ವ್ಯಕ್ತಿಗಳಿಂದ ಸಮಾಜ, ಸಮಾಜದಿಂದ ವ್ಯಕ್ತಿಗಳು

Update: 2018-03-14 10:35 GMT

ಕಳೆದ 2016ರ ಆಗಸ್ಟ್ 17ರಿಂದ ಪ್ರತೀ ಬುಧವಾರ ನಿಮ್ಮ್‌ಂದಿಗೆ ನಾನು ಹುಟ್ಟಿ ಬೆಳೆದ, ಬಾಳಿದ, ಬಾಳುತ್ತಿರುವ ಊರುಗಳನ್ನು ಅಲ್ಲಿನ ಜನಪದರ ಜೊತೆಗೆ ಅವರು ನನ್ನವರಾದ ಬಗ್ಗೆ, ಊರುಗಳೆಲ್ಲಾ ನನ್ನೂರು ಆದ ಬಗ್ಗೆ ಅನುಭವಗಳನ್ನು ನನ್ನ ಗ್ರಹಿಕೆಯಲ್ಲಿ ಗ್ರಹಿಸಿ ಹಂಚಿಕೊಂಡಿದ್ದೇನೆ. ಒಂದರ್ಥದಲ್ಲಿ ಋಣಭಾರವನ್ನು ಇಳಿಸಿ ಹಗುರಾಗಿದ್ದೇನೆ. ಈ ಬರಹದ ಮೂಲಕ ಮತ್ತೆ ಕೆಲವರನ್ನು ಭೇಟಿಯಾಗಿ ಸಂತೋಷ ಪಡುವ ಅವಕಾಶಗಳೂ ಸಿಕ್ಕಿವೆ. ಇನ್ನು ಕೆಲವೊಂದು ಸಂದರ್ಭಗಳನ್ನು ನೆನಪಿಸುವ ವೇಳೆಯಲ್ಲಿ ಸಂಬಂಧಿತರಿಗೆ ನೋವಾಗದಂತೆ ಅವುಗಳ ಸಾಂದರ್ಭಿಕತೆಯನ್ನು ವಿಶ್ಲೇಷಿಸಿದ್ದೇನೆ. ಈ ಮೂಲಕ ಅವರ ಆಲೋಚನೆ, ಗ್ರಹಿಕೆಗಳ ಬಗ್ಗೆ ಅವರೇ ಚಿಂತಿಸುವುದಕ್ಕೆ ಅವರಿಗೆ ಅವಕಾಶ ಒದಗಿರಬಹುದು ಎಂದು ಭಾವಿಸುತ್ತೇನೆ. ಸುಮಾರು 81 ಅಂಕಣಗಳ ಹಿನ್ನೆಲೆಯಲ್ಲಿ ಮನುಷ್ಯರ ನಡುವೆ ಪ್ರೀತಿ, ಸ್ನೇಹ, ವಿಶ್ವಾಸ, ಸೌಹಾರ್ದಗಳನ್ನು ಬಯಸುವ ಮಂದಿ ನನಗೆ ಅನೇಕ ವೇದಿಕೆಗಳನ್ನು ಒದಗಿಸಿ ಗೌರವಿಸಿದ್ದಾರೆ. ಇದುವೇ ಬರಹಕ್ಕಿರುವ ಶಕ್ತಿ ಎಂದು ತಿಳಿದಿದ್ದೇನೆ.

