ದಡಾರ ಮತ್ತು ರುಬೆಲ್ಲಾ ಸಂಪೂರ್ಣವಾಗಿ ನಿರ್ಮೂಲವಾಗಲಿ

Update: 2018-03-15 18:41 GMT

ದಡಾರ ಮತ್ತು ರುಬೆಲ್ಲಾ ರೋಗವು ವೈರಾಣುವಿನಿಂದ ಹರಡುವ ಸೋಂಕಾಗಿರುತ್ತದೆ. ದಡಾರ ರೋಗವನ್ನು ಮೀಸಿಯಲ್ಸ್ ಅಥವಾ ರೂಬಿಯೋಲಾ ಎಂದು ಆಂಗ್ಲಭಾಷೆಯಲ್ಲಿ ಕರೆಯುತ್ತಾರೆ. ಮನುಷ್ಯನಲ್ಲಿ ಮಾತ್ರ ಕಂಡು ಬರುವ ದಡಾರ ರೋಗವು, ಬಹಳ ಸಾಂಕ್ರಾಮಿಕ ರೋಗವಾಗಿದ್ದು, ಉಸಿರಾಟದ ಮೂಲಕ ಅಥವಾ ನೇರ ಸಂಪರ್ಕದಿಂದ ಹರಡುತ್ತದೆ. ಮೀಸಿಯಲ್ಸ್ ಎಂಬ ವೈರಾಣುವಿನಿಂದ ಹರಡುವ ಕಾರಣದಿಂದ ಈ ರೋಗಕ್ಕೆ ಮೀಸಿಯಲ್ಸ್ ಎಂದೂ ಕರೆಯುತ್ತಾರೆ. ಸಾಮಾನ್ಯವಾಗಿ ಆರಂಭದಲ್ಲಿ ಜ್ವರ, ಮೈಕೈ ನೋವು, ಕೆಮ್ಮು, ನೆಗಡಿ ಮತ್ತು ಕಣ್ಣು ಕೆಂಪಾಗುವುದು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಇದಾದ ನಾಲ್ಕೈದು ದಿನಗಳ ಬಳಿಕ ಮೈಮೇಲೆ ಚಿಕ್ಕ ಚಿಕ್ಕ ಕೆಂಪು ಗುಳ್ಳೆಗಳು ಕಾಣಿಸಿಕೊಳ್ಳುತ್ತದೆ. ಜ್ವರ ಸಾಮಾನ್ಯವಾಗಿ 400 ಡಿಗ್ರಿ ಸೆಂಟಿಗ್ರೇಡ್‌ವರೆಗೂ (104º F) ಬರಬಹುದು.

ವೈರಾಣು ಸಂಪರ್ಕದ ನಂತರ 7-14 ದಿನಗಳಲ್ಲಿ ರೋಗದ ಲಕ್ಷಣ ಕಾಣಿಸಿಕೊಳ್ಳುತ್ತದೆ. ಮೈಮೇಲೆ ಗುಳ್ಳೆಗಳು ಬರುವುದಕ್ಕಿಂತ 4 ದಿನಗಳ ಮೊದಲು ಮತ್ತು ಗುಳ್ಳೆ ಬಂದ ಬಳಿಕ 4 ದಿನಗಳ ವರೆಗೆ ರೋಗ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ರೋಗದ ಲಕ್ಷಣಗಳು ಬಂದ ಒಂದೆರಡು ದಿನಗಳಲ್ಲಿ ಬಾಯಿಯೊಳಗೆ ಚಿಕ್ಕ ಚಿಕ್ಕ ಬಿಳಿಯಾದ ಕಲೆಗಳು ಅಥವಾ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ಇದನ್ನು ಕೋಪ್ಲಿಕ್ ಸ್ಪಾಟ್ ಎಂದು ಕರೆಯುತ್ತಾರೆ. ಇದಾದ ಬಳಿಕ ಮುಖದಲ್ಲಿ ಕೆಂಪಗಿನ ಚಟ್ಟೆಯಾದ ಕಲೆಗಳು ಕಾಣಿಸಿಕೊಂಡು ದೇಹದೆಲ್ಲೆಡೆ ಹರಡುತ್ತದೆ. ಇದಾದ 3 ರಿಂದ 4 ದಿನಗಳಲ್ಲಿ ರೋಗಿ ಸಂಪೂರ್ಣವಾಗಿ ಗುಣಮುಖವಾಗುತ್ತಾನೆ. ದಡಾರ ಬಂದವರಲ್ಲಿ ಹೆಚ್ಚಿನವರು ಯಾವುದೇ ಚಿಕಿತ್ಸೆ ಇಲ್ಲದೆ ಶೀಘ್ರ ಗುಣಮುಖರಾಗುತ್ತಾರೆ. ಆದರೆ 5 ವರ್ಷಗಳಿಗಿಂತ ಚಿಕ್ಕ ಮಕ್ಕಳಲ್ಲಿ ದಡಾರ ಮಾರಣಾಂತಿಕವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಮೆದುಳಿನ ಉರಿಯೂತ, ಶ್ವಾಸಕೋಶದ ಉರಿಯೂತ (ನ್ಯೂಮೋನಿಯಾ), ಕಿವಿಯ ಸೋಂಕು, ಬೇಧಿ, ಕುರುಡುತನ ಮಂತಾದವುಗಳು ಉಂಟಾಗುವ ಸಾಧ್ಯತೆ ಇದೆ. ಹೆಚ್ಚಾಗಿ ನ್ಯೂಮೋನಿಯಾ ಸಾವಿಗೆ ಕಾರಣವಾಗುವ ಸಾಧ್ಯತೆ ಇದೆ.

