ಕಾಶ್ಮೀರದಲ್ಲಿ ರಾಜಕೀಯ ಲಾಭಕ್ಕಾಗಿ ಕೋಮುಭಾವನೆ ಕೆರಳಿಸುವ ಯತ್ನ
ಶ್ರೀನಗರ, ಮಾ.16: ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿರುವ ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಯಶವಂತ್ ಸಿನ್ಹಾ ನೇತೃತ್ವದ ಕನ್ಸಂರ್ಡ್ ಸಿಟಿಝನ್ಸ್ ಗ್ರೂಪ್ (ಸಿಸಿಜಿ) ತಂಡವು ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ಹದಗೆಟ್ಟಿದೆ ಎಂದು ತಿಳಿಸಿದೆ. ಈ ಕುರಿತು ವರದಿ ಸಿದ್ಧಪಡಿಸಿರುವ ತಂಡವು, ರಾಜಕಾರಣಿಗಳು ರಾಜಕೀಯ ಲಾಭಕ್ಕೋಸ್ಕರ ಕೋಮು ಭಾವನೆಯನ್ನು ಕೆರಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದೆ.
ಕೆಲವು ರಾಜಕೀಯ ಪಕ್ಷಗಳ ಸಣ್ಣಪುಟ್ಟ ರಾಜಕೀಯ ಲಾಭಕ್ಕಾಗಿ ಜಮ್ಮುವಿನಲ್ಲಿ ಕೋಮು ಭಾವನೆಯನ್ನು ಬಿತ್ತಲಾಗುತ್ತಿದೆ. ಇದೇ ವೇಳೆ, ಕಣಿವೆಯಲ್ಲಿ ನಿರಾಶ್ರಿತರಾಗಿರುವ ಕಾಶ್ಮೀರಿ ಪಂಡಿತರು ಮತ್ತು ಪಶ್ಚಿಮ ಪಾಕಿಸ್ತಾನದಿಂದ 1947ರಲ್ಲಿ ಜಮ್ಮುವಿಗೆ ಆಗಮಿಸಿದ್ದ ನಿರಾಶ್ರಿತರ ಸಮಸ್ಯೆಗಳ ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರದಿ ತಿಳಿಸಿದೆ. ಮಾಜಿ ವಿತ್ತ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಯಶವಂತ್ ಸಿನ್ಹಾ, ವಾಯುಪಡೆಯ ನಿವೃತ್ತ ವೈಸ್ ಮಾರ್ಶಲ್ ಕಪಿಲ್ ಕಕ್, ಸಮಾಲೋಚನೆ ಮತ್ತು ಸಮನ್ವಯ ಕೇಂದ್ರದ ಕಾರ್ಯಕಾರಿ ಕಾರ್ಯದರ್ಶಿ ಸುಶೋಭಾ ಬರ್ವೆ ಮತ್ತು ಪತ್ರಕರ್ತ ಭರತ್ ಭೂಷಣ್ ಅವರನ್ನೊಳಗೊಂಡ ತಂಡ ಜಮ್ಮು ಮತ್ತು ಕಾಶ್ಮೀರದ ವಿವಿಧ ಭಾಗಗಳಿಗೆ ಭೇಟಿ ನೀಡಿ ಗಡಿ ಸಮೀಪ ಶೆಲ್ ದಾಳಿಗೆ ತುತ್ತಾದ ಜನರು ಹಾಗೂ ಇತರ ಗುಂಪುಗಳೊಂದಿಗೆ ಸಮಾಲೋಚನೆ ನಡೆಸುವ ಮೂಲಕ ಈ ವರದಿಯನ್ನು ಸಿದ್ಧಪಡಿಸಿದ್ದಾರೆ. 2015ಕ್ಕೆ ಹೋಲಿಸಿದರೆ 2017ರಲ್ಲಿ ಕದನ ವಿರಾಮ ಉಲ್ಲಂಘಿಸಿ ನಡೆದ ದಾಳಿಗಳಲ್ಲಿ ಸತ್ತವರ ಸಂಖ್ಯೆ ಆರು ಪಟ್ಟು ಹೆಚ್ಚಾಗಿದೆ. ಆದರೆ 2018ರ ಮೊದಲ ತಿಂಗಳಲ್ಲೇ ಗಡಿಯಾಚೆಗಿನ ಗುಂಡು ಹಾರಾಟದಲ್ಲಿ ಸತ್ತವರ ಸಂಖ್ಯೆ 2017ರ ಇಡೀ ವರ್ಷದಲ್ಲಿ ಮಡಿದವರ ಸಂಖ್ಯೆಗೆ ಸಮವಾಗಿದೆ ಎಂದು ವರದಿ ತಿಳಿಸಿದೆ. ಭಾರತದ ಗಡಿಭಾಗದ 40,000 ಜನರನ್ನು ತೆರವುಗೊಳಿಸಿ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಶಾಲಾ-ಕಾಲೇಜುಗಳು ಸರಿಯಾಗಿ ಕಾರ್ಯಾಚರಿಸಲು ಈ ದಾಳಿಗಳು ಅಡ್ಡಿಯಾಗಿವೆ. ವ್ಯವಹಾರಗಳು ಸರಿಯಾಗಿ ನಡೆಯುತ್ತಿಲ್ಲ. ಜೀವಹಾನಿಯ ಜೊತೆಗೆ ಆಸ್ತಿಪಾಸ್ತಿಗಳಿಗೂ ವ್ಯಾಪಕ ಹಾನಿ ಸಂಭವಿಸುತ್ತಿದೆ. ಪಶುಗಳು ಸಾವನ್ನಪ್ಪಿದ್ದು ಜಲ ಮತ್ತು ವಿದ್ಯುತ್ ಸರಬರಾಜು ಕೂಡಾ ಭಾದಿಸಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.