ಒಂದು ಮಗು ತಾನು ಹೆತ್ತವರಿಂದ, ರಕ್ತ ಸಂಬಂಧಿಗಳಿಂದ ಪಡೆಯಬಹುದಾದುದನ್ನು ಡಾ. ಶಿವರಾಮ ಕಾರಂತರು ಹೀಗೆ ಗೇಲಿ ಮಾಡುತ್ತಾರೆ. ಏನೆಂದರೆ ಜೈವಿಕವಾಗಿ ಬರುವಂತಹದ್ದು ಕಾಯಿಲೆ ಮಾತ್ರ. ಗುಣ ಸ್ವಭಾವಗಳು ಮಗು ತಾನು ನೋಡಿದ್ದರಿಂದ, ಕೇಳಿದ್ದರಿಂದ ಕಲಿಯುವುದೇ ವಿನಃ ಜೈವಿಕವಲ್ಲ. ತಂದೆ ತಾಯಿ ಗುಣವಂತರಾದ ಮಾತ್ರಕ್ಕೆ ಅವರ ಮಕ್ಕಳು ಹಾಗಿರಲೇಬೇಕಾದುದು ಅನಿವಾರ್ಯವಲ್ಲ ಎಂಬುದು ಅವರ ವಾದ. ಹಾಗೆಯೇ ಸಭ್ಯರಲ್ಲದ ತಂದೆ ತಾಯಿಯ ಮಕ್ಕಳು ದುರ್ಗುಣಿಗಳಾಗಬೇಕಾಗಿಯೂ ಇಲ್ಲ ಎನ್ನುವುದನ್ನು ಅವರ ಅಭಿಪ್ರಾಯವನ್ನು ಅವರ ಮಾತುಗಳಲ್ಲೇ ಕೇಳಿದ್ದೇನೆ. ಹಾಗಾದರೆ ಮಗುವಿನ ಸುತ್ತಲ ಪರಿಸರ, ನೆರೆ ಹೊರೆ, ಊರು, ಊರಿನ ಸಾಂಸ್ಕೃತಿಕ, ಸಾಮಾಜಿಕ ರೀತಿ ನೀತಿಗಳು ಮಗುವಿನ ವ್ಯಕ್ತಿತ್ವ ನಿರ್ಮಾಣದಲ್ಲಿ ಪಾತ್ರವಹಿಸುತ್ತದೆ. ಆಗ ಅಲ್ಲಿ ತಂದೆ ತಾಯಿ, ಬಂಧುಗಳು, ಗುರು ಹಿರಿಯರು ಎಲ್ಲರೂ ಇರುತ್ತಾರೆ.

ಈ ಸಂದರ್ಭದಲ್ಲಿ ನೆನಪಾಗುವ ಒಂದು ಸಂದರ್ಭ ಹೀಗಿದೆ. ಖ್ಯಾತ ಕಾದಂಬರಿಕಾರ ಕೆ.ವಿ.ಅಯ್ಯರ್‌ರವರ ‘ರೂಪದರ್ಶಿ’ ಕಾದಂಬರಿಯಲ್ಲಿ ಬರುವ ಚಿತ್ರಕಾರ ಕಲಾವಿದ ಯೇಸುವಿನ ಜೀವನ ಚರಿತ್ರೆಯನ್ನು ಚಿತ್ರದ ಮೂಲಕ ಬಿಡಿಸುವುದಕ್ಕಾಗಿ ಬಾಲ್ಯದ ಹಸುಗೂಸಿಗೆ ರೂಪದರ್ಶಿಯನ್ನು ಹುಡುಕಿಕೊಂಡಾಗ ದೈವಿಕ ಕಳೆಯುಳ್ಳ ಮಗು ರೂಪದರ್ಶಿಯಾಗಿ ದೊರೆಯುತ್ತದೆ. ಮುಂದೆ ಅದೇ ಹಿನ್ನೆಲೆಯಲ್ಲಿ ಕಲಾವಿದ ತನ್ನ ಪ್ರತಿಭೆಯಿಂದ ಯೇಸುವಿನ ಮುಂದಿನ ಚಿತ್ರಗಳನ್ನು ರಚಿಸುವಲ್ಲಿ ಯಶಸ್ವಿಯಾಗುತ್ತಾನೆ. ಯೇಸುವಿನ ಕೊನೆಯ ದಿನಗಳ ಚಿತ್ರಗಳನ್ನು ಬಿಡಿಸುವಲ್ಲಿ ಯೇಸುವನ್ನು ಹಿಡಿದು ಕೊಡುವ ಕಲ್ಲು ಹೃದಯದ ವ್ಯಕ್ತಿಯ ಚಿತ್ರಣಕ್ಕೆ ರೂಪದರ್ಶಿಯನ್ನು ಆತ ಹುಡುಕುತ್ತಾನೆ. ಆಗ ಆತನಿಗೆ ಸಿಕ್ಕಿದ ರೂಪದರ್ಶಿ ಯಾರೆಂದರೆ ಪ್ರಾರಂಭದಲ್ಲಿ ದೇವ ಹಸುಳೆ ಯೇಸುವಿನ ಚಿತ್ರಕ್ಕೆ ರೂಪದರ್ಶಿಯೇ ಆಗಿದ್ದ. ಅಂದರೆ ಬಾಲ್ಯದಲ್ಲಿ ಅಷ್ಟೊಂದು ಮುಗ್ಧ ಸ್ನಿಗ್ಧ ಭಾವದ ಹಸುಳೆ ದುಷ್ಟನಾದುದು ಚಿತ್ರಕಾರನಲ್ಲಿ ಆಶ್ಚರ್ಯವನ್ನುಂಟು ಮಾಡುತ್ತದೆ. ಹಾಗೆಯೇ ಇನ್ನೊಂದು ವಡ್ಡಾರಾಧನೆಯದ್ದು ಎಂಬ ನೆನಪು.

ಎರಡು ಸೋದರ ಗಿಳಿಗಳನ್ನು ಮಾರಾಟಕ್ಕೆ ತಂದವನ ಒಬ್ಬ ಗ್ರಹಸ್ಥ ಒಂದು ಗಿಳಿಯನ್ನು ಕೊಂಡು ಮನೆಗೆ ಒಯ್ಯುತ್ತಾನೆ. ಪಂಜರದಲ್ಲಿಟ್ಟು ಪ್ರೀತಿಯಿಂದ ಸಾಕುತ್ತಾನೆ. ಗಿಳಿ ಮಾತು ಕಲಿಯುತ್ತದೆ ಎನ್ನುವುದು ಇಲ್ಲಿ ಮುಖ್ಯವಾದ ಅಂಶ. ಆತನ ಮನೆಯ ಗಿಳಿ ಮನೆ ಮಂದಿಯಂತೆ ಮನೆಗೆ ಬಂದವರನ್ನು ಬನ್ನಿ ಬನ್ನಿ ಎಂದು ಸ್ವಾಗತಿಸುತ್ತದೆಯಂತೆ. ಹಾಲು ಕೊಡಿ, ಹಣ್ಣು ಕೊಡಿ ಎಂದು ಹೇಳುತ್ತದೆಯಂತೆ. ಅದೇ ಗಿಳಿಯ ಜೊತೆಯ ಇನ್ನೊಂದು ಗಿಳಿಯನ್ನು ಒಬ್ಬ ಮಾಂಸ ಮಾರಾಟಗಾರ ಕೊಂಡು ತನ್ನ ಮನೆಗೆ ಒಯ್ದಿರುತ್ತಾನೆ. ಆ ಮನೆಯ ಗಿಳಿಯನ್ನೂ ಆತ ಚೆನ್ನಾಗಿ ಪ್ರೀತಿಯಿಂದಲೇ ಸಾಕಿದ್ದಾನೆ. ಆದರೆ ಗಿಳಿ ಆಡುವ ಮಾತುಗಳು