ ಬ್ರಿಯಾನ್(ಅಜೇಯ 15)ಎರಡಂಕೆಯ ಸ್ಕೋರ್ ದಾಖಲಿಸಿ ತಂಡದ ಗೆಲುವಿಗೆ ನೆರವಾದರು.

ಪಂದ್ಯದಲ್ಲಿ ಒಟ್ಟು 11 ವಿಕೆಟ್‌ಗಳನ್ನು ಕಬಳಿಸಿದ ರಬಾಡ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದರು. ಆದರೆ, ರಬಾಡ ಅವರು ಅಶಿಸ್ತಿನ ವರ್ತನೆಗೆ ಐಸಿಸಿಯಿಂದ 2 ಪಂದ್ಯಗಳ ನಿಷೇಧಕ್ಕೆ ಒಳಗಾಗಿದ್ದಾರೆ. ರಬಾಡ ಇದೀಗ ಸರಣಿಯಲ್ಲಿ ಒಟ್ಟು 15 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 22ರ ಹರೆಯದ ರಬಾಡ ಸೋಮವಾರ ಅಮೋಘ ಪ್ರದರ್ಶನದಿಂದ ಗಮನ ಸೆಳೆದರು. 41 ರನ್ ಮುನ್ನಡೆಯೊಂದಿಗೆ 5 ವಿಕೆಟ್ ನಷ್ಟಕ್ಕೆ 180 ರನ್‌ನಿಂದ ಎರಡನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯ ತಂಡ ರಬಾಡ ದಾಳಿಗೆ ಸಿಲುಕಿ 79 ಓವರ್‌ಗಳಲ್ಲಿ ಕೇವಲ 239 ರನ್‌ಗೆ ಆಲೌಟಾಯಿತು. ರಬಾಡ ಎರಡನೇ ಇನಿಂಗ್ಸ್‌ನಲ್ಲಿ 54 ರನ್‌ಗೆ 6 ವಿಕೆಟ್ ಉಡಾಯಿಸಿದರು. ಪಂದ್ಯದಲ್ಲಿ ನಾಲ್ಕನೇ ಬಾರಿ 10 ಹಾಗೂ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದರು. ಈ ಸಾಹಸಕ್ಕೆ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಆಸ್ಟ್ರೇಲಿಯದ ಪರ ಮಿಚೆಲ್ ಮಾರ್ಷ್(39) ಹಾಗೂ ಟಿಮ್ ಪೈನ್(5) ಬ್ಯಾಟಿಂಗ್ ಮುಂದುವರಿಸಿದರು. ಮಾರ್ಷ್ ನಿನ್ನೆಯ ಮೊತ್ತಕ್ಕೆ ಕೇವಲ 6 ರನ್ ಗಳಿಸಿ ರಬಾಡ ಬೌಲಿಂಗ್‌ನಲ್ಲಿ ಕ್ಲೀನ್‌ಬೌಲ್ಡಾದರು. ಪ್ಯಾಟ್ ಕಮಿನ್ಸ್(5), ಮಿಚೆಲ್ ಸ್ಟಾರ್ಕ್(1)ವಿಕೆಟ್ ಉಡಾಯಿಸಿದ ರಬಾಡ ಆಸ್ಟ್ರೇಲಿಯಕ್ಕೆ ಆಘಾತ ನೀಡಿದರು.

ಲುಂಗಿ ಗಿಡಿ(2-24) ನಥಾನ್ ಲಿಯೊನ್‌ಗೆ(5)ಪೆವಿಲಿಯನ್ ಹಾದಿ ತೋರಿಸಿದರು. ಟಿಮ್ ಪೈನ್ ಹಾಗೂ ಜೋಶ್ ಹೇಝಲ್‌ವುಡ್(17)ಕೊನೆಯ ವಿಕೆಟ್‌ನಲ್ಲಿ 28 ರನ್ ಜೊತೆಯಾಟ ನಡೆಸಿದರು. ಅಂತಿಮವಾಗಿ ಆಸ್ಟ್ರೇಲಿಯ 239 ರನ್ ಗಳಿಸಿ ಆಲೌಟಾಯಿತು.

ದಕ್ಷಿಣ ಆಫ್ರಿಕ ತಂಡ ಗೆಲ್ಲಲು ಸುಲಭ ಸವಾಲು ಪಡೆದಿದ್ದರೂ ನಿರಂತರವಾಗಿ ವಿಕೆಟ್ ಕಳೆದುಕೊಂಡಿತು. ಆರಂಭಿಕ ಆಟಗಾರ ಡಿಯನ್ ಎಲ್ಗರ್(5) ಅಲ್ಪ ಮೊತ್ತಕ್ಕೆ ಔಟಾದರು. ಭೋಜನವಿರಾಮದ ಬಳಿಕ ಏಡೆನ್ ಮಾರ್ಕರಮ್(21), ಹಾಶಿಮ್ ಅಮ್ಲ(27) ಹಾಗೂ ಎಬಿಡಿ ವಿಲಿಯರ್ಸ್(28) ಪೆವಿಲಿಯನ್‌ಗೆ ವಾಪಸಾದರು. ನಾಯಕ ಎಫ್‌ಡು ಪ್ಲೆಸಿಸ್(2) ಹಾಗೂ ಟಿ.ಡಿ.ಬ್ರೂನ್(11) ತಂಡದ ಗೆಲುವನ್ನು ಖಾತ್ರಿಪಡಿಸಿದರು.

ಆಸ್ಟ್ರೇಲಿಯ ಡರ್ಬನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು 118 ರನ್‌ಗಳಿಂದ ಗೆದ್ದುಕೊಂಡಿದೆ. ಸರಣಿಯ ಕೊನೆಯ ಎರಡು ಪಂದ್ಯಗಳು ಕೇಪ್‌ಟೌನ್ ಹಾಗೂ ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿದೆ.

ಎರಡು ಟೆಸ್ಟ್ ಗಳಿಂದ ರಬಾಡ ಅಮಾನತು

ಎದುರಾಳಿ ತಂಡದ ಆಟಗಾರನೊಂದಿಗೆ ಅನುಚಿತ ಹಾಗೂ ಉದ್ದೇಶಪೂರ್ವಕವಾಗಿ ದೈಹಿಕ ಹಲ್ಲೆ ನಡೆಸಿ ಐಸಿಸಿ ನೀತಿ ಸಂಹಿತೆ ಲೆವೆಲ್-2 ಉಲ್ಲಂಘಿಸಿರುವುದು ಸ್ಪಷ್ಟವಾಗಿರುವ ಕಾರಣ ದಕ್ಷಿಣ ಆಫ್ರಿಕದ ವೇಗದ ಬೌಲರ್ ಕಾಗಿಸೊ ರಬಾಡರನ್ನು ಐಸಿಸಿ ಮುಂದಿನ ಎರಡು ಪಂದ್ಯಗಳಿಂದ ಅಮಾನತುಗೊಳಿಸಿದೆ.

ಐಸಿಸಿ ಶಿಸ್ತು ಸಮಿತಿಯ ವಿಚಾರಣೆಯ ಬಳಿಕ ರಬಾಡಗೆ ಪಂದ್ಯಶುಲ್ಕದಲ್ಲಿ 50 ಶೇ. ದಂಡ ಹಾಗೂ ಮೂರು ಡಿಮೆರಿಟ್ ಅಂಕಗಳನ್ನು ನೀಡಲಾಗಿದೆ.

ರಬಾಡ 24 ತಿಂಗಳಲ್ಲಿ 8 ಡಿಮೆರಿಟ್ ಪಾಯಿಂಟ್ಸ್ ಪಡೆದಿದ್ದು ಹೀಗಾಗಿ ಎರಡು ಪಂದ್ಯಗಳಿಂದ ಅಮಾನತುಗೊಂಡಿದ್ದಾರೆ. ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನ 52ನೇ ಓವರ್‌ನಲ್ಲಿ ಸ್ಟೀವ್ ಸ್ಮಿತ್‌ರತ್ತ ಧಾವಿಸಿದ ರಬಾಡ ಅವರ ಭುಜದ ಮೇಲೆ ಎರಗಿದ್ದರು. ಇದೇ ವೇಳೆ ಆಸೀಸ್ ಆಲ್‌ರೌಂಡರ್ ಮಿಚೆಲ್ ಮಾರ್ಷ್‌ಗೆ ಪಂದ್ಯಶುಲ್ಕದಲ್ಲಿ 20 ಶೇ. ದಂಡ ಹಾಗೂ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News