ಲಂಚ ಆರೋಪದ ಆಡಿಯೋ ಕ್ಲಿಪ್ ವೈರಲ್: ಖಟ್ಟರ್ ಸರಕಾರಕ್ಕೆ ಸಂಕಷ್ಟ

Update: 2018-03-14 11:09 GMT

ಚಂಡೀಗಢ, ಮಾ.14: ಹರ್ಯಾಣದ ಸ್ಟಾಫ್ ಸೆಲೆಕ್ಷನ್ ಕಮಿಷನ್ ಅಧ್ಯಕ್ಷ ಭರತ್ ಭೂಷಣ್ ಭಾರ್ತಿ ಲಂಚ ಪಡೆದು ವಿವಿಧ ಹುದ್ದೆಗಳಿಗೆ ನೇಮಕ ಮಾಡುತ್ತಿದ್ದಾರೆಂಬ ಆರೋಪಗಳ ಹಿನ್ನೆಲೆಯಲ್ಲಿ ಅಲ್ಲಿನ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ವಿಪಕ್ಷಗಳಿಂದ ಭಾರೀ ತರಾಟೆಗೊಳಗಾಗಿದ್ದಾರೆ. 

ಇದೇ ಆರೋಪಕ್ಕೆ ಸಂಬಂಧಿಸಿದ್ದು ಎನ್ನಲಾದ 14 ನಿಮಿಷಗಳ ಆಡಿಯೋ ಕ್ಲಿಪ್ ಒಂದು ಹರಿದಾಡುತ್ತಿದ್ದು, ಅದರಲ್ಲಿ ಪೆಹೋವ ಮುನಿಸಿಪಲ್ ಸಮಿತಿ ಅಧ್ಯಕ್ಷ ಅಶೋಕ್ ಸಿಂಗ್ಲಾ ರಾಜ್ಯದ ಮಾಜಿ ಬಿಜೆಪಿ ಸಚಿವ ಬಲಬೀರ್ ಸೈನಿ ಅವರೊಂದಿಗೆ ಮಾತನಾಡುತ್ತಾ, ತಾನು ಈ ಹುದ್ದೆ ಪಡೆಯಲು ಭಾರ್ತಿ ಪುತ್ರನಿಗೆ 45 ಲಕ್ಷ ರೂ. ನೀಡಿದ್ದಾಗಿ ಹೇಳಿರುವುದು ವಿವಾದಕ್ಕೀಡಾಗಿದೆ. ಭಾರ್ತಿ ಪುತ್ರ ಇತರ ಮೂವರನ್ನು ಸಮಿತಿ ಸದಸ್ಯರನ್ನಾಗಿಸಲು ಹೆಚ್ಚುವರಿ 10 ಲಕ್ಷ ರೂ. ಪಡೆದಿದ್ದರೆಂದೂ ದೂರಲಾಗಿದೆ. ಈ ಆಡಿಯೋ ಕ್ಲಿಪ್ ಕಳೆದ ತಿಂಗಳು ಬಹಿರಂಗಗೊಂಡಿದ್ದರೂ, ಇಂಡಿಯನ್ ನ್ಯಾಷನಲ್ ಲೋಕ ದಳದ ಅಭಯ್ ಚೌತಾಲ ರಾಜ್ಯ ವಿಧಾನಸಭೆಯಲ್ಲಿ ಈ ವಿಚಾರವನ್ನು ಎತ್ತಿದ ನಂತರ ಇನ್ನಷ್ಟು ವಿವಾದಕ್ಕೀಡಾಗಿದೆ.

ವಿಪಕ್ಷಗಳ ಪ್ರತಿಭಟನೆಗೆ ಮಣಿದು ವಿಜಿಲೆನ್ಸ್ ಡಿಜಿಯಿಂದ ತನಿಖೆ ನಡೆಸುವುದಾಗಿ ಖಟ್ಟರ್ ಮಂಗಳವಾರ ತಿಳಿಸಿದ್ದು, ಒಂದು ತಿಂಗಳೊಳಗೆ ವರದಿ ನೀಡಲಿದೆ ಎಂದು ಭರವಸೆ ನೀಡಿದ್ದಾರೆ. ಇಂಡಿಯನ್ ನ್ಯಾಷನಲ್ ಲೋಕ ದಳ  ಈ ಪ್ರಕರಣದ ಸಿಬಿಐ ತನಿಖೆಗೆ ಆಗ್ರಹಿಸಿದ್ದರೆ, ಕಾಂಗ್ರೆಸ್ ಸದನ ಸಮಿತಿ ಮುಖಾಂತರ ತನಿಖೆಗೆ ಕೋರಿತ್ತು. ಆದರೆ ಎರಡೂ ಬೇಡಿಕೆಗಳನ್ನು ಮುಖ್ಯಮಂತ್ರಿ ತಿರಸ್ಕರಿಸಿದ್ದಾರೆ.

ಈ ನಿರ್ದಿಷ್ಟ ಆಡಿಯೋ ಕ್ಲಿಪ್ ಹೊರ ಬಂದ ನಂತರ ಇನ್ನೊಂದು ಆಡಿಯೋ ಕ್ಲಿಪ್ ಲೀಕ್ ಆಗಿತ್ತು. ಅದರಲ್ಲಿ ಸಿಂಗ್ಲಾ ತಾನು ಮದ್ಯದ ನಶೆಯಲ್ಲಿದ್ದುದಾಗಿ ಹಾಗೂ ಹಾಗೆ ಹೇಳುವಂತೆ ತನ್ನ ಮೇಲೆ ಒತ್ತಡವಿತ್ತೆಂದು, ಮಾನಹಾನಿಗೈಯ್ಯಲು  ಈ ರೀತಿ ಮಾಡಿದ್ದಾಗಿ ಹೇಳಿದ್ದರು ಎಂದು ಖಟ್ಟರ್ ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News