ಆ ಮನೆಯಿಂದ ಕೇಳಿ ಕಲಿತದ್ದು. ಯಾರಾದರೂ ಬಂದಾಗ ಮನೆ ಯಜಮಾನನಲ್ಲಿ ಕಡಿ, ಕೊಲ್ಲು, ಕೊಚ್ಚು ಎಂದು ಹೇಳುತ್ತಿತ್ತಂತೆ. ಒಂದೇ ತಂದೆ ತಾಯಿಯ ಈ ಮರಿ ಗಿಳಿಗಳ ಸ್ವಭಾವ ಯಾಕೆ ಹೀಗೆ ಬೇರೆಯಾಗಿತ್ತು ಎಂಬ ಪ್ರಶ್ನೆಗೆ ನಮ್ಮ ಸುತ್ತಮುತ್ತಲ ವಾತಾವರಣ, ಸಂಸ್ಕಾರ, ಸಂಸ್ಕೃತಿಗಳೇ ಕಾರಣ ಎನ್ನುವುದು ಆ ಕತೆಯ ನೀತಿ. ಈ ಎರಡೂ ಉದಾಹರಣೆಗಳಿಂದ ನಾವು ಅರ್ಥೈಸಿಕೊಳ್ಳಬೇಕಾದುದು ನಾವು ನಮ್ಮ ಸುತ್ತಮುತ್ತ ಕಾಣುವ ಪ್ರಪಂಚ, ಸಮಾಜ ಹೇಗಿರುತ್ತದೆಯೋ ಅದರಂತೆ ನಾವು ಆಗುತ್ತೇವೆ ಎನ್ನುವುದು ಸಾಮಾನ್ಯವಾದ ನಂಬಿಕೆ ಮತ್ತು ಹಾಗೆ ಅನ್ನುವುದು ಬದುಕಿನಲ್ಲಿ ಬಹುಸುಲಭ. ಹಾಗಾದರೆ ಸಮಾಜ ಕೆಟ್ಟದ್ದಾಗಿದ್ದರೆ ಅಲ್ಲಿನ ಮಂದಿಯೂ ಕೆಟ್ಟವರಾಗುವುದು ಬಹುಸಹಜ. ಎಳೆಯ ಪೀಳಿಗೆ ತಪ್ಪು ದಾರಿ ಹಿಡಿದಿದ್ದಾರೆ ಎಂದರೆ ಅದರ ಹೊಣೆಯನ್ನು ಸಮಾಜದ ಹಿರಿಯರು ಹೊತ್ತುಕೊಳ್ಳಲೇಬೇಕು. ಆದ್ದರಿಂದಲೇ ಸಂಸ್ಕೃತಿ ಉಳಿಸಿ ಎಂದಾಗ, ಧಾರ್ಮಿಕತೆಯಿಂದ ಸುಸಂಸ್ಕೃತರಾಗುತ್ತೇವೆ ಎನ್ನುವ ಮಾತುಗಳನ್ನು ವರ್ತಮಾನದಲ್ಲಿ ಕೇಳುವಾಗ ನಿಜವೇ ಅನ್ನಿಸುತ್ತದೆ.

ಯಾಕೆಂದರೆ ಇಂದು ಯಾವ ಕ್ಷೇತ್ರದಲ್ಲೂ ಉತ್ತಮ ಮಾದರಿಗಳು ನಮ್ಮ ಎಳೆಯ ಪೀಳಿಗೆಗೆ ದೊರೆಯಲಾರದ ಸ್ಥಿತಿ ನಿರ್ಮಾಣವಾಗುತ್ತಿದೆ. ಎಳೆಯರ ಬದುಕು ಸ್ವತಃ ಅವರ ನಿಯಂತ್ರಣದಲ್ಲಿ ಇಲ್ಲದಿರುವ, ಇನ್ನೊಬ್ಬರ ನಿಯಂತ್ರಣಕ್ಕೆ ಒಳಗಾಗಿದ್ದರೆ ಅದು ಗುಲಾಮಗಿರಿಯೇ ಅಲ್ಲವೇ? ದೇಶಕ್ಕೆ ಸ್ವಾತಂತ್ರ ದೊರೆತು 70 ವರ್ಷಗಳಾಗಿವೆ ಎನ್ನುವುದು ಪ್ರಪಂಚದ ದೇಶಗಳ ನೆಲೆಯಲ್ಲಿ ಯೋಚಿಸಿದಾಗ ನಮ್ಮ ಪ್ರಜಾಪ್ರಭುತ್ವ ಉಳಿದಿದೆ ಎಂದು ಸಮಾಧಾನಪಟ್ಟುಕೊಳ್ಳಬಹುದಾದರೂ ಪ್ರಜಾಪ್ರಭುತ್ವದ ಆಶಯಗಳನ್ನು ರಕ್ಷಿಸುವ ಹೊಣೆ ಎಲ್ಲರದ್ದೂ ಆಗಿದೆಯಲ್ಲಾ? ಈ ನಿಟ್ಟಿನಲ್ಲಿ ಸ್ವಾತಂತ್ರೋತ್ತರದಲ್ಲಿ ಹುಟ್ಟಿದ ನನಗೆ ಸ್ವಾತಂತ್ರ ಹೋರಾಟದ ದಿನಗಳಲ್ಲಿ ಬದುಕಿದ, ಅದನ್ನು ಅನುಭವಿಸಿದ ಹಿರಿಯರು ಸ್ವಾತಂತ್ರ ದೊರೆತ ಬಳಿಕ ದೇಶ ಕಟ್ಟುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅಂತಹ ಗುರು ಹಿರಿಯರ ಮಾರ್ಗದರ್ಶನದಲ್ಲಿ ಬೆಳೆದ ನಮಗೆ ಆ ನೆನಪುಗಳು ಕಳೆದು ಹೋದುದರ ಬಗ್ಗೆ ಹಳಹಳಿಕೆಯಲ್ಲ್ಲ. ಇಂದಿನ ಕಲುಷಿತ ಸಾಮಾಜಿಕ ವಾತಾವರಣದಲ್ಲಿ ಆ ನೆನಪುಗಳು ನಮ್ಮನ್ನು ಆಶಾವಾದಿಗಳನ್ನಾಗಿಸುವುದರಲ್ಲಿ ಉತ್ಪ್ರೇಕ್ಷೆಯಿಲ್ಲ. ಆ ಕಾರಣದಿಂದಲೇ ನನ್ನ ನೆನಪುಗಳು ನನಗೆ ಆತ್ಮವಿಶ್ವಾಸವನ್ನೂ ಹೆಚ್ಚಿಸಿದೆ ಎನ್ನುವುದು ನನ್ನ ಅನುಭವ. ಓದಿದ ಹಿರಿಯರಿಗೆ, ಸಮಕಾಲೀನರಿಗೆ ಯಾಕೆ ಹೀಗಾಗಿದೆ ಎಂಬ ಪ್ರಶ್ನೆ ಉಂಟಾದರೆ ಹಾಗೆಯೇ ಆ ಪ್ರಶ್ನೆಗೆ ತಾವು ಜಡಭರತರಾಗಿ ತಟಸ್ಥರಾಗಿರುವುದು ತಪ್ಪು ಎನ್ನುವುದರೊಂದಿಗೆ ರಚನಾತ್ಮಕವಾದ ಅಹಿಂಸಾತ್ಮಕವಾದ ದಾರಿಗಳನ್ನು ಕಂಡುಕೊಳ್ಳುವುದಕ್ಕೆ ಈ ಬರಹಗಳು ಪ್ರೇರಣೆಯಾದರೆ ಅದಕ್ಕಿಂತ ಬೇರೆ ಸಾರ್ಥಕ್ಯ ಇಲ್ಲ.