ದಡಾರ ಚಿಕಿತ್ಸೆ ಹೇಗೆ?:

ಸಾಮಾನ್ಯ ವೈರಲ್ ಜ್ವರದಂತೆ ಈ ರೋಗವನ್ನು ಚಿಕಿತ್ಸೆ ಮಾಡತಕ್ಕದ್ದು. ಸಾಕಷ್ಟು ದ್ರವಾಹಾರ, ಒಆರ್‌ಎಸ್, ನಿರ್ಜಲೀಕರಣವಾಗದಂತೆ ಸಾಕಷ್ಟು ನೀರು, ವಿಟಮಿನ್ ಪೋಷಕಾಂಶಯುಕ್ತ ಆಹಾರ ಮತ್ತು ಜ್ವರವನ್ನು ಕಡಿಮೆ ಮಾಡುವ ಔಷಧಿ ನೀಡತಕ್ಕದ್ದು. ಶ್ವಾಸಕೋಶದ ಸೋಂಕು ತಡೆಯುವ ನಿಟ್ಟಿನಲ್ಲಿ ಆ್ಯಂಟಿಬಯೋಟಿಕ್ ಬಳಕೆ ಅವಶ್ಯ. ವಿಟಮಿನ್ ‘ಎ’ಯ ಕೊರತೆ ನೀಗಲು ವಿಟಮಿನ್ ‘ಎ’ಯನ್ನು ಔಷಧಿ ರೂಪದಲ್ಲಿ ನೀಡಲಾಗುತ್ತದೆ.

ಲಸಿಕೆ ಹೇಗೆ:
ಜಾಗತಿಕವಾಗಿ ವರ್ಷಕ್ಕೆ 20 ಮಿಲಿಯನ್ ಮಂದಿ ಈ ದಡಾರ ರೋಗದಿಂದ ಬಳಲುತ್ತಾರೆ. ಹೆಚ್ಚಿನವರು ಬಡರಾಷ್ಟಗಳಾದ ಆಫ್ರಿಕಾ ಮತ್ತು ಏಶ್ಯಾ ಖಂಡದಲ್ಲಿರುವ ಸಣ್ಣ ಮಕ್ಕಳಲ್ಲಿ ಈ ರೋಗ ಕಂಡುಬರುತ್ತದೆ. 1990ರಲ್ಲಿ ಐದೂವರೆ ಲಕ್ಷ ಮಂದಿ, 2013ರಲ್ಲಿ 1 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ಭಾರತ ದೇಶವೊಂದರಲ್ಲಿಯೇ ವರ್ಷದಲ್ಲಿ 50,000 ಮಂದಿ ಈ ದಡಾರ ರೋಗದಲ್ಲಿ ಸಾವನ್ನಪ್ಪುತ್ತಾರೆ. ಲಸಿಕೆ ಮುಖಾಂತರ ಸುಲಭವಾಗಿ ತಡೆಗಟ್ಟಬಹುದಾದ ರೋಗವಾಗಿರುವುದರಿಂದ, ಮಕ್ಕಳಲ್ಲಿ ಲಸಿಕೆ ಹಾಕಿ ರೋಗ ತಡೆಗಟ್ಟುವುದರಲ್ಲಿಯೇ ಜಾಣತನ ಅಡಗಿದೆ.

MMR ಎಂಬ ಲಸಿಕೆಯನ್ನು ದಡಾರ, ಮಂಪ್ಸ್ ಮತ್ತು ರುಬೆಲ್ಲಾ ರೋಗ ತಡೆಯಲು 12 ತಿಂಗಳ ಸಮಯದಲ್ಲಿ ನೀಡಲಾಗುತ್ತದೆ. ಆ ಬಳಿಕ 4 ರಿಂದ 5 ವರ್ಷದ ನಡುವೆ ಇನ್ನೊಂದು MMR ಲಸಿಕೆ ನೀಡಿ ರೋಗಗಳಿಂದ ರಕ್ಷಣೆ ಪಡೆಯಬೇಕಾಗುತ್ತದೆ. ಸಾಮಾನ್ಯವಾಗಿ 12 ತಿಂಗಳ ಒಳಗೆ ಯಕೃತ್ತಿನ ಬೆಳವಣಿಗೆಯಾಗದಿರುವುದರಿಂದ ಲಸಿಕೆಯನ್ನು 12 ತಿಂಗಳಿಗೆ ಕೊಡುತ್ತಾರೆ. 12 ತಿಂಗಳವರೆಗೆ ತಾಯಿಯಿಂದ ಬಳುವಳಿಯಾಗಿ ಬಂದ ರೋಗ ನಿರೋಧಕ ಶಕ್ತಿ ಸಾಕಾಗುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಇತ್ತೀಚೆಗೆ ಋ್ಕ್ಖಿ ಎಂಬ ಲಸಿಕೆ ಬಂದಿದ್ದು, ಇದರಿಂದ ಮೀಸಿಯಲ್ಸ್, ರುಬೆಲ್ಲಾ, ಮಂಪ್ಸ್ ಮತ್ತು ಚಿಕನ್ ಪಾಕ್ಸ್ ರೋಗಕ್ಕೂ ರಕ್ಷಣೆ ದೊರೆಯುತ್ತದೆ. ಈ ಲಸಿಕೆಯನ್ನು 12 ರಿಂದ 15 ತಿಂಗಳಲ್ಲಿ ಮತ್ತು 4 ರಿಂದ 6 ವರ್ಷದಲ್ಲಿ ಎರಡು ಬಾರಿ ನೀಡಲಾಗುತ್ತದೆ. ಈ ಲಸಿಕೆ ಪಡೆದವರಿಗೆ ನಾಲ್ಕೂ ರೋಗಗಳಿಂದ ಸಂಪೂರ್ಣ ರಕ್ಷಣೆ ದೊರೆಯುತ್ತದೆ.

ರುಬೆಲ್ಲಾ:
ರುಬೆಲ್ಲಾ ರೋಗ ರುಬೆಲ್ಲಾ ಎಂಬ ವೈರಾಣುವಿನಿಂದ ಹರಡುತ್ತದೆ. ಈ ರೋಗವನ್ನು ಜರ್ಮನ್ ಮೀಸಿಯಲ್ಸ್ ಅಥವಾ ಮೂರು ದಿನಗಳ ಮೀಸಿಯಲ್ಸ್ ಎಂದೂ ಕರೆಯುತ್ತಾರೆ. ದಡಾರ ರೋಗಕ್ಕೆ ಹೋಲಿಸಿದಲ್ಲಿ ಈ ರುಬೆಲ್ಲಾ ತುಂಬಾ ಕಡಿಮೆ ತೀವ್ರತೆಯನ್ನು ಹೊಂದಿರುತ್ತದೆ. ಈ ರೋಗ ಮಕ್ಕಳಲ್ಲಿ ಮತ್ತು ದೊಡ್ಡವರಲ್ಲಿಯೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ದಡಾರದಲ್ಲಿ ಇದ್ದಂತೆ ಪೂರ್ವಭಾವಿಯಾಗಿ ಜ್ವರ ಕಾಣಿಸಿಕೊಳ್ಳದೆ, ನೇರವಾಗಿ ಮೈಮೇಲೆ ಗುಳ್ಳೆಗಳು ಕಾಣಿಸಿಕೊಳ್ಳಬಹುದು. ಜ್ವರ ಬಂದರೂ ತೀವ್ರತೆ ಕಡಿಮೆ ಇರುತ್ತದೆ. ಅದೇ ರೀತಿ ಮೈಮೇಲಿನ ಗುಳ್ಳೆಗಳ ಸಾಂದ್ರತೆ ಕೂಡಾ ಕಡಿಮೆ ಇರುತ್ತದೆ. ವೈರಾಣವಿನ ಸೋಂಕು ತಗಲಿ ಎರಡು ವಾರದ ಬಳಿಕ ಮುಖದಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳಬಹುದು.

