ಸಚಿವರ ಕಚೇರಿಗಳಲ್ಲಿರುವ ಕಡತಗಳಿಗೆ ಮುಕ್ತಿ ಎಂದು?

Update: 2018-03-14 18:44 GMT

ಮಾನ್ಯರೇ,

ಸರಕಾರದ ಅವಧಿ ಇನ್ನು ಕೆಲವೇ ತಿಂಗಳಲ್ಲಿ ಮುಗಿಯುತ್ತದೆ. ಆದರೂ ಸಹ ಹಲವಾರು ಮಂತ್ರಿಗಳ ಕಚೇರಿಗಳಲ್ಲಿ ಮತ್ತು ಅವರ ಗೃಹ ಕಚೇರಿಗಳಲ್ಲಿ ಸಾವಿರಾರು ಕಡತಗಳು ಹಾಗೆಯೇ ಬಿದ್ದಿವೆ.

ಪ್ರಭಾವವಿಲ್ಲದ ವ್ಯಕ್ತಿಗಳ ಕಡತಗಳು, ಹಣದ ಪ್ರಭಾವವನ್ನು ಬೀರಲು ವಿಫಲವಾದ ಕಡತಗಳು ಮಂತ್ರಿಗಳ ಕಚೇರಿಗಳಲ್ಲಿ ಹಾಗೆಯೇ ಉಳಿದುಕೊಂಡಿವೆ. ಮಾನ್ಯ ಮುಖ್ಯಮಂತ್ರಿಯವರು ಕೂಡಲೇ ಎಲ್ಲಾ ಮಂತ್ರಿಗಳಿಗೆ ತಮ್ಮಲ್ಲಿ ಉಳಿದುಕೊಂಡಿರುವ ಕಡತಗಳನ್ನು ವಿಲೇವಾರಿ ಮಾಡುವಂತೆ ಸೂಚಿಸಬೇಕು.

ಕೆಲವೊಂದು ತುರ್ತು ಗಮನಿಸಬೇಕಾದ ಕಡತಗಳು ಕೂಡಾ ಸಚಿವರ ಕಚೇರಿಗಳಲ್ಲಿ ಹಾಗೆಯೇ ಉಳಿದುಕೊಂಡಿದೆ. ವಿಶೇಷವಾಗಿ ಪ್ರಾಥಮಿಕ ಶಿಕ್ಷಣ ಇಲಾಖೆಯ ಸಚಿವರ ಗೃಹಕಚೇರಿಯಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳವರು ವಿವಿಧ ರೀತಿಯ ಅನುಮೋದನೆಗಾಗಿ ಸಲ್ಲಿಸಿರುವ ಕಡತಗಳು ಧೂಳು ತಿನ್ನುತ್ತಾ ಹಾಗೆಯೇ ಉಳಿದುಕೊಂಡಿವೆ. ಮಂತ್ರಿ ಮಹೋದಯರ ವಿಶೇಷ ಸಾರ್ವಜನಿಕ ಸಂಪರ್ಕಾಧಿಕಾರಿಗಳು ದಯೆ ತೋರಿಸದೆ ಕಡತ ವಿಲೇವಾರಿಯಾಗುತ್ತಿಲ್ಲ. ವಿಧಾನ ಪರಿಷತ್ ಸದಸ್ಯರು ಅಥವಾ ಸಾರ್ವಜನಿಕ ಕ್ಷೇತ್ರದ ಪ್ರಭಾವಿಗಳ ಮಾತಿಗೂ ಕವಡೆ ಕಿಮ್ಮತ್ತು ಸಿಗುವುದಿಲ್ಲ. ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ ಸೌಲಭ್ಯ ಇತ್ಯಾದಿ ಇಲಾಖೆಗಳಲ್ಲಿನ ಸಚಿವರು ಕಡತ ವಿಲೇವಾರಿ ಮಾಡದಿದ್ದರೆ ಜನತೆಗೆ ಹೇಗೆ ಅನುಕೂಲ ವಾಗುತ್ತದೆ?

ಯಾವುದೋ ಕೆಲಸಕ್ಕೆ ಬಾರದ ಕೆಲವು ವಿಚಾರಗಳಿಗೆ ಮಾತ್ರ ಸಕಾಲ ಯೋಜನೆಯನ್ನು ಅನ್ವಯಿಸುವ ಸರಕಾರ, ಕಡತ ವಿಲೇವಾರಿಗೂ ಸಕಾಲ ಯೋಜನೆಯಡಿಯಲ್ಲಿ ಸಮಯವನ್ನು ನಿಗದಿಪಡಿಸಲಿ.

 

Similar News