ಜೀವನ ಪ್ರೀತಿಗೆ ಜಾತಿ, ಧರ್ಮಗಳು ಅಡ್ಡಿಯಾಗದೆ ಹಿರಿಯರು ಬಾಳಿ ಬದುಕಿದ ಸೌಹಾರ್ದದ ದಿನಗಳನ್ನು ಮತ್ತೆ ಕಾಣುವುದಕ್ಕೆ ನಾವು ಬದ್ಧರಾದರೆ ಅದುವೇ ಸಾಹಿತ್ಯಕ್ಕಿರುವ ಬದ್ಧತೆ. ಬರಹಗಾರನಿಗೆ, ಸಾಹಿತಿಗೆ ಇರುವ ಬದ್ಧತೆ ಸಾಮಾಜಿಕವಾದುದು. ಸಾಹಿತ್ಯ ಎನ್ನುವುದು ಸಮಾಜದ ಪ್ರತಿಬಿಂಬ ಮಾತ್ರವಲ್ಲ ಗತಿಬಿಂಬವೂ ಹೌದು. ಇಂದು ನಮ್ಮ ಸಮಾಜದಲ್ಲಿ ಅನುಮಾನದ ಬೀಜಗಳನ್ನು ಬಿತ್ತಿ ನಾವು ನಾವೇ ಹೊಡೆದಾಟ ನಡೆಸಿಕೊಂಡು ಸಾಯುತ್ತಿರುವುದನ್ನು ನೋಡಿ ಸಂತೋಷಪಡುವ ಸ್ಥಿತಿ ಇದ್ದರೆ ಅದು ಅತ್ಯಂತ ಕ್ರೂರವಾದುದು. ಬದಲಿಗೆ ನಾವು ನಂಬಿದ ಹಾದಿಯಲ್ಲಿ ಪ್ರಾಮಾಣಿಕವಾದ ಶ್ರದ್ಧೆಯಿಂದ ಬಹುತ್ವದೊಳಗಿನ ಏಕತೆಯನ್ನು ಅರಿಯಲು, ಅನುಭವಿಸಲು ಸಾಧ್ಯವಾದರೆ ಅದುವೇ ಅಧ್ಯಾತ್ಮ. ಅಧ್ಯಾತ್ಮ ಎನ್ನುವುದು ಸತ್ತ ಮೇಲಿನ ಪರಲೋಕಕ್ಕೆ ಸೇರಿದ್ದಲ್ಲ. ಇಲ್ಲೇ ಬದುಕಿ ಅನುಭವಿಸಬೇಕಾದ ಅರಿವು. ಸರ್ವಜನಾಂಗದ ಶಾಂತಿಯ ತೋಟವನ್ನು ಹಾಳುಗೆಡವದೆ ಮನುಜ ಮತವೇ ವಿಶ್ವಪಥಕ್ಕೆ ದಾರಿಯಾಗುವ ನಿಟ್ಟಿನಲ್ಲಿ ನನ್ನ ಈ ಬರಹಗಳು ಸಾಲು ಹಣತೆಗಳೆಂದು ನಂಬಿದ್ದೇನೆ. ನನ್ನ ಅಪ್ಪ ಯಾವಾಗಲೂ ಹೇಳುತ್ತಿದ್ದ ಮಾತು, ‘‘ಉಪಕಾರ ಮಾಡಬೇಕಾಗಿರುವುದು ಧರ್ಮ. ಆದರೆ ಕೆಲವರಿಗೆ ಅದು ಸಾಧ್ಯವಾಗದಷ್ಟು ತೊಂದರೆಗಳು ಅವರಿಗೆ ಸ್ವಂತಕ್ಕೇ ಇರಬಹುದು. ಆದರೆ ಉಪದ್ರವ ತೊಂದರೆ ಅನ್ಯಾಯ ಮಾಡದೆ ಇರುವುದು ನಮ್ಮಿಂದ ಸಾಧ್ಯವಾಗುವ ಬಹುದೊಡ್ಡ ಕೆಲಸ, ನಿರ್ಧಾರ ಮತ್ತು ಇದು ಸರಳ, ಸುಲಭ’’ ಎನ್ನುವುದು ಬಹುಶಃ ಇಂದಿನ ಜನ ಉಪಕಾರ ಮಾಡಲಾಗದೆ ಇದ್ದರೂ ಉಪದ್ರವ ಮಾಡದೆ ಉಳಿದರೆ ಅದುವೇ ಮನುಷ್ಯತ್ವ ಎನ್ನುವ ಕಾಲಘಟ್ಟಕ್ಕೆ ಬಂದು ತಲುಪಿದ್ದೇವೆ.