ದಡಾರದಲ್ಲಿರುವಂತೆ ದಟ್ಟವಾದ ಗುಳ್ಳೆಗಳು ಇರುವುದಿಲ್ಲ. ನಾಲ್ಕೈದು ದಿನಗಳಲ್ಲಿ ಈ ಗುಳ್ಳೆಗಳು ತನ್ನಿಂತಾನೇ ವಾಸಿಯಾಗುತ್ತದೆ. ಕೆಲವೊಮ್ಮೆ ತುರಿಕೆ ಇರುವ ಸಾಧ್ಯತೆ ಇರುತ್ತದೆ. ದೊಡ್ಡವರಲ್ಲಿ ರುಬೆಲ್ಲಾ ಸೋಂಕು ತಗುಲಿದಲ್ಲಿ ಸಂಧಿವಾತ, ಗಂಟುನೋವು, ದುಗ್ಥರಸಗ್ರಂಥಿಗಳ ಊತ (ಕುತ್ತಿಗೆಯ ಸುತ್ತ) ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ. ಗರ್ಭಿಣಿಯರಲ್ಲಿ ಈ ರುಬೆಲ್ಲಾ ಸೋಂಕು ತಗುಲಿದ್ದಲ್ಲಿ (ಗರ್ಭಧರಿಸಿದ ಮೊದಲ ಎರಡು ತಿಂಗಳಲ್ಲಿ) ಹುಟ್ಟುವ ಮಕ್ಕಳಲ್ಲಿ ತೀವ್ರತರವಾದ ವಿಕಲಾಂಗತೆ, ಕಿವುಡುತನ, ಕಣ್ಣಿನ ಪೊರೆ, ಮಂದಬುದ್ಧಿ, ಹೃದಯ ಮತ್ತು ಮೆದುಳಿನ ಅಂಗ ವೈಕಲ್ಯಗಳಾಗುವ ಸಾಧ್ಯತೆ ಇರುತ್ತದೆ. ‘ರುಬೆಲ್ಲಾ’ ಎಂಬ ಶಬ್ದ ಲ್ಯಾಟಿನ್ ಮೂಲದ್ದಾಗಿದ್ದು, ಸಣ್ಣ ಕೆಂಪು ಎಂಬರ್ಥವನ್ನು ಹೊಂದಿದೆ. 1814ರಲ್ಲಿ ಜರ್ಮನಿಯ ವೈದ್ಯರು ಈ ರೋಗವನ್ನು ಗುರುತಿಸಿ, ದಡಾರಕ್ಕಿಂತ ಭಿನ್ನ ಎಂದು ತಿಳಿಸಿಕೊಟ್ಟಿರುವುದರಿಂದ ಈ ರೋಗವನ್ನು ಜರ್ಮನ್ ಮೀಸಿಯಲ್ಸ್ ಎಂದೂ ಕರೆಯುತ್ತಾರೆ.