ಸಾಹಿತ್ಯದಲ್ಲಿ ಕನಸುಗಾರಿಕೆ ಎಂದರೆ ಒಂದು ಆದರ್ಶವಾದ ಕಲ್ಪನೆ. ನಮ್ಮ ಸ್ವಾತಂತ್ರಪೂರ್ವ ಹಾಗೂ ಸ್ವಾತಂತ್ರೋತ್ತರದ ಕಾಲದ ನವೋದಯ ಕಾಲದ ಆದರ್ಶ ಸಿದ್ಧಾಂತದ ಅನುಭವಿಗಳು, ಕನಸುಗಾರರು ನಾವು. ಅದೇ ಮುಂದೆ ಸಾಹಿತ್ಯದಲ್ಲಿ ಬಂದ ಅಸ್ತಿತ್ವವಾದ ಹೀಗೆ ಬದುಕನ್ನು ಛಿದ್ರಗೊಳಿಸುತ್ತದೆ ಎನ್ನುವುದರ ಅರಿವು ಅಸ್ತಿತ್ವವಾದಿಗಳಿಗಾದರೂ ಇರಲಾರದು. ಅಸ್ತಿತ್ವವಾದ ಎನ್ನುವುದು ಇಂದು ಸಾಮಾಜಿಕವಾಗಿ ಪ್ರತ್ಯೇಕತಾವಾದವಾಗಿ, ಹಕ್ಕಿಗಾಗಿ ಹೋರಾಡುವ ನೆಲೆಗಳಾಗಿ, ಮನುಷ್ಯತ್ವವನ್ನು ಪ್ರಕೃತಿಯಿಂದ ದೂರವಾಗಿಸಿದೆ. ಮನುಷ್ಯ ಮನುಷ್ಯರಿಂದ ದೂರವಾಗಿಸಿದೆ. ನಮ್ಮ ಅಸ್ತಿತ್ವ ಎನ್ನುವುದು ಈ ಭೂಮಿ, ಗಾಳಿ, ನೀರು, ಆಕಾಶ, ಸೂರ್ಯ, ಚಂದ್ರರ ಅಸ್ತಿತ್ವಗಳು ಇದ್ದಾಗ ಮಾತ್ರ ಎನ್ನುವುದು ನಮ್ಮ ಬದುಕಿನ ಅನುಭವದ ಪ್ರಾಕೃತಿಕ ವಿಕೋಪಗಳು ಸಾರಿ ಸಾರಿ ಹೇಳುತ್ತಿವೆ.

ಮನುಷ್ಯನ ವಿಕಾಸ ಎನ್ನುವುದು ಪ್ರಕೃತಿಯ ನಾಶದಿಂದ ಉಂಟಾಗಲಾರದು ಎನ್ನುವ ಸತ್ಯಗಳನ್ನು ವಿಜ್ಞಾನಿಗಳು ಹೇಳಿದರೆ ಅಂತರಂಗದ ಶುದ್ಧಿ ಇಲ್ಲದ ಬಹಿರಂಗದ ಧಾರ್ಮಿಕತೆಗಳಿಗೆ ಅರ್ಥವಿಲ್ಲ ಎನ್ನುವುದನ್ನು ಕವಿಗಳು ಸಾರುತ್ತಲೇ ಬಂದಿದ್ದಾರೆ. ಅಂತಹ ಸಾಹಿತ್ಯ ನೀಡುವ ಸಂಸ್ಕಾರ ಜೀವನ ಪ್ರೀತಿಯನ್ನು ಕಲಿಸುತ್ತದೆ. ಜೀವಪರ ಸಮಾಜಮುಖಿ ಚಿಂತನೆಗಳನ್ನು ಬೆಳೆಸುತ್ತದೆ. ಇದನ್ನು ನಮ್ಮ ಎಳೆಯರಿಗೆ ದಾಟಿಸುವ ಕೆಲಸ ಎಲ್ಲಾ ನಿಟ್ಟಿನಲ್ಲೂ ನಡೆಯಬೇಕಾಗಿದೆ. ನಮ್ಮ ತಂದೆ ತಾಯಿ, ಶಾಲಾ ಕಾಲೇಜುಗಳ ಶಿಕ್ಷಕರು ನಮಗೆ ಜೀವನ ವೌಲ್ಯಗಳನ್ನು ಉಪದೇಶಿಸದೆ ಬದುಕಿ ತೋರಿದವರು. ಅನೇಕ ಹಿರಿಯರು ಅನಕ್ಷರಸ್ಥರಾಗಿದ್ದರೂ ಅವಿವೇಕಿಗಳಲ್ಲ, ಅಜ್ಞಾನಿಗಳಲ್ಲ ಎನ್ನುವ ಸತ್ಯದೊಂದಿಗೆ ಅವರೆಲ್ಲ ಹೃದಯವಂತರು, ಮಾನವೀಯತೆಯ ಮನುಷ್ಯರಾಗಿದ್ದರಲ್ಲವೇ? ಅವರ ಋಣಭಾರವನ್ನು ಈ ಅಂಕಣಗಳ ಮೂಲಕ ನೆನಪಿಸಿಕೊಳ್ಳುತ್ತಾ ನನ್ನ ಬಾಲ್ಯ ಕಾಲದ ನನ್ನೂರಿನ ಸೌಹಾರ್ದ, ಪ್ರೀತಿ, ವಿಶ್ವಾಸಗಳು ನನ್ನೊಂದಿಗೆ ಮತ್ತೆ ಜೊತೆಯಾಗುತ್ತಾ ಸುತ್ತಲ ಅಸಹನೀಯ ಸಾಮಾಜಿಕ ಬದುಕನ್ನು ಸಹನೀಯಗೊಳಿಸುವಲ್ಲಿ ನನಗೆ ಸಹಕಾರಿಯಾಯಿತು. ಒಂದೂವರೆ ವರ್ಷಗಳ ನಿಮ್ಮಾಂದಿಗೆ ಸಂವಾದ ನಡೆಸಿದ್ದೇನೆ ಎನ್ನುವುದು ನನಗೆ ಆಶ್ಚರ್ಯವನ್ನುಂಟು ಮಾಡಿದೆ. ಬದುಕಿನ ಅನುಭವಗಳಲ್ಲಿ ಕಂಡ ಸ್ಥಿತ್ಯಂತರಗಳ ನೆನಪುಗಳಲ್ಲಿ ಇನ್ನೂ ಕಾಡುವ ಹಾಗೆಯೇ ಕಾಪಿಡುವ ನೆನಪುಗಳು ಇನ್ನಷ್ಟು ಇವೆ. ಅವುಗಳಿಗೂ ಅಕ್ಷರದ ಭಾಗ್ಯ ದೊರೆಯಲಿ ಎನ್ನುವ ಆಶಯವನ್ನು ಕಾದು ನೋಡೋಣ. ಸದ್ಯಕ್ಕೆ ಸಣ್ಣ ವಿರಾಮ. ಎಲ್ಲರಿಗೂ ವಂದನೆಗಳು. ಈ ಅಂಕಣ ಬರಹಕ್ಕೆ ಅವಕಾಶ ನೀಡಿದ ವಾರ್ತಾಭಾರತಿ ದೈನಿಕ ಪತ್ರಿಕೆಯ ಪ್ರಧಾನ ಸಂಪಾದಕರಿಗೆ, ಸಂಪಾದಕ ಬಳಗಕ್ಕೆ, ಹಾಗೆಯೇ ಎಲ್ಲಾ ಸಿಬ್ಬಂದಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ತಿಳಿಸುತ್ತಾ ಓದಿದ ಎಲ್ಲಾ ಓದುಗರಿಗೂ ಕೃತಜ್ಞತೆಗಳು.

Writer - ಚಂದ್ರಕಲಾ ನಂದಾವರ

contributor

Editor - ಚಂದ್ರಕಲಾ ನಂದಾವರ

contributor

Similar News