ಕೊನೆ ಮಾತು:
ಮುಂದುವರಿದ ರಾಷ್ಟಗಳಾದ ಅಮೆರಿಕ, ಜರ್ಮನಿ, ಯುರೋಪ್ ದೇಶಗಳಲ್ಲಿ ಉತ್ತಮ ಮೂಲಭೂತ ಸೌಲಭ್ಯಗಳ ಲಭ್ಯತೆ ಮತ್ತು ಜನರಲ್ಲಿನ ಹೆಚ್ಚಿನ ಜಾಗೃತಿಯ ಕಾರಣದಿಂದಾಗಿ ದಡಾರ ಮತ್ತು ರುಬೆಲ್ಲಾ ರೋಗ ಸಂಪೂರ್ಣವಾಗಿ ನಿರ್ಮೂಲನ ಆಗಿದೆ ಎಂದು ಹೇಳಿದರೂ ತಪ್ಪಾಗಲಿಕ್ಕಿಲ್ಲ. ಆದರೆ ಬಡತನ, ಅನಕ್ಷರತೆ, ಮೂಢನಂಬಿಕೆ, ಮೂಲಭೂತ ಸೌಕರ್ಯಗಳಾದ ಶುದ್ಧ ನೀರು, ಗಾಳಿ, ಆಹಾರಗಳ ಕೊರತೆಯಿಂದಾಗಿ ಆಫ್ರಿಕಾ ಖಂಡದ ಮತ್ತು ಏಶ್ಯಾ ಖಂಡದ ಬೆಳೆಯುತ್ತಿರುವ ರಾಷ್ಟ್ರಗಳಲ್ಲಿ ಇನ್ನೂ ಈ ರೋಗ ಮಾರಣಾಂತಿಕವಾಗಿ ಪರಿಣಮಿಸುತ್ತಿರುವುದು ಖೇದಕರ. ಈ ನಿಟ್ಟಿನಲ್ಲಿ ಭಾರತ ಸರಕಾರ ಮೊದಲನೇ ಹಂತದ ದಡಾರ ಮತ್ತು ರುಬೆಲ್ಲಾ ಲಸಿಕೆ ಅಭಿಯಾನ ಆರಂಭಿಸಿದ್ದು, ಪೋಲಿಯೋ ನಿರ್ಮೂಲನೆಯಾದಂತೆ ದಡಾರ ಮತ್ತು ರುಬೆಲ್ಲಾ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡುವ ಘನ ಉದ್ದೇಶ ಹೊಂದಿದೆ.

ಈ ಅಭಿಯಾನದಲ್ಲಿ ಬಹುತೇಕ ರಾಜ್ಯಗಳಲ್ಲಿ 9 ತಿಂಗಳಿಂದ 15 ವರ್ಷದ ಎಲ್ಲ ಮಕ್ಕಳಿಗೂ MR ಲಸಿಕೆ ಎಂಬ ದಡಾರ ಮತ್ತು ರುಬೆಲ್ಲಾ ರೋಗದ ನಿರ್ಮೂಲನ ಲಸಿಕೆ ಹಾಕುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯವೊಂದರಲ್ಲಿಯೇ 9 ತಿಂಗಳಿಂದ 15 ವರ್ಷದೊಳಗಿನ ಸುಮಾರು 1.5 ಕೋಟಿ ಮಕ್ಕಳಿದ್ದು, ಎಲ್ಲರಿಗೂ ಲಸಿಕೆಯ ಆವಶ್ಯಕತೆ ಇರುತ್ತದೆ. ಈ ಹಿಂದೆ ಅವರು MMR ಲಸಿಕೆ ಪಡೆದಿದ್ದರೂ ಅಥವಾ ದಡಾರ ಹಾಗೂ ರುಬೆಲ್ಲಾ ರೋಗದಿಂದ ಬಳಲಿದ್ದರೂ, ಈ ಪ್ರಾಯದ ಎಲ್ಲಾ ಮಕ್ಕಳಿಗೆ ಈ MR ಲಸಿಕೆಯ ಅಭಿಯಾನದಲ್ಲಿ, ಲಸಿಕೆ ಹಾಕತಕ್ಕದ್ದು. ಅಪೌಷ್ಟಿಕತೆ ಇರುವ ಮಕ್ಕಳಿಗೆ ಹೆಚ್ಚಿನ ಸಾವು ನೋವು ಆಗುವ ಸಾಧ್ಯತೆ ಇರುವುದರಿಂದ MMR ಲಸಿಕೆಯನ್ನು ಅತೀ ಅಗತ್ಯವಾಗಿ ನೀಡತಕ್ಕದ್ದು. ಈ ಲಸಿಕೆ ಬಹಳ ಪರಿಣಾಮಕಾರಿ ಲಸಿಕೆಯಾಗಿದ್ದು, ಈ ಲಸಿಕೆ ಪಡೆಯುವುದರಿಂದ ಜೀವನ ಪರ್ಯಂತ ದಡಾರ ಮತ್ತು ರುಬೆಲ್ಲಾ ರೋಗದಿಂದ ರಕ್ಷಣೆ ದೊರಕುತ್ತದೆ.

Writer - ಡಾ. ಮುರಲೀ ಮೋಹನ್, ಚೂಂತಾರು

contributor

Editor - ಡಾ. ಮುರಲೀ ಮೋಹನ್, ಚೂಂತಾರು

contributor

Similar News